ಸಿದ್ದಾಪುರ: ಪಾಲಕರು ಮಕ್ಕಳಿಗೆ ಅತ್ಯುತ್ತಮ ಶಿಕ್ಷಣ ಹಾಗೂ ಗುಣಮಟ್ಟದ ಸಂಸ್ಕಾರ ನೀಡಿದರೆ ಸಮಾಜ ಅಭಿವೃದ್ಧಿಯಾಗುತ್ತದೆ. ಮಕ್ಕಳು ಶಿಕ್ಷಣ ಮುಗಿಸಿ ಕೇವಲ ಹಣಗಳಿಸುವ ಯಂತ್ರವಾಗದೇ ಸಮಾಜದ ವಿವಿಧ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಹಾಗೆ ಪಾಲಕರು ಹಾಗೂ ಸಮಾಜದ ಪ್ರಮುಖರು ಮುಖ್ಯ ಪಾತ್ರವಹಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಟಿ.ನಾಯ್ಕ ಹೇಳಿದರು.
ಅವರು ಭಾನುವಾರ ಪಟ್ಟಣದ ರಾಘವೇಂದ್ರ ಮಠದ ಸಭಾಂಗಣದಲ್ಲಿ ತಾಲೂಕು ಆರ್ಯ,ಈಡಿಗ, ನಾಮಧಾರಿ-ಬಿಲ್ಲವ ನೌಕರರ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಸಾಧಕರನ್ನು ಸನ್ಮಾನಿಸಿ ಮಾತನಾಡಿದರು. ಈ ವೇಳೆ ಬ್ರಹ್ಮರ್ಷಿ ಶ್ರೀ ನಾರಾಯಣ ಗುರು ಅವರ 163ನೇ ಜನ್ಮದಿನೋತ್ಸವದ ಅಂಗವಾಗಿ ನಾರಾಯಣ ಗುರು ಅವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು. ಜೊತೆಗೆ ಎಸ್‍ಎಸ್‍ಎಲ್‍ಸಿ, ಪಿಯುಸಿ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಒಂದುನೂರಾ ಐದು ವಿದ್ಯಾರ್ಥಿಗಳನ್ನು ಹಾಗೂ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ತಾಲೂಕು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜಿ.ಐ.ನಾಯ್ಕ ಗೋಳಗೋಡ ಅಧ್ಯಕ್ಷತೆ ವಹಿಸಿದ್ದರು. ಶಿರಸಿ ಡಿಎಫ್‍ಓ ಯು.ಡಿ.ನಾಯ್ಕ, ಜಿಲ್ಲಾ ನಾಮಧಾರಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಡಾ.ನಾಗೇಶ ಎಚ್.ನಾಯ್ಕ ಕಾಗಾಲ, ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ.ಜಿ.ನಾಯ್ಕ ಹಣಜೀಬೈಲ್, ಎಪಿಎಂಸಿ ಅಧ್ಯಕ್ಷ ಕೆ.ಜಿ.ನಾಗರಾಜ, ಜಿ.ಪಂ.ಸದಸ್ಯ ನಾಗರಾಜ ನಾಯ್ಕ ಬೇಡ್ಕಣಿ, ಸುಮಂಗಲಾ ನಾಯ್ಕ,ಬಿಇಒ ಡಿ.ಆರ್.ನಾಯ್ಕ, ಡಾ.ಲಕ್ಷ್ಮೀಕಾಂತ ನಾಯ್ಕ, ಸಂತೋಷ ಕೆ,ಸಿ.ಎನ್.ನಾಯ್ಕ, ವಿ.ಎನ್.ನಾಯ್ಕ, ವೀರಭದ್ರ ನಾಯ್ಕ, ಸಿ.ಡಿ.ನಾಯ್ಕ, ಎಂ.ಕೆ.ನಾಯ್ಕ ಕಡಕೇರಿ, ಜಿ.ಎಸ್.ಪ್ರಶಾಂತ ಇತರರಿದ್ದರು.