ಶಿರಸಿ: ಮೈಸೂರಿನ ವಿದ್ವಾಂಸ ಪ್ರೊ.ಶುಭಚಂದ್ರ ಅವರಿಗೆ ಸ್ವಾದಿ ಜೈನಮಠದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಇತಿಹಾಸ ಸಮ್ಮೇಳನದಲ್ಲಿ ಸೋದೆ ಸದಾಶಿವರಾಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹಾಗೂ ಸ್ವಾದಿ ಜೈನ ಮಠದ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿಗಳು ಪ್ರಶಸ್ತಿ ಪ್ರದಾನ ಮಾಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರೊ.ಶುಭಚಂದ್ರ, ಕನ್ನಡ ನಾಡಿನಲ್ಲಿ ನಾಡು, ನುಡಿಯ ಉಳಿವಿನ ಹೋರಾಟದ ಮೂಲಕ ಜೀವನ ಆರಂಭಿಸಿದ ನಾನು ಜವಾಬ್ದಾರಿ ಹೆಚ್ಚಿಸಿಕೊಂಡು ಇತಿಹಾಸ ಅಧ್ಯಯನದತ್ತ ಲಕ್ಷ್ಯವಹಿಸಿದೆ. ಮಂಡ್ಯ, ಗೇರುಸೊಪ್ಪ ಸೇರಿದಂತೆ ವಿವಿಧೆಡೆ ಶಾಸನಗಳ ಅಧ್ಯಯನ ಮಾಡಿ ಕನ್ನಡ ನಾಡಿನ ಇತಿಹಾಸ ಸಂರಕ್ಷಿಸುವ ಕೆಲಸ ಮಾಡುತ್ತಿದ್ದೇನೆ. ಮಾಡಿದ್ದು ಕಡಿಮೆ, ಮಾಡಬೇಕಾದ್ದು ಸಾಕಷ್ಟಿದೆ ಎಂದು ಹೇಳಿದರು. ಸಮಾಜದಲ್ಲಿ ಪರಿವರ್ತನೆ ಹಾಗೂ ಸಾಧನೆ ಮಾಡಲು ಇತರರ ಬದಲಿಸುವ ಚಿಂತನೆಗಿಂತ ಮೊದಲು ನಾವು ಬದಲಾಗಬೇಕು. ಹಾಗಾದಾಗ ನಿಶ್ಚಿತ ಗುರಿ ಸಾಧ್ಯ ಎಂದ ಅವರು, ಸೋದೆ ಕುವರಿಯಾಗಿದ್ದ ಬೆಳವಡಿ ಮಲ್ಲಮ್ಮನ ಕುರಿತು ಸಂಶೋಧನೆ ನಡೆಸುವ ಸಂಶೋಧಕರಿಗೆ ಮಲ್ಲಮ್ಮನ ಹೆಸರಿನಲ್ಲಿ ಪ್ರಶಸ್ತಿ ನೀಡಲು ಚಿಂತನೆ ನಡೆಸಬೇಕು ಎಂದು ಹೇಳಿದರು.
ಕ.ವಿ.ವಿ. ಮತ್ತು ಪುರಾತತ್ವ ಶಾಸ್ತ್ರದ ನಿವೃತ್ತ ಪ್ರಾಧ್ಯಾಪಕ ಪ್ರೊ.ಆರ್.ಎಂ.ಷಡಕ್ಷರಯ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದರು.ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಜಿಗಳು ಹಾಗೂ ಸ್ವಾದಿ ಜೈನ ಮಠದ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿಯವರು ದಿವ್ಯ ಸಾನ್ನಿಧ್ಯ ವಹಿಸಿದ್ದರು.ಈ ಸಂದರ್ಭದಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ, ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬಿ., ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಮಂಗಳೂರಿನ ಸೂರಜ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಮಂಜುನಾಥ ರೇವಣಕರ್ ಹಾಗೂ ಇತರರು ಇದ್ದರು.