ಯಲ್ಲಾಪುರ: ತಾಲೂಕಿನ ಮಾವಿನಕಟ್ಟಾದಲ್ಲಿ ಬಾವಿಯಿಂದ ಪಂಪ್ ಸೆಟ್ ಎತ್ತಲೆಂದು ಬಾವಿಗೆ ಇಳಿದ ಮೂವರು ಸಾವನ್ನಪ್ಪಿದ ಘಟನೆ ಇಂದು ಮಧ್ಯಾಹ್ನ ಸಂಭವಿಸಿದೆ. ಗಣೇಶ್ ಶೆಟ್ಟಿ, ಸುರೇಶ್ ಮಲಬಾರಿ,ಗೋವಿಂದ ಪೂಜಾರಿ ಎಂಬುವವರೇ ಮೃತ ದುರ್ದೈವಿಗಳಾಗಿದ್ದಾರೆ. ಮಾವಿನಕಟ್ಟಾದ ರಾಘು ಪೂಜಾರಿ ಎಂಬುವವರ ಮನೆಯ ಬಾವಿಯ ನೀರಿನ ಪಂಪ್ ಸೆಟ್ ಎತ್ತುವ ಸಲುವಾಗಿ ಓರ್ವ ಬಾವಿಗೆ ಇಳಿದಿದ್ದು, ಆತನಿಗೆ ಉಸಿರುಗಟ್ಟಿದ್ದನ್ನು ಗಮನಿಸಿದ ಇನ್ನೀರ್ವರು ಆತನನ್ನು ಕಾಪಾಡಲು ಬಾವಿಗೆ ಇಳಿದ ಸಂದರ್ಭದಲ್ಲಿ ಮೂವರೂ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.
ನಂತರ ಸ್ಥಳೀಯರು ಅಗ್ನಿಶಾಮಕದಳದವರಿಗೆ ವಿಷಯ ತಿಳಿಸಿದ್ದು, ಅಗ್ನಿಶಾಮಕ ಸಿಬ್ಬಂದಿಗಳು ಮೃತ ದೇಹಗಳನ್ನು ಹೊರತೆಗೆದಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಸ್ಥಳೀಯ ಮುಖಂಡರಾದ ಶಿವರಾಮ್ ಹೆಬ್ಬಾರ್, ವಿ.ಎಸ್.ಪಾಟೀಲ್ ಭೇಟಿ ನೀಡಿ ಸಂತಾಪ ಸೂಚಿಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ.