ಕುಮಟಾ : ಘೋಷಣೆ ಮಾಡಿದ ಗ್ಯಾರಂಟಿಗಳನ್ನು ಎಲ್ಲರಿಗೂ ನೀಡದೆ ಕಾಂಗ್ರೆಸ್ ಪಕ್ಷ ಜನರಿಗೆ ಮೋಸ ಮಾಡುತ್ತಿದೆ ಎಂದು ಬಿಜೆಪಿ ಮುಖಂಡ ಎಂ.ಜಿ ಭಟ್ಟ ಟೀಕಿಸಿದ್ದಾರೆ.
ಈಗಾಗಲೇ ಕಾಂಗ್ರೆಸ್ ಪಕ್ಷವು ಅಧಿಕಾರವನ್ನು ಹಿಡಿಯಲೇಬೇಕೆಂಬ ಅಭಿಲಾಷೆಯಿಂದ ಕರ್ನಾಟಕದ ಜನತೆಗೆ 5 ಗ್ಯಾರಂಟಿಗಳನ್ನು ಪ್ರತಿಯೊಬ್ಬರಿಗೂ ಅನ್ವಯ ಆಗುವಂತೆ ಘೋಷಣೆ ಮಾಡಿತು. ಆದರೆ ಅಧಿಕಾರ ಬಂದ ಮೇಲೆ ತನ್ನ ಆಶ್ವಾಸನೆಯಿಂದ ಉಲ್ಟಾ ಹೊಡೆದಿದ್ದು ಕೆಲವೊಂದಿಷ್ಟು ಕಂಡಿಷನ್ ಗಳನ್ನು ಹಾಕುತ್ತಿದೆ. ಇದು ಜನರಿಗೆ ಮಾಡಿದ ಮೋಸ. ಘೋಷಣೆ ಮಾಡುವಾಗ ಸಿದ್ದರಾಮಯ್ಯನವರು ಎಲ್ಲರಿಗೂ ಕರೆಂಟ್ ಉಚಿತ ನನಗೂ ಉಚಿತ, ನಿಮಗೂ ಉಚಿತ ಪ್ರತಿಯೊಬ್ಬರಿಗೂ ಉಚಿತ ಎಂಬ ಅವರ ಹೇಳಿಕೆ ಕರ್ನಾಟಕದ ಜನರು ನಂಬಿ ಅವರಿಗೆ ವೋಟ್ ಹಾಕಿ ಅಧಿಕಾರಕ್ಕೆ ತಂದಿದ್ದಾರೆ. ಆದರೆ ಇಂದು ಇದೇ ಸಿದ್ದರಾಮಯ್ಯ ತನ್ನ ಮಾತಿನಿಂದ ಉಲ್ಟಾ ಹೊಡೆದಿದ್ದು ಅನೇಕ ನಿಬಂಧನೆಗಳನ್ನು ಹಾಕಿ ಕೊಡುವ ವಿಚಾರ ಮಾಡುತ್ತಿದ್ದಾರೆ.
ಇದೇ ರೀತಿ ಎಲ್ಲಾ ಮಹಿಳೆಯರಿಗೂ ಕರ್ನಾಟಕದ ಯಾವುದೇ ಮೂಲೆಗಳಿಗೂ ಸಂಚರಿಸಿದರೆ ಕೆ.ಎಸ್.ಆರ್.ಟಿ. ಸಿ ಬಸ್ ನಲ್ಲಿ ಉಚಿತ ಎಂಬ ಡಿಕೆಶಿಯವರ ಮಾತೂ ಕೂಡಾ ತಪ್ಪುತ್ತಿರುವಂತಿದೆ. ಅಂದರೆ ಕರ್ನಾಟಕದ ಜನರನ್ನು ಪೆದ್ದುಗಳೆಂದು ಅವರು ತಿಳಿದಂತಿದೆ. ಘೋಷಣೆ ಮಾಡಬೇಕಾದರೆ ಕರ್ನಾಟಕದ ಪ್ರತಿಯೊಬ್ಬರಿಗೂ ಉಚಿತ ಎಂದು ಘೋಷಣೆ ಮಾಡಿ ಈಗ ಇಲ್ಲಸಲ್ಲದ ಕಂಡಿಷನ್ ಗಳನ್ನು ಹಾಕಿದರೆ ಕರ್ನಾಟಕದ ಜನರು ಸರ್ಕಾರದ ವಿರುದ್ಧ ದಂಗೆ ಹೇಳುವ ಸಾಧ್ಯತೆಗಳ ಹೆಚ್ಚು ಎಂದಿದ್ದಾರೆ.
ಜನರಿಗೆ ಮರಳು ಮಾಡುವ ಘೋಷಣೆಗಳನ್ನ ಮಾಡಿ ಈಗ ಆ ಘೋಷಣೆಗಳನ್ನು ಅನ್ವಯಿಸುವಲ್ಲಿ ಬೇರೆ ಬೇರೆ ರೀತಿಯ ಕಂಡಿಷನ್ಗಳನ್ನ ಹಾಕಿ ಆಸೆ ಕಣ್ಣುಗಳಿಂದ ನೋಡುತ್ತಿರುವ ಜನರಿಗೆ ನಿರಾಸೆ ಮೂಡುವಂತೆ ಮಾಡುತ್ತಿರುವುದು ಇಡೀ ಕರ್ನಾಟಕದ ಜನತೆಗೆ ಮಾಡುತ್ತಿರುವ ಮಹಾ ಮೋಸವಾಗಿದೆ. ಈಗಾಗಲೇ ಘೋಷಣೆ ಮಾಡಿದ ಎಲ್ಲಾ ಗ್ಯಾರೆಂಟಿಗಳನ್ನು ಯಾವುದೇ ಕಂಡೀಶನ್ ಹಾಕದೆಯೇ ಕರ್ನಾಟಕದ ಪ್ರತಿಯೊಬ್ಬ ಜನತೆಗೂ ಕೂಡ ತಲುಪುವಂತೆ ಸರ್ಕಾರ ಆದೇಶ ಮಾಡಬೇಕಾಗಿದೆ. ಅದಲ್ಲದೆ ತನ್ನ ಮೂಗಿನ ನೇರಕ್ಕೆ ವಿಚಾರ ಮಾಡುವುದಾದರೆ ಕರ್ನಾಟಕದ ಜನರೆಲ್ಲ ದಡ್ಡರಲ್ಲ ಸರಿಯಾದ ಸಮಯದಲ್ಲಿ ಸರಿಯಾದ ಹೋರಾಟವನ್ನು ಮಾಡುತ್ತಾರೆ ಹಾಗೂ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.