ಭಟ್ಕಳ: ಭಟ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಂಕಾಳು ವೈದ್ಯ ಬಿಜೆಪಿ ಅಭ್ಯರ್ಥಿ ಸುನಿಲ್ ನಾಯ್ಕ್ ವಿರುದ್ಧ ಗೆಲುವು ಸಾಧಿಸಿದ ಬೆನ್ನಲ್ಲೇ ಪಟ್ಟಣದ ಸಂಶುದ್ದೀನ್ ವೃತ್ತದಲ್ಲಿ ಮುಸ್ಲಿಂ ಧ್ವಜವನ್ನು ಹಾರಿಸಲಾಗಿದೆ. ಪಟ್ಟಣದ ಮಧ್ಯಭಾಗದಲ್ಲಿರುವ ಸಂಶುದ್ದೀನ್ ವೃತ್ತದಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಅಭ್ಯರ್ಥಿ ಮಂಕಾಳು ವೈದ್ಯ ಭಾವಚಿತ್ರವಿರುವ ಧ್ವಜ, ಅಂಬೇಡ್ಕರ್‌ರ ಧ್ವಜದೊಂದಿಗೆ ಮುಸ್ಲಿಂ ಧ್ವಜವನ್ನು ಪ್ರದರ್ಶನ ಮಾಡಲಾಗಿದೆ. ವೃತ್ತದಲ್ಲಿ ಹಾಕಲಾಗಿದ್ದ ಕೇಸರಿ ಧ್ವಜದೊಂದಿಗೆ ಮುಸ್ಲಿಂ ಯುವಕರು ಮುಸ್ಲಿಂ ಧ್ವಜ ಹಾರಿಸುವ ವಿಡಿಯೊ ವೈರಲ್ ಆಗಿದೆ. ಮುಸ್ಲಿಂ ಯುವಕರ ಈ ಕೃತ್ಯಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಬಗ್ಗೆ ಪೂರ್ಣ ಮಾಹಿತಿ ತಿಳಿಯಬೇಕಿದೆ. ಸಾಮಾಜಿಕ ವೈರಲ್ ವಿಡಿಯೋ ಬಗ್ಗೆ ಚರ್ಚೆ ಪ್ರಾರಂಭವಾಗುತ್ತಿದೆ.
ಈ ಕುರಿತು ಸ್ಪಷ್ಟಿಕರಣ ನೀಡಿರುವ ಉತ್ತರ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಎನ್., ಕಾಂಗ್ರೆಸ್ ಬೆಂಬಲಿಗರು ಬಳಸಿದ್ದು ಪಾಕಿಸ್ತಾನ ಧ್ವಜವಲ್ಲ. ಅದು ಕೆಲವು ವ್ಯಕ್ತಿಗಳು ವೈಯಕ್ತಿಕವಾಗಿ ಪ್ರದರ್ಶಿಸಿದ್ದ ಧಾರ್ಮಿಕ ಧ್ವಜವಾಗಿತ್ತು ಎಂದು ಹೇಳಿದ್ದಾರೆ. ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳು ಅದು ಪಾಕಿಸ್ತಾನ ಧ್ವಜವಲ್ಲ ಎಂದು ದೃಢಪಡಿಸಿರುವುದರಿಂದ ಯಾವುದೇ ದೂರನ್ನು ದಾಖಲಿಸಿಕೊಳ್ಳಲಾಗಿಲ್ಲ ಅಥವಾ ಕ್ರಮವನ್ನು ಕೈಗೊಳ್ಳಲಾಗಿಲ್ಲ ಎಂದೂ ತಿಳಿಸಿದ್ದಾರೆ.
“ಅದೊಂದು ಧಾರ್ಮಿಕ ಧ್ವಜವಾಗಿದೆ ಮತ್ತು ಪಾಕಿಸ್ತಾನ ಧ್ವಜವಲ್ಲ. ನಾವಿದನ್ನು ದೃಢಪಡಿಸಿದ್ದು, ಯಾವುದೇ ಬಗೆಯ ಕೋಮು ಪ್ರಕ್ಷುಬ್ಧತೆಯನ್ನು ಸೃಷ್ಟಿಸುವ ತಪ್ಪು ದಾರಿಗೆಳೆಯುವ ಮಾಹಿತಿಯನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಕೂಡದು ಎಂದು ಮನವಿ ಮಾಡುತ್ತೇವೆ” ಎಂದೂ ಹೇಳಿದ್ದಾರೆ.