ಕಾರವಾರ: ಮಳೆಗಾಲ ಆರಂಭವಾಗುತ್ತಿರುವುದರಿಂದ ವಾತಾವರಣದಲ್ಲಿ ಬದಲಾವಣೆಯಾಗಿ ಅನೇಕ ರೋಗರುಜಿನ ಹರಡುವುದು ಸಾಮಾನ್ಯ. ಅಂತಹ ರೋಗರುಜಿನಗಳಿಗೆ ತಡೆಗಟ್ಟಲು ಅರೋಗ್ಯ ಇಲಾಖೆಯು ಪೂರ್ವ ತಯಾರಿ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಸೂಚಿಸಿದರು.
ಇಲ್ಲಿನ ಜಿಲ್ಲಾಧಿಕಾರಿಗಳ ಕಾರ್ಯಾಲಯದ ನ್ಯಾಯಾಲಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ರೋಗ ನಿಯಂತ್ರಣ ಕಾರ್ಯಕ್ರಮ ಅಂತರ್‌ವಿಭಾಗೀಯ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಡೆಂಗ್ಯೂ ಜ್ವರ, ಚಿಕೂನ್ ಗುನ್ಯಾ, ಮಲೇರಿಯಾ ಲಿಂಫಟಿಕ್ ಫೈಲೇರಿಯಾಸಿಸ್, ಜಪಾನೀಸ್ ಎನ್ಸೆಫಾಲಿಟಿಸ್ ರೋಗಗಳು ಜನರಲ್ಲಿ ಹರಡದಂತೆ ಹಾಗೂ ಸೂಕ್ತ ಮುಂಜಾಗ್ರತೆ ವಹಿಸಬೇಕು. ಜಿಲ್ಲಾಡಳಿತದಿಂದ ಹೆಚ್ಚಿನ ಸಹಕಾರ ನೀಡಲಾಗುವುದು ಎಂದರು.
ಜಿಲ್ಲಾ ರೋಗ ನಿಯಂತ್ರಣಾಧಿಕಾರಿ ಡಾ.ರಮೇಶ್ ರಾವ್ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿ ಜಿಲ್ಲೆಯಲ್ಲಿ ಮೇ ೨೭ರವರೆಗೆ ಒಟ್ಟು ೨ ಮಲೇರಿಯಾ ಪ್ರಕರಣ, ೪ ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದೆ ಎಂದರು. ಕೀಟಜನ್ಯ ರೋಗಗಳ ನಿಯಂತ್ರಣದಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಬಂದರು ಹಾಗೂ ಮೀನುಗಾರಿಕೆ, ಲೋಕೋಪಯೋಗಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಇಲಾಖೆ, ಕೃಷಿ ಇಲಾಖೆ ಆಯುಷ್ ಇಲಾಖೆ ಮುಂತಾದ ಇಲಾಖೆಗಳು ಸಕ್ರಿಯವಾಗಿ ತಮ್ಮ ವ್ಯಾಪ್ತಿಗಳಲ್ಲಿ ಮಳೆ ನೀರು ನಿಲ್ಲದಂತೆ ಅಗತ್ಯ ಕ್ರಮ ವಹಿಸಬೇಕು. ಸೊಳ್ಳೆ ಉತ್ಪತ್ತಿ ತಾಣಗಳನ್ನು ಸ್ವಚ್ಛತೆಯಿಂದ ಇಟ್ಟುಕೊಳ್ಳುವುದು ಹಾಗೂ ಈ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಜಿಲ್ಲೆಯಲ್ಲಿ ಎಲ್ಲಾ ಆಸ್ಪತ್ರೆಗಳಲ್ಲಿ ಅಗತ್ಯ ಸಲಕರಣೆಗಳ ವ್ಯವಸ್ಥೆ ಮಾಡಿಕೊಳ್ಳುವುದು, ಔಷಧಿಗಳ ಸಂಗ್ರಹ, ಅಂಬ್ಯುಲೆನ್ಸ್ಗಳ ನಿರ್ವಹಣೆ, ಸಿಬ್ಬಂದಿಗಳ ನೇಮಕ ಮುಂತಾದವುಗಳ ಬಗ್ಗೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಯಲ್ಲಾಪುರ ತಾಲೂಕಿನಲ್ಲಿ ಪರಿಣಿತ ವೈದ್ಯರು ಇಲ್ಲದೆ ಕೇವಲ ಸಿಬ್ಬಂದಿ ವರ್ಗದವರು ಗರ್ಭಿಣಿ ಮಹಿಳೆಯರಿಗೆ ಸ್ಕ್ಯಾನಿಂಗ್ ಸೆಂಟರ್‌ನಲ್ಲಿ ಸ್ಕ್ಯಾನಿಂಗ್ ಮಾಡುತ್ತಿದ್ದು, ಅದು ಸರಿಯಾದ ಫಲಿತಾಂಶ ನೀಡದೆ ಇರುವ ಬಗ್ಗೆ ದೂರು ಬಂದಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಈ ಬಗ್ಗೆ ಕ್ರಮ ವಹಿಸಿ ಪರಿಶೀಲಿಸಿ ಶಿಸ್ತು ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ನಕಲಿ ವೈದ್ಯರು ಇರುವುಕೆಯ ಬಗ್ಗೆ ಮಾಹಿತಿ ಇದ್ದು, ಈ ಬಗ್ಗೆ ದುರುಗಳು ಕೂಡ ಬಂದಿರುತ್ತವೆ. ಅದಾಗಿಯೂ ಈವರೆಗೆ ಅಂಥವರ ಮೇಲೆ ಯಾವುದೇ ಕ್ರಮ ಜರುಗಿಸಿರುವುದಿಲ್ಲ. ಈ ಕೂಡಲೇ ನಕಲಿ ವೈದ್ಯರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಜರುಗಿಸಬೇಕು ಎಂದು ತಿಳಿಸಿದರು. ಮನೆ ಹೆರಿಗೆಯ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು 108 ಅಂಬ್ಯುಲೆನ್ಸ್ ಗಳು ಸರಿಯಾದ ಸಮಯಕ್ಕೆ ಬಾರದೆ ತಡವಾಗಿ ಬಂದಿರುವ ಕಾರಣಕ್ಕಾಗಿ ಮನೆ ಹೆರಿಗೆ ಸಂಭವಿಸುತ್ತಿದ್ದು, ಇದು ಅಪಾಯಕಾರಿ ಬೆಳವಣಿಗೆ, ತುರ್ತು ಸಂದರ್ಭದಲ್ಲಿ 108 ಅಂಬ್ಯುಲೆನ್ಸ್ ಗಳು ಅನಾರೋಗ್ಯಕ್ಕೆ ಒಳಗಾದ ವ್ಯಕ್ತಿಯ ಮನೆಗೆ ತೆರಳಬೇಕು ತಡವಾಗಿ ಬರುವಂತಹ ಅಂಬ್ಯುಲೆನ್ಸ್ ಗಳು ಮಾಹಿತಿ ಪಡೆದು ಅವರ ಮೇಲೆ ಕಠಿಣ ಕ್ರಮ ಜರುಗಿಸಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಅನ್ನಪೂರ್ಣ ವಸ್ತ್ರದ, ಜಿಲ್ಲಾ ವೈದ್ಯಕೀಯ ಅಧೀಕ್ಷಕರು ಶಿವಾನಂದ ಕುಡ್ತಲಕರ, ಜಿಲ್ಲಾ, ತಾಲೂಕು ಮಟ್ಟದ ವೈದ್ಯಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಇತರ ಅಧಿಕಾರಿಗಳು ಉಪಸ್ಥಿತರಿದ್ದರು ವರದಿಯಾಗಿದೆ.