ಅಹಮದಾಬಾದ್: 2002ರ ಗೋಧ್ರಾ ಹತ್ಯಾಕಾಂಡ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ 11 ಮಂದಿ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಮಾರ್ಪಡಿಸಿ ಗುಜರಾತ್ ಹೈಕೋರ್ಟ್ ಸೋಮವಾರ ಆದೇಶ ಹೊರಡಿಸಿದೆ.
ಗೋದ್ರಾ ಸಾಬರಮತಿ ಎಕ್ಸ್ ಪ್ರೆಸ್ ರೈಲು ಬೋಗಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ 11 ದೋಷಿಗಳ ಶಿಕ್ಷೆಯನ್ನು ಎತ್ತಿಹಿಡಿದಿರುವ ಗುಜರಾತ್ ಹೈಕೋರ್ಟ್, 11 ಆರೋಪಿಗಳಿಗೆ ವಿಧಿಸಲ್ಪಟ್ಟಿದ್ದ ಮರಣದಂಡನೆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಇಳಿಕೆ ಮಾಡಿದೆ. ಅಂತೆಯೇ ಪ್ರಕರಣದಲ್ಲಿ 63 ಮಂದಿಯನ್ನು ಖುಲಾಸೆಗೊಳಿಸಿದ್ದನ್ನು ಪ್ರಶ್ನಿಸಿ ಗುಜರಾತ್ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ಪೀಠ ವಜಾಗೊಳಿಸಿದೆ.
2011ರಲ್ಲಿ ಎಸ್ ಐಟಿ ನ್ಯಾಯಾಲಯ ನೀಡಿದ್ದ ತೀರ್ಪನ್ನು ಮರು ಪರಿಶೀಲಿಸುವಂತೆ ಸಲ್ಲಿಕೆ ಮಾಡಲಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ಅಂತಿಮ ತೀರ್ಪು ನೀಡಿರುವ ಗುಜರಾತ್ ಹೈಕೋರ್ಟ್, ಸಬರಮತಿ ರೈಲಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿದಂತೆ 63 ಮಂದಿಯನ್ನು ಖುಲಾಸೆಗೊಳಿಸಿದ ಎಸ್ ಐಟಿ ತೀರ್ಪನ್ನು ಎತ್ತಿ ಹಿಡಿದಿದೆ. ಇದೇ ವೇಳೆ ಅಂದಿನ ಗುಜರಾತ್ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಅಂದು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿತ್ತು ಎಂದು ಕಿಡಿಕಾರಿದೆ. ಅಲ್ಲದೆ ಗಲಭೆಯಲ್ಲಿ ಸಾವಿಗೀಡಾದ ಮತ್ತು ಗಾಯಾಳು ಸಂತ್ರಸ್ತರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ ನೀಡುವಂತೆ ಹೈಕೋರ್ಟ್ ಸರ್ಕಾರಕ್ಕೆ ಆದೇಶ ನೀಡಿದೆ.
2002ರ ಫೆಬ್ರುವರಿ 27ರಂದು ಸಾಬರಮತಿ ಎಕ್ಸ್ ಪ್ರೆಸ್ ರೈಲಿನ ಮೇಲೆ ದಾಳಿ ಮಾಡಿದ್ದ ದುಷ್ಕರ್ಮಿಗಳು ರೈಲಿನ ಎಸ್ 6 ಬೋಗಿಗೆ ಬೆಂಕಿ ಹಚ್ಚಲಾಗಿತ್ತು, ಘಟನೆಯಲ್ಲಿ 59 ಕರಸೇವಕರು ಸಜೀವ ದಹನವಾಗಿದ್ದರು. ಗೋದ್ರೋತ್ತರ ಹಿಂಸಾಚಾರ ಪ್ರಕರಣದಲ್ಲಿ ಸುಮಾರು 1200 ಮಂದಿ ನಾಗರಿಕರ ಹತ್ಯೆಯಾಗಿತ್ತು. ಪ್ರಕರಣ ಸಂಬಂಧ ಕೋರ್ಟ್ 11 ದೋಷಿಗಳಿಗೆ ಮರಣದಂಡನೆ, 20 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ, 63 ಮಂದಿಯನ್ನು ಖುಲಾಸೆಗೊಳಿಸಿತ್ತು.