ಕುಮಟಾ : ಭಾರಿ ಕುತೂಹಲ ಕೆರಳಿಸಿದ್ದ ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿ ಜೆಡಿಎಸ್ ಅಭ್ಯರ್ಥಿ ಸೂರಜ್ ನಾಯ್ಕ ಸೋನಿ ವಿರುದ್ಧ 673 ಮತಗಳಿಂದ ಗೆಲವು ಸಾಧಿಸಿದರು. ಗೆಲುವಿನ ನಗು ಬೀರಿದ ದಿನಕರ‌ ಶೆಟ್ಟಿಯವರನ್ನು ಕಾರ್ಯಕರ್ತರು ಹೆಗಲಮೇಲೆ ಹೊತ್ತು ವಿಜಯೋತ್ಸವ ಆಚರಿಸಿದರು.

ಮಧ್ಯಾಹ್ನ 2:00 ಸುಮಾರಿಗೆ ಕೊನೆಯ ಕ್ಷಣದಲ್ಲಿ ಮುನ್ನಡೆ ಪಡೆದುಕೊಂಡ ದಿನಕರ ಶೆಟ್ಟಿ ಅವರ ಅಭಿಮಾನಿಗಳು ಮತ ಎಣಿಕೆ ನಡೆಯುತ್ತಿದ್ದ ಡಾ. ಎ.ವಿ ಬಾಳಿಗಾ ಕಾಲೇಜಿನ ಸಮೀಪ ದೌಡಾಯಿಸಿ ದಿನಕರ‌ ಶೆಟ್ಟಿಯವರ ಪರ ಜಯಘೋಷ ಕೂಗಲಾರಂಭಿಸಿದರು. ಜೆಡಿಎಸ್ ಅಭ್ಯರ್ಥಿಯ ಗೊಂದಲವನ್ನು ನಿವಾರಿಸುವ ಕುರಿತಾಗಿ ಕೆಲವು ವಿವಿ ಪ್ಯಾಟ್ ಗಳನ್ನು ಪುನಃ ಮೌಲ್ಯಮಾಪನ ಮಾಡಲಾಯಿತು.

RELATED ARTICLES  ಭಾಗವತ್ ಆಸ್ಪತ್ರೆಯಲ್ಲಿ ಸೇವೆ ಪ್ರಾರಂಭಿಸುತ್ತಿರುವ ಡಾ. ಸುಮಂತ್ ಬಳಗಂಡಿ

ಕೊನೆಯದಾಗಿ ದಿನಕರ ಶೆಟ್ಟಿ ಗೆಲುವನ್ನು ಘೋಷಿಸುತ್ತಿದ್ದಂತೆ ಅಭಿಮಾನಿಗಳು ಭಾರತ ಮಾತೆಗೆ ಜಯವಾಗಲಿ, ದಿನಕರ ಶೆಟ್ಟಿಯವರಿಗೆ ಜಯವಾಗಲಿ ಘೋಷಣೆಗಳನ್ನು ಕೂಗಲಾರಂಬಿಸಿದರು. ಜೊತೆಗೆ ಹಾರಹಾಕಿ ಅವರನ್ನು ಅಭಿನಂದಿಸಿದರು. ಕಾಲೇಜಿನಿಂದ ಘೋಷಣೆ ಕೂಗುತ್ತಾ ದಿನಕರ ಶೆಟ್ಟಿ ಅವರನ್ನು ವಾಣಿಜ್ಯ ಕಾಲೇಜಿನ ಎದುರು ಸ್ವಾಗತಿಸಿದ ಅಪಾರ ಅಭಿಮಾನಿಗಳು, ಅವರನ್ನು ಹೆಗಲ ಮೇಲೆ ಹೊತ್ತು ಹೆಗಡೆ ಮಾರ್ಗದಿಂದ ಹೆಗಡೆ ಕ್ರಾಸ್ ವರೆಗೆ ಹೊತ್ತು ತಂದರು. ಅಲ್ಲಿ ಹೂಮಳೆ ಗರೆದು ಹೂವಿನ ಹಾರ ಹಾಕಿ ಇನ್ನಷ್ಟು ಅಭಿಮಾನಿಗಳು ಅವರನ್ನು ಬರಮಾಡಿಕೊಂಡು ಪಕ್ಷದ ಕಚೇರಿವರೆಗೆ ಪಾದಯಾತ್ರೆ ಮೂಲಕ ಘೋಷಣೆ ಕೂಗುತ್ತಾ ಸಾಗಿದರು.

RELATED ARTICLES  ಸಾರಿಗೆ ಬಸ್ ಹಾಗೂ ಪಲ್ಸರ್ ಬೈಕ್ ನಡುವೆ ಭೀಕರ ಅಪಘಾತ : ಸ್ಥಳದಲ್ಲಿಯೇ ಓರ್ವನ ಸಾವು.

ಪಟಾಕಿ ಸಿಡಿಸಿ, ಬಿಜೆಪಿ ಬಾವುಟ ಹಾರಿಸುತ್ತಿದ್ದ ಅಪಾರ ಅಭಿಮಾನಿಗಳತ್ತ ಕೈಮುಗಿದ ದಿನಕರ ಶೆಟ್ಟಿ ಭಾವುಕರಾಗಿ ತನ್ನೆಲ್ಲಾ ಗೆಲುವನ್ನು ಕಾರ್ಯಕರ್ತರಿಗೆ ಅರ್ಪಿಸಿದರು.