ಕುಮಟಾ : ನನ್ನನ್ನು ಸೋಲಿಸಲು ನನ್ನ ವಿರುದ್ಧವಾಗಿ ಲಕ್ಷ ಲಕ್ಷ ದುಡ್ಡು ಹಂಚಿದವರೂ ಒಳ್ಳೆಯದಾಗಿ ಬದುಕಲಿ ಎಂದು ಆಶಿಸುವೆ. ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ ಎಂದು ಅವರು ತಿಳಿಯಬೇಕು. ಮೋಸ ಮಾಡಿದವರನ್ನು ದೇವರೇ ನೋಡಿಕೊಳ್ಳುತ್ತಾನೆ. ನಮ್ಮವರನ್ನು ಗೆಲ್ಲಿಸುವ ರೊಚ್ಚು ನಮ್ಮ ಕಾರ್ಯಕರ್ತರಲ್ಲಿ ಇನ್ನೂ ಹೆಚ್ಚಿಗೆ ಬರಬೇಕು. ನನ್ನ ಗೆಲುವಿಗಾಗಿ ಹಗಲಿರುಳೂ ದುಡಿದ ಕಾರ್ಯಕರ್ತರಿಗಾಗಿ ಪ್ರಾಣ ತ್ಯಾಗಕ್ಕೂ ಸಿದ್ಧನಿದ್ದೇನೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು. ಅವರು ಪಟ್ಟಣದ ಹವ್ಯಕ ಸಭಾಭವನದಲ್ಲಿ ಕುಮಟಾ ಮತ್ತು ಹೊನ್ನಾವರ ಬಿಜೆಪಿ ಮಂಡಲದ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕರ್ತರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರನ್ನು ಸನ್ಮಾನಿಸಿ, ಮಾತನಾಡಿದರು.

ನಾನು ಬಿಜೆಪಿಯಿಂದ ಎರಡನೇ ಬಾರಿ ಆಯ್ಕೆ ಆಗಿರುವುದಕ್ಕೆ ಬಹಳ ಸಂತೋಷವಿದೆ. ಸಂಪೂರ್ಣ ಸಹಕಾರ ನೀಡಿದರವರು ಕಾರ್ಯಕರ್ತರು. ಇದರ ಫಲವಾಗಿ ನಾನು ಶಾಸಕನಾಗಿದ್ದೇನೆ. ಅನೇಕ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದರೂ, ಹಿಂದೆಂದೂ ಕಂಡು ಕೇಳರಿಯದಷ್ಟು ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ಮಾಡಿದರೂ ಜನರು ನನ್ನ ಬಗ್ಗೆ ಅಪಪ್ರಚಾರಕ್ಕೆ ಕಿವಿ ಕೊಟ್ಟರು. ಕೇವಲ ಜನರಷ್ಟೇ ಅಲ್ಲ ನಮ್ಮ ಪಕ್ಷದ ಹಿರಿಯರೂ ನನ್ನ ಬಗ್ಗೆ ಅಪಪ್ರಚಾರದಲ್ಲಿ ಭಾಗವಹಿಸಿದ್ದು ಬೇಸರ ತಂದಿದೆ ಎಂದ ಅವರು, ನಾನು ಯಾರಿಗೂ ತೊಂದರೆ ಕೊಟ್ಟವನಲ್ಲ. ಅವನು ಕಷ್ಟದಲ್ಲಿದ್ದಾಗ ಅವರಿಗೆ ಸಹಾಯ ಮಾಡಿದ್ದೆ. ನಮ್ಮ ಧ್ವೇಷಿಕರೂ ಇದ್ದಾರೆ. ಪ್ರಾಮಾಣಿಕ ಕಾರ್ಯಕರ್ತರು ಸಾಕು. ನಿಮ್ಮ ಬಗ್ಗೆ ನಾನು ಪ್ರಾಣ ಕೊಡಲು ರೆಡಿ ಇದ್ದೇನೆ. ನನಗೆ ಯಾವುದೇ ಆಸೆ ಇಲ್ಲ. ಇರುವ ಇಬ್ಬರು ಹೆಣ್ಣು ಮಕ್ಕಳ ಮದುವೆ ಆಗಿದೆ. ಈಗಿರುವುದು ನನ್ನ ಮೂಲ ಕಾರ್ಯಕರ್ತರ ಪರವಾಗಿ ನಿಲ್ಲುವ ಕೆಲಸ ಮಾಡುತ್ತೇನೆ. ಕಾರ್ಯಕರ್ತರಿಗೆ ಯಾವುದೇ ನೋವಾಗದ ರೀತಿಯಲ್ಲಿ, ಜನರಿಗೆ ತೊಂದರೆ ಆಗಿದ್ದಲ್ಲಿ ನಾನು ಎದೆತಟ್ಟಿ ನಿಲ್ಲುತ್ತೇನೆ ಎಂದರು.

RELATED ARTICLES  ಭಟ್ಕಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಹೊಣೆಗಾರಿಕೆ ಸ್ವೀಕಾರ ಎಪ್ರಿಲ್ ೧೨ರಂದು. : ಗಂಗಾಧರ ನಾಯ್ಕ

ನಿಮ್ಮ ಋಣ ತೀರಿಸಲು ಸಾಧ್ಯವಿಲ್ಲ. ಯಾರಿಗೂ ದ್ರೋಹ ಮಾಡಿಲ್ಲ. ನನ್ನ ವಿರುದ್ಧ ಕೆಲಸ ಮಾಡಿದವರಿಗೂ ದ್ರೋಹ ಮಾಡಲ್ಲ. ನನ್ನ ಪಕ್ಷದ ವಿರುದ್ಧ ಕೆಲಸ ಮಾಡಿದವರನ್ನು ನೆನಪಿಟ್ಟುಕೊಳ್ಳುವೆ. ನಾವೆಲ್ಲ ಒಂದು ಎಂಬಂತೆ ಕೆಲಸ ಮಾಡೋಣ. ಪಕ್ಷದ ಬಗ್ಗೆ ದುಡಿಯೋಣ ಎಂದರು.

ಬಿಜೆಪಿ ಸರ್ಕಾರ ನಮ್ಮ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ನೀಡಿದೆ. ಎರಡು ದಿನದಲ್ಲಿ ಶರಾವತಿ ಕುಡಿಯುವ ನೀರಿನ ಯೋಜನೆ ಮುಕ್ತಾಯಗೊಳಿಸುವೆ ಎಂದ ಅವರು, ಹೊನ್ನಾವರದವರನ್ನು ನಾನು ಮರೆಯುವುದಕ್ಕೆ ಸಾಧ್ಯವಿಲ್ಲ ನನ್ನನ್ನು ಗೆಲ್ಲಿಸಿದವರೇ ಅವರು. ಇದಕ್ಕೆ ಮೂಲ ಅಡಿಪಾಯವೇ ಕುಮಟಾದವರು ಎಂದರು. ಕಾರ್ಯಕರ್ತರು ನಿಮಗೇನಾದರೂ ತೊಂದರೆ ಆದಲ್ಲಿ ನನಗೆ ಫೋನ್ ಮಾಡಬಹುದು.
ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬಗ್ಗೆ ಹೋರಾಟ ಮಾಡಿ ಆಸ್ಪತ್ರೆ ಕಟ್ಟಿಸುವ ಕೆಲಸ ಮಾಡುವೆ. ಎಲ್ಲರೂ ಬನ್ನಿ ಹೋರಾಟ ಮಾಡಿ ಆಸ್ಪತ್ರೆ ಕಟ್ಟಿಸುವ ಕೆಲಸ ಮಾಡೋಣ ಎಂದರು.

RELATED ARTICLES  ಫೆ. ೧೦ ಸೌಗಂಧಿಕ ಕವನ ಸಂಕಲನ ಬಿಡುಗಡೆ

ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ಮಾತನಾಡಿ ನಿರೀಕ್ಷೆ ನಮ್ಮ ಮುಂದಿಲ್ಲ. ತಕ್ಕ ಮಟ್ಟಿಗೆ ನಮಗೆ ಫಲ ದೊರೆತಿಲ್ಲ. ಬಿಜೆಪಿಯ ಯಾವತ್ತೂ ಮತದಾರರು ಯಾವುದೇ ಗ್ಯಾರಂಟಿ ಕಾರ್ಡ್ ಕಣ್ಣೆತ್ತೂ ನೋಡಿಲ್ಲ. ಜೆಡಿಎಸ್ ವೈಫಲ್ಯ. ಅದರಲ್ಲಿರುವ ಎಲ್ಲರೂ ಕಾಂಗ್ರೆಸ್ ಗೆ ಬೆಂಬಲ ನೀಡಿದ್ದರಿಂದ ಈ ಸ್ಥಿತಿ ಇದೆ ಎಂದರು.

ಜಿಲ್ಲಾ ಚುನಾವಣಾ ಪ್ರಭಾರಿ ಕೆ.ಜಿ ನಾಯ್ಕ ಮಾತನಾಡಿ ಗ್ಯಾರಂಟಿ ಕಾರ್ಡ ತುಂಬಾ ದಿನ ಬಾಳಿಕೆ ಬರಲಾರದು. ಪಕ್ಷ ಸಂಘಟನೆಯ ಕಡೆಗೆ ನಾವು ದೃಷ್ಟಿ ಇಡಬೇಕು ಎಂದರು. ಪಕ್ಷದ ಸಹ ಪ್ರಭಾರಿ ಎನ್.ಎಸ್. ಹೆಗಡೆ ಪಕ್ಷದ ಕಾರ್ಯಕರ್ತರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.

ಮಂಡಲಾಧ್ಯಕ್ಷ ರಾಜು ಭಂಡಾರಿ, ಹೇಮಂತ ಗಾಂವಕರ್, ಎನ್.ಎಸ್.ಹೆಗಡೆ, ಪ್ರಶಾಂತ ನಾಯ್ಕ, ಸುರೇಶ ಮೇಸ್ತ, ವೆಂಕಟ್ರಮಣ ಹೆಗಡೆ ಕವಲಕ್ಕಿ, ನಾಗರಾಜ ನಾಯ್ಕ ತೊರ್ಕೆ,ಉಷಾ ಹೆಗಡೆ ಇನ್ನಿತರ ಪ್ರಮುಖರು ಇದ್ದರು. ಕಾರ್ಯಕರ್ತರ ಪರವಾಗಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರುಗಳನ್ನು ಸಭೆಯಲ್ಲಿ ಗೌರವಿಸಲಾಯಿತು. ಮಂಡಲದ ವತಿಯಿಂದ ಪದಾಧಿಕಾರಿಗಳು ಶಾಸಕ ದಿನಕರ ಶೆಟ್ಟಿಯವರನ್ನು ಅಭಿನಂದಿಸಿದರು.