ಉತ್ತರಾಖಂಡ್: ಭಾರೀ ಭೂಕುಸಿತ ಸಂಭವಿಸಿದ ಪರಿಣಾಮ ರಸ್ತೆಯ ಭಾಗ ಕೊಚ್ಚಿಕೊಂಡು ಹೋಗಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿರುವ ಕಾರಣ ಸುಮಾರು 300ಕ್ಕೂ ಅಧಿಕ ಪ್ರಯಾಣಿಕರು ದಾರಿ ಮಧ್ಯೆ ಸಿಲುಕಿಕೊಂಡಿರುವ ಘಟನೆ ಉತ್ತರಾಖಂಡ್ ನ ಪಿಥೋರಾಗಢ್ ನಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.
ಲಖನ್ ಪುರ್ ಸಮೀಪದ ಧಾರ್ಚುಲಾದಿಂದ 45 ಕಿಲೋ ಮೀಟರ್ ಎತ್ತರದ ಲಿಪುಲೇಖ್ -ತವಾಘಾಟ್ ನ ರಸ್ತೆ ಸುಮಾರು 100 ಮೀಟರ್ ನಷ್ಟು ಭೂಮಿ ಕುಸಿದು ಹೋಗಿದ್ದು, ಇದರಿಂದಾಗಿ ಧಾರ್ಚುಲಾ ಮತ್ತು ಗುಂಜಿ ಪ್ರದೇಶದ ನಡುವೆ ಸುಮಾರು 300 ಪ್ರಯಾಣಿಕರು ಪರದಾಡುವಂತಾಗಿದೆ ಎನ್ನಲಾಗಿದೆ.
ಎಎನ್ ಐ ನ್ಯೂಸ್ ಏಜೆನ್ಸಿ ವರದಿ ಪ್ರಕಾರ, ಭಾರೀ ಭೂಕುಸಿತದಿಂದ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಎರಡು ದಿನಗಳ ಕಾರ್ಯಾಚರಣೆ ನಂತರ ಸಂಚಾರ ವ್ಯವಸ್ಥೆ ಸುಗಮವಾಗುವ ನಿರೀಕ್ಷೆ ಇದೆ ಎಂದು ತಿಳಿಸಿದೆ.
ಅಷ್ಟೇ ಅಲ್ಲ ರಾಜ್ಯದ ಅಲ್ಮೋರಾ, ಬಾಗೇಶ್ವರ್, ಚಮೋಲಿ, ಚಂಪಾವತ್, ಡೆಹ್ರಾಡೂನ್, ಗರ್ವಾಲ್, ಹರ್ದ್ವಾರ್, ನೈನಿತಾಲ್, ಪಿಥೋರಾಗಢ್, ರುದ್ರಪ್ರಯಾಗ್, ತೆಹ್ರಿ ಗರ್ವಾಲ್, ಉದಮ್ ಸಿಂಗ್ ನಗರ್ ಮತ್ತು ಉತ್ತರಕಾಶಿ ಜಿಲ್ಲೆಗಳಲ್ಲಿ ಧೂಳಿನ ಬಿರುಗಾಳಿ ಮತ್ತು ಗುಡುಗ ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಯಾತ್ರಾರ್ಥಿಗಳು ಸುರಕ್ಷಿತ ಸ್ಥಳದಲ್ಲಿ ವಾಸ್ತವ್ಯ ಹೂಡಬೇಕು ಎಂದು ಮನವಿ ಮಾಡಿಕೊಂಡಿರುವ ಪೊಲೀಸರು, ಭೂಕುಸಿತ ಸಂಭವಿಸುತ್ತಿರುವುದರಿಂದ ಅನಗತ್ಯ ಪ್ರಯಾಣ ಬೇಡ, ವಾಹನಗಳನ್ನು ಸುರಕ್ಷಿತ ಸ್ಥಳದಲ್ಲಿ ನಿಲ್ಲಿಸುವಂತೆ ಸೂಚನೆ ನೀಡಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ.