ಕಾರವಾರ: ಟೆಂಪೋ ಹಾಗೂ ಲಗೇಜ್ ರಿಕ್ಷಾ ನಡುವೆ ಮುಖಾಮುಖಿ ಡಿಕ್ಕಿಯಾಗಿ ರಿಕ್ಷಾ ಚಾಲಕ ಗಾಯಗೊಂಡಿರುವ ಘಟನೆ ನಗರದ ಬಿಣಗಾ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.
ಅಂಕೋಲಾದಿಂದ ಕಾರವಾರ ಕಡೆ ಪ್ರಯಾಣಿಕರನ್ನು ಕರೆತರುತ್ತಿದ್ದ ಟೆಂಪೋ ಹಾಗೂ ಅಂಕೋಲಾ ಕಡೆ ಹೋಗುತ್ತಿದ್ದ ಲಗೇಜ್ ರಿಕ್ಷಾ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ರಿಕ್ಷಾ ಪಲ್ಟಿಯಾಗಿ
ಮುಂಭಾಗ ನುಜ್ಜುಗುಜ್ಜಾಗಿದ್ದು, ಈ ಘಟನೆಯಲ್ಲಿ ರಿಕ್ಷಾ ಚಾಲಕ ಗಾಯಗೊಂಡಿದ್ದಾನೆ ಎನ್ನಲಾಗಿದೆ.
ತಕ್ಷಣವೇ ಆತನನ್ನು ನಗರದ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ಅಪಘಾತದ ಬಳಿಕ ಸ್ಥಳದಲ್ಲಿ ಕೆಲ ಕಾಲ ಸಂಚಾರ ಸಮಸ್ಯೆ ಏರ್ಪಟ್ಟಿತ್ತು. ನಂತರ ಸ್ಥಳಕ್ಕಾಗಮಿಸಿದ ಪೊಲೀಸರು ವಾಹನಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದಾರೆ. ಈ ಬಗ್ಗೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.