ಕುಮಟಾ : ತಾಲೂಕಿನ ಕೊಪ್ಪಳಕರವಾಡಿಯಲ್ಲಿ ನೂತನವಾಗಿ ಪ್ರಾರಂಭಿಸಿದ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ ಶ್ರೀ ಆದಿಚುಂಚನಗಿರಿ ಆಂಗ್ಲ ಮಾಧ್ಯಮ ಶಾಲೆಯ ಪ್ರಾರಂಭೋತ್ಸವ ಅತ್ಯಂತ ವಿಜ್ರಂಭಣೆಯಿಂದ ನಡೆಯಿತು. ತಳಿರು ತೋರಣಗಳಿಂದ ವಿದ್ಯಾಲಯವನ್ನು ಅಲಂಕರಿಸಿ, ಶಾಲೆಗೆ ಬಂದ ಮಕ್ಕಳಿಗೆ ಶಿಕ್ಷಕ ವೃಂದದವರು ಸಿಹಿವಿತರಿಸಿ, ತುಂಬಾ ಆದರದಿಂದ ಬರಮಾಡಿಕೊಂಡರು.
ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಮಕ್ಕಳೇ ಜ್ಯೋತಿ ಬೆಳಗಿಸಿ, ಭೈರವೈಕ್ಯ ಜಗದ್ಗುರು ಶ್ರೀಶ್ರೀಶ್ರೀ ಡಾ|| ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಭಾವಚಿತ್ರಕ್ಕೆ ಆರತಿ ಬೆಳಗಿ, ಪುಷ್ಪ ನಮನ ಸಲ್ಲಿಸಿ, ಭೈರವಾಷ್ಟಕಂ ಶ್ಲೋಕ ಪಠಿಸಿ ಉದ್ಘಾಟಿಸಿದರು.
ಮುಖ್ಯ ಶಿಕ್ಷಕಿ ನಿರ್ಮಲಾ ಪ್ರಭುರವರು ಮಕ್ಕಳ ಹಣೆಗೆ ತಿಲಕ ಹಚ್ಚಿ, ಶಾಲೆಯ ಮಹತ್ವ ಮತ್ತು ಮಕ್ಕಳು ಶಾಲೆಯಲ್ಲಿ ಹೇಗಿರಬೇಕು, ಯಾವ ರೀತಿ ಶಿಸ್ತು ಪಾಲನೆ ಮಾಡಬೇಕು ಎಂಬ ಉಪಯುಕ್ತ ಮಾಹಿತಿ ನೀಡಿ, ಮಕ್ಕಳ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು.
ಶಿಕ್ಷಕಿ ಸುನೀತಾ ನರೋನಾರವರು ಮಕ್ಕಳಿಗೆ ಪುಷ್ಪಗುಚ್ಛ ನೀಡಿದರು. ಶಿಕ್ಷಕಿ ಮಹಾಲಕ್ಷ್ಮೀ ಹರಿಕಂತ್ರ, ನಾಗವೇಣಿ, ಶ್ವೇತಾ ಪಟಗಾರ ಮಕ್ಕಳಿಗೆ ಆರತಿ ಬೆಳಗಿ ಸ್ವಾಗತಿಸಿದರು. ಮಕ್ಕಳಿಗೆ ವಿವಿಧ ಚಟುವಟಿಕೆ, ಮನೋರಂಜನಾತ್ಮಕ ಆಟಗಳ ಮೂಲಕ ಅವರಲ್ಲಿ ಹೊಸ ಹುಮ್ಮಸ್ಸು, ಹುರುಪನ್ನು ಇಮ್ಮಡಿಗೊಳಿಸುವ ಕಾರ್ಯ ನಡೆಯಿತು.