ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದಿನಕರ ಕೆ. ಶೆಟ್ಟಿ ಅವರು ಇಂದು ನಾಡುಮಾಸ್ಕೇರಿ ಪಂಚಾಯತ್ ವ್ಯಾಪ್ತಿಯ ಕಡಮೆ, ಬಾವಿಕೊಡ್ಲ, ದುಬ್ಬನಸಸಿ, ಹಾರುಮಾಸ್ಕೇರಿ, ನಾಡುಮಾಸ್ಕೇರಿ, ಗಂಗೆಕೊಳ್ಳ, ಗಂಗಾವಳಿ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ಸಭೆಯನ್ನು ಕೈಗೊಂಡರು.
ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅಭ್ಯರ್ಥಿ ದಿನಕರ ಶೆಟ್ಟಿಯವರು ನಾಡುಮಾಸ್ಕೇರಿ, ಹನೆಹಳ್ಳಿ, ತೊರ್ಕೆ ಹಾಗೂ ಗೋಕರ್ಣ ಗ್ರಾಮಪಂಚಾಯತ್ ಭಾಗದ ಅಭಿವೃದ್ಧಿಗಾಗಿ ಬಿಜೆಪಿ ಸರ್ಕಾರ ಕಾರ್ಯರೂಪಕ್ಕೆ ತಂದಿರುವ ಯೋಜನೆಗಳ ಕುರಿತು ಸವಿಸ್ತಾರವಾಗಿ ವಿವರಿಸಿದರು. ನಾಡುಮಾಸ್ಕೇರಿ ಪಂಚಾಯತ್ ವ್ಯಾಪ್ತಿಯ ಗಂಗೆಕೊಳ್ಳದಲ್ಲಿ 21ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಕಿತ್ತೂರು ಚೆನ್ನಮ್ಮ ವಸತಿಶಾಲೆ, ಹೊಸಹಿತ್ಲ ದಿಂದ ಜೋಗನಗುಡ್ಡ-ಗಂಗಾವಳಿ ವರೆಗೆ 3.50 ಕೋಟಿ ಅನುದಾನದಲ್ಲಿ ರಸ್ತೆ ನಿರ್ಮಾಣ, ಗಂಗೆಕೊಳ್ಳದಿಂದ ಗಂಗಾವಳಿ ವರೆಗೆ 16.00 ಕೋಟಿ ವೆಚ್ಚದಲ್ಲಿ ಖಾರ್ಲ್ಯಾಂಡ್ ನಿರ್ಮಾಣ, ಗಂಗೆಕೊಳ್ಳ ದಲ್ಲಿ ಸಮುದ್ರ ತಡೆಗೋಡೆ ನಿರ್ಮಾಣಕ್ಕೆ 10.00 ಕೋಟಿ, ರುದ್ರಪಾದದಲ್ಲಿ ಉಪ್ಪುನೀರು ಕೃಷಿ ಭೂಮಿಗೆ ನುಗ್ಗುವುದನ್ನು ತಡೆಗಟ್ಟಲು ಕ್ರಸ್ಟ್ ಗೇಟ್ ನಿರ್ಮಾಣ, ಗೋಕರ್ಣ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ವಿವೇಕಶಾಲೆ ಯೋಜನೆಯಡಿಯಲ್ಲಿ 10 ವರ್ಗಕೋಣೆಗಳ ನಿರ್ಮಾಣ, ಹೀಗೆ ಇನ್ನೂ ಹಲವಾರು ಮಹತ್ವಪೂರ್ಣ ಯೋಜನೆಗಳನ್ನು ಬಿಜೆಪಿ ಸರ್ಕಾರ ಈ ಅವಧಿಯಲ್ಲಿ ನಿಮ್ಮ ಭಾಗಕ್ಕೆ ನೀಡಿದೆ. ಈಮೊದಲು ಯಾವ ಸರ್ಕಾರಕೂಡ ಈ ಭಾಗಕ್ಕೆ ಇಷ್ಟೊಂದು ದೊಡ್ಡಪ್ರಮಾಣದ ಅನುದಾನ ನೀಡಿರಲಿಲ್ಲ ಎಂದು ಹೇಳಿದರು.
ಗೋಕರ್ಣ ಗ್ರಾಮಪಂಚಾಯತ್ ಅಧ್ಯಕ್ಷ ಮಂಜುನಾಥ ಜನ್ನು ಅವರು ಮಾತನಾಡಿ, ಗೋಕರ್ಣ ಹಾಗೂ ಸುತ್ತಮುತ್ತಲ ಭಾಗದ ಅಭಿವೃದ್ಧಿಗೆ ದಿನಕರ ಶೆಟ್ಟಿಯವರು ನೀಡಿದಷ್ಟು ಕಾಳಜಿಯನ್ನು ಹಿಂದಿನ ಯಾವ ಶಾಸಕರೂ ತೋರಿರಲಿಲ್ಲ. ನಮ್ಮ ಕ್ಷೇತ್ರದ ಜನರ ಸುದೀರ್ಘ ಅವಧಿಯ ಅನೇಕ ಬೇಡಿಕೆಗಳು ಕಳೆದ ಐದುವರ್ಷಗಳ ಅವಧಿಯಲ್ಲಿ ದಿನಕರ ಶೆಟ್ಟಿಯವರ ಅಧಿಕಾರಾವಧಿಯಲ್ಲಿ ನೆರವೇರಿವೆ. ಇಂತಹ ಅಭಿವೃದ್ಧಿಯ ಹರಿಕಾರರಾಗಿರುವ ದಿನಕರ ಶೆಟ್ಟಿಯವರನ್ನು ಇನ್ನೊಮ್ಮೆ ಅತಿಹೆಚ್ಚು ಮತನೀಡಿ ನಾವೆಲ್ಲರೂ ಗೆಲ್ಲಿಸೋಣ ಎಂದು ಹೇಳಿದರು.
ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಚುನಾವಣಾ ಸಂಚಾಲಕರಾದ ಎಮ್. ಜಿ. ಭಟ್ ಅವರು ಮಾತನಾಡಿ, ನರೇಂದ್ರ ಮೋದೀಜಿಯವರು ಜಾರಿಗೆ ತಂದಿರುವ ಯೋಜನೆಗಳು ನೇರವಾಗಿ ಜನರನ್ನು ತಲುಪುತ್ತಿವೆ. ಕಿಸಾನ್ ಸಮ್ಮಾನ್ ಯೋಜನೆ ರೈತರಿಗೆ ನೆರವಾಗಿದೆ. ಪ್ರಧಾನಮಂತ್ರಿ ಜನೌಷಧ ಕೇಂದ್ರಗಳಲ್ಲಿ ಜನರಿಗೆ ಅತಿ ಕಡಿಮೆ ಬೆಲೆಯಲ್ಲಿ ಔಷಧಿ ದೊರಕುತ್ತಿದೆ. ಇಂತಹ ಹಲವಾರು ಯೋಜನೆಗಳ ಪ್ರಯೋಜನ ಜನರಿಗೆ ತಲುಪುತ್ತಿವೆ. ಹಾಗೆಯೇ ರಾಜ್ಯಸರ್ಕಾರವು ಒಳ್ಳೊಳ್ಳೆಯ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತಂದಿದೆ. ವಿದ್ಯಾನಿಧಿ ಯೋಜನೆಯಿಂದ ರೈತರ ಹಾಗೂ ಮೀನುಗಾರರ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ವಿದ್ಯುತ್ ಸೌಕರ್ಯದಿಂದ ವಂಚಿತವಾದ ಕುಟುಂಬಗಳಿಗೆ ಬೆಳಕು ಯೋಜನೆಯಡಿಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ಎಂದರು.
ವಿಧಾನಸಭಾ ಕ್ಷೇತ್ರದ ಚುನಾವಣಾ ಸಂಚಾಲಕ ಎಮ್. ಜಿ. ಭಟ್, ಗೋವಾದ ವಾಸ್ಕೊ ವಿಧಾನಸಭಾ ಕ್ಷೇತ್ರದ ಶಾಸಕ ಕೃಷ್ಣ ದಾಜಿ ಸಾಲ್ಕರ್, ಮಹಾಶಕ್ತಿಕೇಂದ್ರದ ಅಧ್ಯಕ್ಷ ಚಂದ್ರಶೇಖರ ನಾಯ್ಕ, ನಾಡುಮಾಸ್ಕೇರಿ ಪಂಚಾಯತ್ ಅಧ್ಯಕ್ಷೆ ಧನುಶ್ರೀ ಅಂಕೋಲೆಕರ, ಹನೆಹಳ್ಳಿ ಪಂಚಾಯತ್ ಅಧ್ಯಕ್ಷೆ ಭಾರತಿ ಗೌಡ, ಗೋಕರ್ಣ ಪಂಚಾಯತ್ ಅಧ್ಯಕ್ಷ ಮಂಜುನಾಥ ಜನ್ನು, ಕುಮಟಾ ಪುರಸಭಾ ಸದಸ್ಯರಾದ ತುಳಸು ಗೌಡ, ಹಾಲಕ್ಕಿ ಸಮಾಜದ ಮುಖಂಡ ಗೋವಿಂದ ನಾಗಪ್ಪ ಗೌಡ, ಶಕ್ತಿಕೇಂದ್ರದ ಪ್ರಮುಖರಾದ ಸಣ್ಣು ಗೌಡ, ಪ್ರಮುಖರಾದ ಮಹೇಶ ಶೆಟ್ಟಿ, ರಾಜೇಶ್ ನಾಯಕ, ಚಂದ್ರಕಾಂತ್ ಶೆಟ್ಟಿ, ರಮೇಶ್ ಪ್ರಸಾದ್, ಗಣೇಶ ಪಂಡಿತ್, ನಿತ್ಯಾನಂದ ಶೆಟ್ಟಿ, ನಾಗೇಶ್ ಗೌಡ, ಭಾಸ್ಕರ ಚಂದಾವರ, ಬೂತ್ ಅಧ್ಯಕ್ಷರು, ಪೇಜ್ ಪ್ರಮುಖರು, ಪಕ್ಷದ ಅಭಿಮಾನಿಗಳು ಉಪಸ್ಥಿತರಿದ್ದರು.