ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದೇ ಸಮನೆ ಭಾರೀ ಗುಡುಗು- ಮಿಂಚು,ಗಾಳಿ ಸಹಿತ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಜಿಲ್ಲೆಯ ಕಾರವಾರ, ಅಂಕೋಲಾ, ಹಳಿಯಾಳ, ಶಿರಸಿ, ಕುಮಟಾ ಭಾಗದಲ್ಲಿ ಬಿರುಗಾಳಿಯಂತೆ ಗಾಳಿ ಬೀಸುತ್ತಿದ್ದು, ಅದರ ಜೊತೆಗೆ ಭಾರೀ ಮಳೆಯಾಗಿದೆ.
ಬೆಳಿಗ್ಗಿನಿಂದ ಸಂಜೆಯವರೆಗೂ ಧೂಳು ಮಿಶ್ರಿತ ಭಾರಿ ಗಾಳಿ ಕರಾವಳಿಯಲ್ಲಿ ಬೀಸುತಿದ್ದು, ಸಂಜೆಯ ಬಳಿಕ ಅದು ತಂಪು ಗಾಳಿಯೊಂದಿಗೆ ಮಳೆಯಾಗಿ ಪರಿವರ್ತನೆಯಾಗಿದೆ ಎನ್ನಲಾಗಿದೆ.
ಸಂಜೆ ಸುರಿದ ಮಳೆಯಿಂದಾಗಿ ವ್ಯಾಪಾರ- ಕಚೇರಿಗಳನ್ನು ಮುಚ್ಚಿ ತೆರಳುತ್ತಿದ್ದವರು ಪರದಾಡಿದರು. ಗೂಡಂಗಡಿ,
ರಸ್ತೆಬದಿಯ ವ್ಯಾಪಾರಿಗಳು ತಮ್ಮ ವ್ಯಾಪಾರದ ಸಾಮಗ್ರಿಗಳನ್ನು ರಕ್ಷಿಸಿಕೊಳ್ಳಲು ಹರಸಾಹಸಪಟ್ಟರು. ಗಾಳಿ – ಮಳೆಯಿಂದಾಗಿ ವಿದ್ಯುತ್ ಕೈಕೊಟ್ಟಿದ್ದು, ಎಲ್ಲೆಡೆ ನಿಶ್ಯಬ್ದದ ಕತ್ತಲು ಆವರಿಸಿತು.
ಇನ್ನೂ ನಾಲ್ಕು ದಿನಗಳ ಕಾಲ ಭಾರೀ ಮಳೆಯಾಗುವ ಸಂಭವವಿದ್ದು, ಸಾರ್ವಜನಿಕರು ಎಚ್ಚರಿಕೆ ವಹಿಸಲು ಹವಾಮಾನ ಇಲಾಖೆ ಕೂಡ ಮುನ್ಸೂಚನೆ ನೀಡಿದೆ ಎಂದು ವರದಿಯಾಗಿದೆ.
ಇನ್ನು ರಾತ್ರಿಯಿಡೀ ಮಲೆನಾಡು ಭಾಗದಲ್ಲಿ ಮಳೆಯಾದರೆ ನದಿಗಳು ತುಂಬಿ ಹರಿಯುವ ಸಾಧ್ಯತೆ ಇದ್ದು, ಮತ್ತೆ ಪ್ರವಾಹದ ಭೀತಿ ಕೂಡ ಕರಾವಳಿಯ ನದಿ ಭಾಗದ ಜನರಲ್ಲಿ ಆವರಿಸಿದೆ ಎಂದು ತಿಳಿದುಬಂದಿದೆ.