ಕುಮಟಾ : ಗೋ ಸೇವೆ ಎಂದರೆ ಅದು ರಾಷ್ಟ್ರಕಾರ್ಯ, ವಿಶ್ವಕಾರ್ಯ ಅದನ್ನು ಅತ್ಯಂತ ಪ್ರಾಮಾಣಿಕವಾಗಿ ಮಾಡುತ್ತಿರುವ ಗೋ ಸೇವಕರು ಧನ್ಯರು ಎಂದು ಶ್ರೀಶ್ರೀ ರಾಘವೇಶ್ವಭಾರತೀ ಮಹಾಸ್ವಾಮಿಗಳು ಹೇಳಿದರು. ಅವರು ತಾಲೂಕಿನ ಹೊಸಾಡದ ಅಮೃತಧಾರಾ ಗೋಶಾಲೆಯಲ್ಲಿ ಕಾಮಧೇನು ಯಾಗ ಹಾಗೂ ಕಲ್ಯಾಣಿ ಜಲಸನ್ನಿಧಿ ಹಾಗೂ ಶಾಂತೇರಿ ಯಜ್ಞ ಮಂಟಪ ಲೋಕಾರ್ಪಣೆ ಕಾರ್ಯಕ್ರಮದ ಸಾನಿಧ್ಯವಹಿಸಿ ಅವರು ಮಾತನಾಡಿದರು.
ವೈತರಣಿ ನದಿ ದಾಟಿ ಸ್ವರ್ಗಕ್ಕೆ ಹೋಗುವಾಗ ಹೆಚ್ಚು ಗೋ ಸೇವೆ ಮಾಡಿದವರಿಗೆ ಗೋವಿನ ಬಾಲ ಸಿಗುತ್ತದೆ. ಕಾಮಧೇನು ವೈತರಣಿ ದಾಟಿಸುತ್ತದೆ ಎಂದು ಪ್ರತೀತಿ ಇದೆ. ಹೀಗಾಗಿ ಎಲ್ಲರೂ ಹೆಚ್ಚು ಹೆಚ್ಚು ಗೋ ಸೇವೆ ಮಾಡಬೇಕು. ಗೋವಿಲ್ಲದೆ ಯಜ್ಞ ನಡೆಸುವುದು ಅಸಂಭವ, ಗೋ ಶಾಲೆಯ ಆವಾರದಲ್ಲಿ ಯಜ್ಞ ಮಂಟಪದ ಲೋಕಾರ್ಪಣೆ ಸುಖಕ್ಕೆ ಸುಖ ಸೇರಿಸಿರುವಂತಹುದ್ದು ಎಂದು ಅವರು ಅಭಿಪ್ರಾಯಪಟ್ಟರು.
ಗೋಶಾಲೆಯ ಕುರಿತಾಗಿ ಕಾರ್ಯದರ್ಶಿ ಅರುಣ ಹೆಗಡೆ ಪ್ರಾಸ್ಥಾವಿಕವಾಗಿ ಮಾತಾನಾಡಿ, ಗೋವಿನ ಉಳಿವಿಗಾಗಿ ಗೋ ಶಾಲೆಯು ಮಾಡುತ್ತಿರುವ ಮಹತ್ತರ ಕಾರ್ಯಗಳ ಬಗ್ಗೆ ಹಾಗೂ ಶಾಶ್ವತ ಯಜ್ಞ ಮಂಟಪ ತಯಾರಿಯ ಹಿನ್ನೆಲೆಗಳ ಬಗ್ಗೆ ತಿಳಿಸಿದರು.
ಯಜ್ಞ ಮಂಟಪದ ಕೊಡುಗೆ ನೀಡಿದ ಹುಬ್ಬಳ್ಳಿಯ ಭಾರತೀ ಪಾಟೀಲ್, ಆರ್.ಜಿ ಉಗ್ರು, ಆರ್.ಜಿ ಭಟ್ಟ ಬಗ್ಗೋಣ ಹಾಗೂ ಉಳಿದ ದಾನಿಗಳನ್ನು ವೇದಿಕೆಯಲ್ಲಿ ಗೌರವಿಸಲಾಯಿತು. ಪರಮೇಶ್ವರ ಮಾರ್ಕಾಂಡೆ ಯಜ್ಞ ಕಾರ್ಯದ ನೇತ್ರತ್ವ ವಹಿಸಿದರು. ಅಧ್ಯಕ್ಷ ಮುರಳೀಧರ ಪ್ರಭು, ಕೋಶಾಧ್ಯಕ್ಷ ಸುಬ್ರಾಯ ಭಟ್ಟ ಇನ್ನಿತರರು ಇದ್ದರು.