ಬೆಂಗಳೂರು: ಸರಕು ಮತ್ತು ಸೇವಾ ತೆರಿಗೆಯಲ್ಲಿನ(ಜಿಎಸ್ಟಿ) ಅವೈಜ್ಞಾನಿಕ ಅಂಶಗಳನ್ನು ವಿರೋಧಿಸುವುದಲ್ಲದೆ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಏರಿಕೆಯನ್ನು ವಿರೋಧಿಸಿ ಇಂದಿನಿಂದ ಎರಡು ದಿನಗಳ ಕಾಲ ದೇಶವ್ಯಾಪಿ ಲಾರಿ ಮುಷ್ಕರ ನಡೆಯಲಿದೆ.
ಅಖಿಲ ಭಾರತ ಮೋಟಾರು ಟ್ರಾನ್ಸ್ಪೋರ್ಟ್ ಕಾಂಗ್ರೆಸ್ ನೀಡಿರುವ ಈ ಮುಷ್ಕರಕ್ಕೆ ಕರೆ ನೀಡಿದ್ದು ದಕ್ಷಿಣವಲಯ ಮೋಟಾರು ಟ್ರಾನ್ಸ್ ಪೋರ್ಟರ್ಸ್ ಕ್ಷೇಮಾಭಿವೃದ್ಧಿ ಸಂಘ ಸಹ ಬೆಂಬಲ ಘೋಷಿಸಿದೆ.ಇದರಿಂದ ಕರ್ನಾಟಕ ಸೇರಿ ಭಾರತದ ಆದ್ಯಂತ 2 ದಿನ ಲಾರಿ ಸಂಚಾರ ಸ್ಥಗಿತವಾಗಲಿದೆ. ದಿನಬಳಕೆ ವಸ್ತುಗಳ , ಸರಬರಾಜು ವ್ಯತ್ಯಯವಾಗಲಿದೆ. ಹಾಲು,ಪೆಟ್ರೋಲ್ ಹಾಗೂ ಡೀಸೆಲ್ ಲಾರಿಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಆರ್.ಷಣ್ಮುಗಪ್ಪ ತಿಳಿಸಿದ್ದಾರೆ.
ಡಿಸೇಲ್ ದರವನ್ನು ಜಿಎಸ್ ಟಿಯಿಂದ ಹೊರಗಿಟ್ಟಿರುವುದರಿಂದ ಡಿಸೇಲ್ ವಾಹನ ಬಳಸುವವರಿಗೆ ಕಷ್ಟವಾಗುತ್ತಿದೆ. ಇನ್ನು ಪೆಟ್ರೋಲ್ ಮತ್ತು ಡಿಸೆಲ್ ದರಗಳನ್ನು ನಿತ್ಯವೂ ಪರಿಷ್ಕರಣೆ ಮಾಡುವುದರಿಂದ ಡಿಸೇಲ್ ಬೆಲೆಯಲ್ಲಿ ದಿನ ದಿನವೂ ಏರಿಕೆ ಆಗುತ್ತಿದೆ. ಇದು ಲಾರಿ ಮಾಲಿಕರು ಸೇರಿ ಗ್ರಾಹಕರಿಗೆ ಹೊರೆಯಾಗುತ್ತಿದೆ ಎಂದು ಟ್ರಕ್ಕರ್ಸ್ ಅಸೋಸಿಯೇಷನ್ ತಿಳಿಸಿದೆ.