ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾದ ಮಾನ್ಯ ದಿನಕರ ಶೆಟ್ಟಿಯವರು ಕುಮಟಾದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ, ರೋಗಿಗಳ ಯೋಗಕ್ಷೇಮ ವಿಚಾರಿಸಿದರು. ಆಸ್ಪತ್ರೆಯ ಕುಂದುಕೊರತೆಗಳ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದರು. ದಿನಕರ ಶೆಟ್ಟಿಯವರ ಪ್ರಯತ್ನದಿಂದ ಬಿ. ಇ. ಎಲ್. ಸಂಸ್ಥೆಯ ಸಿ. ಎಸ್. ಆರ್. ನಿಧಿಯಿಂದ ಕುಮಟಾ ತಾಲೂಕಾಸ್ಪತ್ರೆಯ ಪ್ರಯೋಗಲಾಯಕ್ಕೆ ಅತ್ಯಾಧುನಿಕ ಯಂತ್ರೋಪಕರಣಗಳು ದೊರೆತಿದ್ದು, ಜನಸಾಮಾನ್ಯರಿಗೆ ಅತ್ಯಂತ ಕಡಿಮೆ ಖರ್ಚಿನಲ್ಲಿ ವೈದ್ಯಕೀಯ ತಪಾಸಣೆಗಳು ಇಲ್ಲಿಯೇ ದೊರಕುತ್ತಿವೆ. ಇದರಿಂದ ಬಡ ರೋಗಿಗಳಿಗೆ ಆರ್ಥಿಕ ಹೊರೆ ತಪ್ಪುವುದಲ್ಲದೆ, ರಕ್ತ, ಮೂತ್ರ ಪರೀಕ್ಷೆಯ ರಿಪೋರ್ಟ್ ಗಳು ಕೂಡಲೇ ಲಭ್ಯವಾಗುತ್ತಿವೆ. ಪ್ರಯೋಗಾಲಯಕ್ಕೆ ಇನ್ನೋರ್ವ ಸಿಬ್ಬಂದಿಯ ಅವಶ್ಯಕತೆ ಇರುವಬಗ್ಗೆ ವೈದ್ಯರಿಂದ ಮಾಹಿತಿಪಡೆದ ಶಾಸಕರು, ಅತಿಶೀಘ್ರದಲ್ಲಿ ಈ ಬೇಡಿಕೆಯನ್ನು ಪೂರೈಸುವುದಾಗಿ ತಿಳಿಸಿದರು.
ನಂತರ ಡಯಾಲಿಸಿಸ್ ಹಾಗೂ ಐ. ಸಿ. ಯು. ಘಟಕಕ್ಕೆ ಭೇಟಿನೀಡಿ, ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಸಂಬಂಧಿಕರೊಡನೆ ಮಾತನಾಡಿದರು. ಲಭ್ಯವಿರುವ ಆರು ಡಯಾಲಿಸಿಸ್ ಯಂತ್ರಗಳ ಪೈಕಿ ಎರಡು ಯಂತ್ರಗಳು ತಾಂತ್ರಿಕ ದೋಷದ ಕಾರಣದಿಂದ ಸೇವೆಯನ್ನು ಸ್ಥಗಿತಗೊಳಿಸಿದ್ದು, ಅವುಗಳನ್ನು ಕೂಡಲೇ ಸರಿಪಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಆಡಳಿತ ವೈದ್ಯಾಧಿಕಾರಿಗಳಿಗೆ ಸೂಚಿಸಿದರು. ಅರ್ಥೋಪೇಡಿಕ್ ಟ್ರಾಮಾ ಸೆಂಟರ್ ಕಟ್ಟಡ ನಿರ್ಮಾಣವು ಶಾಸಕರ ಕಾಳಜಿಯಿಂದ ತ್ವರಿತಗತಿಯಲ್ಲಿ ಸಾಗುತ್ತಿದ್ದು, ಕೆಲವೇ ತಿಂಗಳುಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ.