ಕುಮಟಾ: ಸೋಮವಾರ ಪ್ರಕಟವಾದ 2022-23ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶದಲ್ಲಿ ತಾಲೂಕಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್‌ನ ಸಿವಿಎಸ್‌ಕೆ ಪ್ರೌಢಶಾಲೆಯು ಪ್ರತಿ ವರ್ಷದಂತೆ 100 % ದೊಂದಿಗೆ, ರಾಜ್ಯಕ್ಕೆ ಚತುರ್ಥ ಸ್ಥಾನ ಪಡೆದು, ರಾಜ್ಯ ಮಟ್ಟದಲ್ಲಿ ರ‍್ಯಾಂಕ್ ಗಳಿಸುವ ಪರಂಪರೆಯನ್ನು ಮುಂದುವರೆಸಿದೆ.
ಪರೀಕ್ಷೆಗೆ ಕುಳಿತ 139 ವಿದ್ಯಾರ್ಥಿಗಳೂ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದು, 8 ವಿದ್ಯಾರ್ಥಿಗಳು ರಾಜ್ಯಮಟ್ಟದ ಟಾಪ್-10 ರ‍್ಯಾಂಕ್ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿದ್ದಾರೆ. ಕುಮಾರಿ ಅದಿತಿ ಪ್ರಕಾಶ ವೈದ್ಯ ಹಾಗೂ ಕುಮಾರ ಸುಮಂತ ಮಂಜುನಾಥ ಶಾಸ್ತ್ರಿ 625 ಕ್ಕೆ 622 (99.52%) ಅಂಕಗಳೊಂದಿಗೆ ರಾಜ್ಯಕ್ಕೆ ಚತುರ್ಥ ಸ್ಥಾನ, ಕುಮಾರ ಶ್ರೇಯಸ್ ಜನಾರ್ಧನ ನಾಯ್ಕ ಹಾಗೂ ಕುಮಾರ ಆದಿತ್ಯ ಮಂಜುನಾಥ ಹೆಗಡೆ 625 ಕ್ಕೆ 621 (99.36%) ಅಂಕಗಳೊಂದಿಗೆ ರಾಜ್ಯಕ್ಕೆ ಐದನೇ ಸ್ಥಾನ, ಕುಮಾರ ಆಕಾಶ ಕಿರಣ ಶೇಟಿಯಾ 625 ಕ್ಕೆ 620 (99.2%) ಅಂಕಗಳೊಂದಿಗೆ ರಾಜ್ಯಕ್ಕೆ ಆರನೇ ಸ್ಥಾನ, ಕುಮಾರ ಯಶಸ್ ಬಾಬು ನಾಯ್ಕ 625 ಕ್ಕೆ 618 (98.88%) ಅಂಕಗಳೊಂದಿಗೆ ರಾಜ್ಯಕ್ಕೆ ಎಂಟನೇ ಸ್ಥಾನ, ಕುಮಾರ ಆದಿತ್ಯ ಅರುಣಕುಮಾರ ಹೆಗಡೆ 625ಕ್ಕೆ 617 (98.72%) ಅಂಕಗಳೊಂದಿಗೆ ರಾಜ್ಯಕ್ಕೆ ಒಂಭತ್ತನೇ ಸ್ಥಾನ, ಮತ್ತು ಕುಮಾರಿ ಅಪೂರ್ವ ಗಜಾನನ ಭಟ್ಟ 625 ಕ್ಕೆ 616 (98.56%) ಅಂಕಗಳೊಂದಿಗೆ ರಾಜ್ಯಕ್ಕೆ ಹತ್ತನೇ ಸ್ಥಾನ ಪಡೆದು ಸಾಧನೆಗೈದಿದ್ದಾರೆ.
ಪ್ರಥಮ ಭಾಷೆಯಲ್ಲಿ 34 ಮಂದಿ ವಿದ್ಯಾರ್ಥಿಗಳು, ದ್ವಿತೀಯ ಭಾಷೆಯಲ್ಲಿ 9 ಮಂದಿ, ತೃತೀಯ ಭಾಷೆಯಲ್ಲಿ 27 ಮಂದಿ, ಗಣಿತದಲ್ಲಿ 10 ಮಂದಿ, ವಿಜ್ಞಾನದಲ್ಲಿ 5 ಮಂದಿ, ಹಾಗೂ ಸಮಾಜ ವಿಜ್ಞಾನದಲ್ಲಿ 7 ವಿದ್ಯಾರ್ಥಿಗಳು ಪೂರ್ಣಾಂಕಗಳನ್ನು ಪಡೆದು ಗಮನಾರ್ಹ ಸಾಧನೆ ಮಾಡಿರುತ್ತಾರೆ.
ಐವರು ವಿದ್ಯಾರ್ಥಿಗಳು 99% ಕ್ಕಿಂತ ಅಧಿಕ, 11 ವಿದ್ಯಾರ್ಥಿಗಳು 98% ಕ್ಕಿಂತ ಅಧಿಕ, 34 ವಿದ್ಯಾರ್ಥಿಗಳು 95% ಕ್ಕಿಂತ ಅಧಿಕ, 84 ವಿದ್ಯಾರ್ಥಿಗಳು 90% ಕ್ಕಿಂತ ಅಧಿಕ, 111 ವಿದ್ಯಾರ್ಥಿಗಳು 85% ಕ್ಕಿಂತ ಅಧಿಕ ಅಂಕ ಗಳಿಸಿದರೆ, ಉಳಿದ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ.
ಶಾಲೆಯ ಪರಿಮಾಣಾತ್ಮಕ ಫಲಿತಾಂಶ 100% ಹಾಗೂ ಗುಣಾತ್ಮಕ ಫಲಿತಾಂಶ 95.63% ದೊಂದಿಗೆ ಶಾಲೆಯು ಈ ವರ್ಷವೂ ಸಹ ಉತ್ಕೃಷ್ಟ ಫಲಿತಾಂಶವನ್ನು ದಾಖಲಿಸಿ ರಾಜ್ಯಮಟ್ಟದಲ್ಲಿ ಮಗದೊಮ್ಮೆ ತನ್ನ ಛಾಪನ್ನು ಮೂಡಿಸಿದೆ.
ಶಾಲಾ ಆಡಳಿತ ಮಂಡಳಿ, ಶೈಕ್ಷಣಿಕ ಸಲಹೆಗಾರರು, ಮುಖ್ಯಾಧ್ಯಾಪಕಿಯರು, ಶಿಕ್ಷಕ ಹಾಗೂ ಪಾಲಕ ವೃಂದ ಶಾಲೆಯ ಸಾಧನೆಗೆ ಹರ್ಷ ವ್ಯಕ್ತಪಡಿಸಿ ಶುಭ ಕೋರಿದ್ದಾರೆ.