ಕುಮಟಾ : ಇಲ್ಲಿನ ಹವ್ಯಕ ವಿದ್ಯಾವರ್ಧಕ ಸಂಘದ ಅಂಗ ಸಂಸ್ಥೆ ‘ಯಾಜ್ಞವಲ್ಕ್ಯ ಸಾಂಸ್ಕೃತಿಕ ವೇದಿಕೆ ‘ ಹಾಗೂ ಅಖಿಲ ಭಾರತೀಯ ಸಾಹಿತ್ಯ ಪರಿಷತ್, ಕುಮಟಾ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ “ಭಾರತೀಯ ದರ್ಶನ ” ಎಂಬ ವಿಷಯದ ಕುರಿತಾಗಿ ನಡೆದ ಉಪನ್ಯಾಸ ಕಾರ್ಯಕ್ರಮ ಶ್ರೋತ್ರುಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಯಿತು.

ವಿಷ್ಣು ಸಹಸ್ರನಾಮ ಪಠಣದೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಅಗಮಿಸಿದ ಪ್ರೋ. ಮಹೇಶ ಭಟ್ಟ, ದರ್ಶನಗಳೆಂದರೆ ಪರಮಾತ್ಮನನ್ನು ತಲುಪಲು ಇರುವ ಮಾರ್ಗಗಳೆಂದು ತಿಳಿಸಿದರು. ದರ್ಶನಗಳಲ್ಲಿ ಆಸ್ತಿಕ ಹಾಗೂ ನಾಸ್ತಿಕಗಳೆಂಬ ಭೇದವಿದೆಯೆಂದೂ, ವೇದ ಪ್ರಮಾಣ ಒಪ್ಪುವವರು ಆಸ್ತಿಕರೆಂದೂ, ಒಪ್ಪದವರು ನಾಸ್ತಿಕರೆಂದೂ ತಿಳಿಸಿದರು. ಒಟ್ಟು 16 ದರ್ಶನಗಳೆವೆಯೆಂದೂ ಅವುಗಳಲ್ಲಿ ಆರು ಮಾತ್ರ ಮುಖ್ಯವಾದವುಗಳು ಎನ್ನುತ್ತಾ, ವ್ಯಾಕರಣ ದರ್ಶನವನ್ನು ವಿವರಿಸಿದರು.

RELATED ARTICLES  ಬಿ.ಎಸ್ಸಿ. ಅಂತಿಮ ವರ್ಷದಲ್ಲಿ ಎಸ್.ಡಿ.ಎಂ ವಿದ್ಯಾರ್ಥಿಗಳ ಸಾಧನೆ.

ಶಬ್ಧಗಳ ಬಗ್ಗೆ ವಿವರಿಸುತ್ತ, ಸಾಧು ಶಬ್ಧ ಹಾಗೂ ಅಸಾಧು ಶಬ್ದಗಳ ಜ್ಞಾನ ತಿಳಿಸುವುದೇ ವ್ಯಾಕರಣ ದರ್ಶನ, ಶಬ್ಧ ಅಕ್ಷರಗಳ ಉತ್ಪತ್ತಿ, ಪರಾ ಪಶ್ಯಂತಿ ಮಧ್ಯಮ ಹಾಗೂ ವೈಖರಿಯ ಬಗ್ಗೆ ವಿವರಿಸಿ ಹೇಗೆ ನಮ್ಮ ವ್ಯಾಕರಣ ದರ್ಶನವು ವೈಜ್ಞಾನಿಕ ತಳಹದಿಯ ಮೇಲೆ ರೂಪುಗೊಂಡಿದೆಯೆಂದು ವಿವರಿಸಿದರು.

ಇನ್ನೋರ್ವ ಉಪನ್ಯಾಸಕ ಆದರ್ಶ ಭಟ್ಟ ಮೀಮಾಂಸ ದರ್ಶನದ ಪರಿಚಯ ಮಾಡುತ್ತಾ, ಆರೂ ದರ್ಶನಗಳ ಬಗ್ಗೆ ಸ್ಥೂಲವಾಗಿ ವಿವರಿಸಿ, ಮೀಮಾಂಸೆಯನ್ನು ವಿಶದವಾಗಿ ವಿವರಿಸಿದರು. ಈ ದರ್ಶನದ ಪ್ರಕಾರ ಪರಲೋಕ ನಂಬುವವರು ಆಸ್ತಿಕರೆಂದೂ ನಂಬದವರು ನಾಸ್ತಿಕರೆಂದೂ ತಿಳಿಸಿದರು. ದೇವರ ಅಸ್ತಿತ್ವ ನಂಬದಿದ್ದರೂ ಪರಲೋಕ ನಂಬುವ ಜೈನ ಹಾಗೂ ಬೌದ್ಧ ಧರ್ಮಗಳು ಇದರ ಪ್ರಕಾರ ಹೇಗೆ ನಾಸ್ತಿಕವಾಗುವುದಿಲ್ಲ ಎಂಬುದನ್ನು ವಿವರಿಸಿದರು. ಮೀಮಾಂಸ ದರ್ಶನವು ಪೂಜಾದಿ ಕಾರ್ಯಗಳನ್ನು ಒಪ್ಪುವುದಿಲ್ಲ. ಪೂರ್ವ ಹಾಗೂ ಉತ್ತರ ಮೀಮಾಂಸಗಳಲ್ಲಿಯ ವ್ಯತ್ಯಾಸ ತಿಳಿಸಿ, ಮೋಕ್ಷಕ್ಕೆ ಜ್ಞಾನ ಮಾತ್ರ ಸಾಕೋ ಅಥವಾ ಕರ್ಮವೂ ಬೇಕೋ ಎಂಬುದನ್ನು ಚರ್ಚಿಸಿ, ಕರ್ಮದ ವ್ಯಾಖ್ಯಾನ ಮಾಡುತ್ತಾ, ಜ್ಞಾನ ಹಾಗೂ ಕರ್ಮಗಳೆರಡನ್ನೂ ಮೀಮಾಂಸಾ ದರ್ಶನಗಳ ಆಧಾರದಮೇಲೆ ಸಮನ್ವಯಗೊಳಿಸಿದರು.

RELATED ARTICLES  ಪರಿವರ್ತನಾ ರ್ಯಾಲಿಯ ಯಶಸ್ಸು ತಡೆಯಲು ಮುಖ್ಯಮಂತ್ರಿಯನ್ನು ಜಿಲ್ಲೆಗೆ ಕರೆಸುತ್ತಿದ್ದಾರೆ!

ಮುಖ್ಯ ಅತಿಥಿಗಳಾಗಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಕುಮಟಾ ಘಟಕದ ಅಧ್ಯಕ್ಷ ಪ್ರೊ. ಟಿ.ಜಿ.ಭಟ್ಟ ಸಭೆಯಲ್ಲಿದ್ದರೆ. ಸಭೆಯ ಅಧ್ಯಕ್ಷತೆಯನ್ನು ಹವ್ಯಕ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಶ್ರೀಕಾಂತ ಹೆಗಡೆ ವಹಿಸಿದ್ದರು. ಯಾಜ್ಞವಲ್ಕ್ಯ ವೇದಿಕೆಯ ಸಂಚಾಲಕ ಶ್ರೀ ಚಂದ್ರಶೇಖರ ಉಪಾಧ್ಯಾಯ ಸ್ವಾಗತಿಸಿದರು. ರಾ.ಮ.ಹೆಗಡೆ ನಿರೂಪಿಸಿದರು.