ಕುಮಟಾ : ಮಾರ್ಗರೇಟ್ ಆಳ್ವ ರಾಜಕೀಯ ನಿವೃತ್ತಿ ಪಡೆದ ನಂತರ ಅವರ ಮಗನಿಗೆ ಈ ಬಾರಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಾಗಿದ್ದು, ಅಭಿವೃದ್ಧಿಯ ಮುಂದಾಲೋಚನೆಯುಳ್ಳ ವ್ಯಕ್ತಿ ನಿವೇದಿತ್, ಕರಾವಳಿ ಅಭಿವೃದ್ಧಿಯ ಪ್ರಾಧಿಕಾರದ ಅಧ್ಯಕ್ಷರಾಗಿ ಸಾಕಷ್ಟು ಅನುದಾನ ತಂದಿದ್ದಾರೆ ರಾಜ್ಯದಲ್ಲಿ ಕಾಂಗ್ರೆಸ್ ವ್ಯಾಪಕ ಪ್ರಚಾರ ಕೈಗೊಳ್ಳುತ್ತಿದ್ದು, ನಾನು ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಿವೇದಿತ್ ಆಳ್ವ ಅವರ ಪರ ಪ್ರಚಾರಕ್ಕೆ ಬಂದು, ಹಾಲಕ್ಕಿ ಒಕ್ಕಲಿಗರು ಮತ್ತು ಮೀನುಗಾರರನ್ನು ಭೇಟಿಯಾಗಿ ಅವರ ಕಷ್ಟಗಳನ್ನು ಆಲಿಸಿದ್ದೇನೆ. ಸಭೆ ನಡೆಸಿದ ಸಂದರ್ಭದಲ್ಲಿ ಸಮಾಜದ ಮುಖಂಡರು ಹಾಲಕ್ಕಿ ಒಕ್ಕಲಿಗರ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪ್ರಾಶಸ್ತ್ಯದ ಮೇರೆಗೆ ಕೇಂದ್ರ ಸರ್ಕಾರದ ಗಮನಸೆಳೆಯುವ ಕೆಲಸ ಮಾಡುತ್ತೇನೆ ಎಂದು ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ ಹೇಳಿದರು.

ಅವರು ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೊಷ್ಟಿಯಲ್ಲಿ ಮಾತನಾಡಿ, ಕರಾವಳಿ ಭಾಗದ ಶಾಸಕರು ಬಡ ಮೀನುಗಾರರ ಸಾವನ್ನು ತಮ್ಮ ಅಧಿಕಾರಕ್ಕೆ ಉಪಯೋಗಿಸಿಕೊಂಡು ಆ ಕುಟುಂಬವನ್ನು ಅತಂತ್ರ ಮಾಡಿದ್ದಾರೆ. ಇಂತಹ ಕೆಲಸಕ್ಕೆ ಕಾಂಗ್ರೆಸ್ ಕೈ ಹಾಕಿಲ್ಲ ಎಂದರು.

ನಾನು ಸಹ ಎಲ್ಲ ಪಕ್ಷದ ಸಂಸತ್ ಸದಸ್ಯರ ವಿಶ್ವಾಸಕ್ಕೆ ಪಡೆದು ಹೋರಾಟ ನಡೆಸುತ್ತೇನೆ. ನಾನು ಹೋರಾಟದ ಮೂಲದಿಂದ ಬಂದವನು. ಹಲವಾರು ವಿಚಾರದಲ್ಲಿ ಸಂಸತ್‌ನ ಅಧಿವೇಶನದಲ್ಲಿ ಮಾತನಾಡಿ, ಬೇಡಿಕೆಯನ್ನು ಈಡೇರಿಸಿದ್ದೇನೆ ಎಂಬ ಆತ್ಮತೃಪ್ತಿ ಇದೆ. ಹಾಲಕ್ಕಿ ಒಕ್ಕಲಿಗರ ವಿಷಯದಲ್ಲಿಯೂ ಹೋರಾಟಕ್ಕೆ ಸಿದ್ಧನಿದ್ದೇನೆ ಎಂದರು.

RELATED ARTICLES  ವಿದ್ಯಾರ್ಥಿ ಸಂಸತ್ತು ಉದ್ಘಾಟನೆ-ಪ್ರಮಾಣ ವಚನ ಸ್ವೀಕಾರ ಸಮಾರಂಭ

ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದರೂ ಹಾಲಕ್ಕಿ ಒಕ್ಕಲಿಗರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಬಗ್ಗೆ ರಾಜ್ಯ ಸರ್ಕಾರದ ಗಮನ ಸೆಳೆದಿಲ್ಲ ಎಂಬುದು ಬೇಸರದ ಸಂಗತಿ. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದ ವೇಳೆ ಮೀನುಗಾರಿಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಮಾಸಿಕ ಸಬ್ಸಿಡಿ ದರದಲ್ಲಿ ೫೦೦ ಲೀಟರ್ ಸೀಮೆಎಟ್ಟೆ ನೀಡಲಾಗುತ್ತಿತ್ತು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇದನ್ನು ಸ್ಥಗಿತಗೊಳಿಸಿದ್ದು, ಈಗ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ೫೦೦ ಲೀಟರ್ ಸೀಮೆಎಣ್ಣೆ ಪುನಃ ನೀಡುತ್ತೇವೆ. ಮಹಿಳೆಯರ ಸ್ವ ಉದ್ಯೋಗಕ್ಕೆ ನೆರವಾಗಲು ೩ ಲಕ್ಷದವರೆಗೆ ಬಡ್ಡಿ ರಹಿತ ಸಾಲ, ಮೀನುಗಾರಿಕೆಗೆ ತೆರಳಲು ಸಾಧ್ಯವಾಗದ ಸಂದರ್ಭದಲ್ಲಿ ಪ್ರತಿ ತಿಂಗಳು ೬ ಸಾವಿರ, ೧೦ ಲಕ್ಷ ಮೀನುಗಾರ ಕುಟುಂಬಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಉದ್ಯೋಗ ನೀಡಲು ಕ್ರಮ ವಹಿಸುವುದಾಗಿ ಪ್ರಣಾಳಿಕೆಯಲ್ಲಿ ತಿಳಿಸಿದ್ದೇವೆ. ಕೊಟ್ಟ ಮಾತಿನಂತೆ ನಡೆಯುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

RELATED ARTICLES  ಪ್ರತಿಯೊಬ್ಬರು ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸಬೇಕು - ಶಿಶಿಂದ್ರನ್ ನಾಯರ್

ಕೇಂದ್ರ ಮತ್ತು ರಾಜ್ಯದಲ್ಲಿ ಡಬ್ಬಲ್ ಇಂಜಿನ್ ಸರ್ಕಾರವಿದೆ. ಅತಿವೃಷ್ಟಿಯಾಗಿ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಎನ್.ಡಿ.ಆರ್.ಎಫ್ ಸರ್ವೆಯ ಪ್ರಕಾರ ೯೦೦೭೨ ಕೋಟಿ ವೆಚ್ಚದಲ್ಲಿ ಬೆಳೆ, ರಸ್ತೆ, ಮನೆಗಳು ಹಾನಿಯಾಗಿದೆ ಎಂದು ತಿಳಿಸಿದೆ. ಆದರೆ ಕರ್ನಾಟಕ್ಕೆ ಬಿಡುಗಡೆಯಾಗಿರುವುದು ೧೧೨೦೦ ಕೋಟಿ ಮಾತ್ರ ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರ ವರ್ಡ್ ಬ್ಯಾಂಕ್ ಬಳಿ ೯೧ ಸಾವಿರ ಕೋಟಿ ಸಾಲ ಕೇಳಿದ್ದು, ಸ್ವಾತಂತ್ರ್ಯಾನಂತರ ೨೦೧೯ ವರೆಗೆ ೨.೭೩ ಸಾವಿರ ಕೋಟಿ ಸಾಲವಿತ್ತು. ರಾಜ್ಯದ ಬಿಜೆಪಿ ಸರ್ಕಾರ ಮೂರುವರೆ ವರ್ಷದಲ್ಲಿ ೫.೧೮ ಸಾವಿರ ಕೋಟಿಗೆ ತಂದು ನಿಲ್ಲಿದೆ. ಅದರಲ್ಲಿ ೪೦ ಫರ್ಸ್‌ಟೇಜ್ ಕೊಳ್ಳೆ ಹೊಡೆದು ನಮ್ಮ ತಲೆ ಮೇಲೆ ಸಾಲ ಮಾಡಿದೆ. ಬಿಜೆಪಿ ಸರ್ಕಾರವನ್ನು ತೊಲಗಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗೊಷ್ಠಿಯಲ್ಲಿ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಎಸ್.ಎ.ಹುಸೇನ್, ಕುಮಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೊನ್ನಪ್ಪ ನಾಯಕ, ಮಹಿಳಾ ಘಟಕದ ಅಧ್ಯಕ್ಷೆ ಸುರೇಖಾ ವಾರೇಕರ, ಕೆ.ಪಿ.ಸಿ.ಸಿ ಜಿಲ್ಲಾ ಸಂಯೋಜಕ ಭಾಸ್ಕರ ಪಟಗಾರ, ಕುಮಟಾ-ಹೊನ್ನಾವರ ಕ್ಷೇತ್ರದ ಕೆ.ಪಿ.ಸಿ.ಸಿ ಸಂಯೋಜಕ ನಾಗರಾಜ ಮಡಿವಾಳ, ಪ್ರಮುಖರಾದ ತಾರಾ ಗೌಡ, ಸಚಿನ ನಾಯ್ಕ ಸೇರಿದಂತೆ ಮತ್ತಿತರರು ಇದ್ದರು.