ದಾಂಡೇಲಿ:ಪತ್ರಕರ್ತನನ್ನು ಕೆಳಗಿಳಿಸಿದ ನಿಜಗುಣ ಸ್ವಾಮೀಜಿ
ನಿಜಗುಣ ಸ್ವಾಮೀಜಿಯವರು ಭಾಷಣ ಮಾಡುತ್ತಿರುವುದರ ಪೋಟೋ ತೆಗೆಯಲು ವೇದಿಕೆ ಏರಿದ ಪತ್ರಕರ್ತನನ್ನು ಭಾಷಣವನ್ನು ಮಧ್ಯದಲ್ಲೆ ನಿಲ್ಲಿಸಿ ಕೆಳಗಿಳಿಸಿದ ಘಟನೆ ನಡೆದಿದೆ. ಪತ್ರಕರ್ತ ಕೆಳಗಿಳಿಯುತ್ತಿದ್ದಂತೆಯೆ ಭಾಷಣ ಪ್ರಾರಂಭಿಸುತ್ತಿರುವಾಗಲೆ ಸಂಘಟಕರು ಅವರು ಪತ್ರಕರ್ತರೆಂದು ಮನವರಿಕೆ ಮಾಡಿಕೊಟ್ಟರು. ನಂತರ ಮಾತು ಮುಂದುವರಿಸಿದ ಸ್ವಾಮೀಜಿ ಈ ದೇಶದ ದಲಿತರಿಗೆ ವೇದ, ಆಗಮ, ಉಪನಿಷತ್ತಿನಿಂದ ನ್ಯಾಯ ಕೊಡಲಾಗಲಿಲ್ಲ. ಆದರೆ ದಲಿತರ ರಕ್ಷಣೆ ಮತ್ತು ಕಲ್ಯಾಣಕ್ಕಾಗಿ ಜನ್ಮವೆತ್ತಿ ಬಂದವರು ಅಂಬೆಡ್ಕರ್ ಅವರೊಬ್ಬರೆ. ದಲತರಿಗಾಗಿ ಪ್ರಾಣವನ್ನು ಒತ್ತೆಯಿಟ್ಟು ಶ್ರಮಿಸಿದ ಏಕಮೇವಾ ವ್ಯಕ್ತಿ ಅಂಬೇಡ್ಕರ್ ಅವರು ಬರೆದ ಸಂವಿಧಾನವೆ ನಮ್ಮ ದೇಶದ ಧರ್ಮಗ್ರಂಥವಾಗಬೇಕೆಂದು ಬೈಲೂರಿನ ನಿಷ್ಕಲ ಮಂಟಪದ ಶ್ರೀ ನಿಜಗುಣ ಪ್ರಭು ತೋಂಟದಾರ್ಯ ಮಹಾ ಸ್ವಾಮಿಗಳವರು ಹೇಳಿದರು.
ಅವರು ನಗರದ ಹಳೆ ನಗರ ಸಭಾ ಮೈದಾನದಲ್ಲಿ ಅಂಬೇಡ್ಕರ್ ಸೇನೆಯ ಆಶ್ರಯದಡಿ ನಡೆದ ಬಹುಜನ ಜಾಗೃತಿ ಸಮಾವೇಶದ ಸಾನಿಧ್ಯವಹಿಸಿ ಮಾತನಾಡುತ್ತಿದ್ದರು. ವೈದಿಕ ಸಂಪ್ರದಾಯಸ್ಥರಿಗೆ ನಾವು ಭಯೋತ್ಪಾದಕರಾಗಿದ್ದೇವೆ. ಇಂದು ದಲಿತ ಯುವ ಸಮುದಾಯ ಅರಿಯದೆ, ತಿಳಿಯದೆ ವೈದಿಕ ಪರಂಪರೆಯತ್ತ ವಾಲುತ್ತಿರುವುದು ಮತ್ತು ವೈದಿಕ ಪರಂಪರೆಯ ಕೈಗೊಂಬೆಯಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ದಲಿತ ಸಂರಕ್ಷಕ ಅಂಬೇಡ್ಕರ್ ಹೆಸರಲ್ಲಿ ಬಹಳಷ್ಟು ದಲಿತ ಸಂಘಟನೆಗಳಿದ್ದರೂ ಸಮೂಹ ಸಂಘಟನೆಯ ಕೊರತೆಯಿದೆ. ಆ ಕಾರಣಕ್ಕಾಗಿ ದಲಿತ ಯುವ ಸಮೂಹವನ್ನು ಒಂದೆಡೆ ಸೇರಿಸಿ ಅವರಿಗೆ ಜಾಗೃತಿಯ ಬೀಜವನ್ನು ಬಿತ್ತುವ ಕಾರ್ಯ ದಲಿತ ಸಂಘಟನೆಗಳು ಮಾಡಬೇಕಾದ ತುರ್ತು ಅನಿವಾರ್ಯತೆಯಿದೆ. ದಲಿತರನ್ನು ಸಮಾಜದ ಮುಖ್ಯವಾಹಿನಿಂದ ದೂರವಿಡುವ ಈ ಸಮಾಜವನ್ನು ಬದಲಾಯಿಸಬೇಕಾಗಿದೆ. ಕಾಣುವ ಮನಷ್ಯರನ್ನು ಪ್ರೀತಿ ಮಾಡಲಾಗದ ನಮ್ಮಿಂದ ಕಾಣದಿರುವ ದೇವರನ್ನು ಪ್ರೀತಿ ಮಾಡಲು ಸಾಧ್ಯವೆ? ಎಂಬ ಚಿಂತನೆಯನ್ನು ಮಾಡಬೇಕಾಗಿದೆ. ನಮ್ಮ ಹೋರಾಟ ಯಾರ ವಿರುದ್ದವಲ್ಲ. ಆದರೆ ಅಭಿವೃದ್ಧಿ ಮತ್ತು ಭಾವೈಕ್ಯತೆಯಿಂದ ಈ ರಾಷ್ಟ್ರದ ರಕ್ಷಣೆ ಸಾಧ್ಯ ಎನ್ನುವುದನ್ನು ಜನಮಾನಸಕ್ಕೆ ತಿಳಿಸುವ ಕಾರ್ಯವಾಗಬೇಕೆಂದು ಶ್ರೀ ನಿಜಗುಣ ಸ್ವಾಮಿಗಳು ಕರೆ ನೀಡಿದರು.
ಸಂಸ್ಕøತಿ ಮತ್ತು ಸಂಸ್ಕಾರವನ್ನು ಕಲಿಯಬೇಕಿದ್ದರೇ ಅದು ದಲಿತರಿಂದ ಕಲಿಯಬೇಕು. ಬೆವರು ಸುರಿಸಿ ಸಂಸ್ಕಾರಯುತ ಜೀವನವನ್ನು ನಡೆಸಿಕೊಂಡು ಬಂದಿರುವ ದಲಿತರ ರಕ್ಷಣೆ ದಲಿತರಿಂದ ಮಾತ್ರ ಸಾಧ್ಯ. ಇವತ್ತು ದಲಿತರೇನಾದರೂ ಉನ್ನತ ಹುದ್ದೆಯನ್ನು ಆಲಂಕರಿಸಿದ್ದರೇ ಅದಕ್ಕೆ ಕಾರಣ ಅಂಬೇಡ್ಕರ್ ಅವರು. ಬುದ್ದಿ ಮತ್ತು ತೋಳ್ಬಾಲದಿಂದ ಜೀವನದ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳಲು ಸಾಧ್ಯವಿದೆ ಎನ್ನುವುದನ್ನು ಎಲ್ಲ ದಲಿತರು ಅರಿತುಕೊಳ್ಳಬೇಕು. ಮುಖ್ಯವಾಗಿ ದಲಿತ ಮಹಿಳೆಯರು ಹುಂಬರ ಮೇಳಕ್ಕೆ ಕುಂಭವನ್ನು ಹೊರಲು ಹೋಗಬೇಡಿ. ನಿಮಗೂ ಸ್ವಾಭಿಮಾನವಿದೆ. ನೀವು ಮೊದಲು ಆರ್ಥಿಕವಾಗಿ ಪ್ರಗತಿ ಸಾಧಿಸಲು ಸಮಯ ಮೀಸಲಿಡಿ ಎಂದು ಶ್ರೀ ನಿಜಗುಣ ಸ್ವಾಮಿ ಹೇಳಿದರು. ಇತ್ತೀಚೆಗೆ ಲಿಂಗಾಯಿತರಲ್ಲಿಯೂ ಸಹ ನಾವು ಹಿಂದುಗಳಲ್ಲ ಎಂದು ಬೆಂಕಿ ಹತ್ತಿಕೊಂಡಿರುವ ಪರಿಣಾಮವಾಗಿ ಪ್ರತ್ಯೇಕ ಧರ್ಮಕ್ಕಾಗಿ ಬಡಿದಾಡಿಕೊಳ್ಳುತ್ತಿದ್ದಾರೆ. ನಾನು ದಲಿತನಾಗಿರುವುದರಿಂದ ದಲಿತರ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದೇನೆ. ದಲಿತ ಚಳುವಳಿಗೆ ವೇಗಕೊಡಬೇಕಾಗಿದೆ. ಈ ನಿಟ್ಟಿನಲ್ಲಿ ದಲಿತರೆಲ್ಲರೂ ಒಂದಾಗಿ ಹೋರಾಟವನ್ನು ಸಜ್ಜುಗೊಳಿಸಬೇಕಾಗಿದೆ ಎಂದರಲ್ಲದೇ ನಾನು ಮಹತ್ಮಾನಾಗಲು ಬಂದಿಲ್ಲ ಬದಲಾಗಿ ಹುತಾತ್ಮನಾಗಲು ಬಂದಿದ್ದೇನೆ ಎಂದು ಮಾರ್ಮಿಕವಾಗಿ ಶ್ರೀ ನಿಜಗುಣ ಸ್ವಾಮಿ ನುಡಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಅಂಬೇಡ್ಕರ್ ಸೇನೆಯ ರಾಜ್ಯಾಧ್ಯಕ್ಷ ಪಿ.ಮೂರ್ತಿಯವರು ದಲಿತರ ಸಂರಕ್ಷಣೆ ಮತ್ತು ದಲಿತರಿಗೆ ನ್ಯಾಯಕೊಡುವ ನಿಟ್ಟಿನಲ್ಲಿ ಅಂಬೇಡ್ಕರ್ ಸೇನೆ ಕಂಕಣಬದ್ದವಾಗಿದೆ ಎಂದರು. ವೇದಿಕೆಯಲ್ಲಿ ಅಂಬೇಡ್ಕರ್ ಸೇನೆಯ ರಾಜ್ಯ ಉಪಾಧ್ಯಕ್ಷ ಕೋದಂಡರಾಮ್, ಡಿವೈಎಸ್ಪಿ ಡಿ.ಎಸ್.ಪವಾರ್, ರಾಜ್ಯ ಸಂಘಟನಾ ಕಾರ್ಯದರ್ಶಿ ಶಂಕರ ರಾಮಲಿಂಗಯ್ಯ, ಪ್ರವೀಣ್ ಸುಲ್ಪಿ, ದಾಂಡೇಲಿ ಘಟಕದ ಅಂಬೇಡ್ಕರ್ ಸೇಬೆಯ ಅಧ್ಯಕ್ಷೆ ಶೋಭಾ ಕೊಲಕರ ಮತ್ತು ಅಂಬೇಡ್ಕರ್ ಸ್ವಸಹಾಯ ಸ್ತ್ರೀ ಶಕ್ತಿ ಸಂಘದ ಸಂಸ್ಥಾಪಕಿ ಮಂಜುಳಾ ಕಲಾಲ, ಗ್ರೀನ್ ಇಂಡಿಯಾ ಸಂಸ್ಥೆಯ ನಿರ್ದೇಶಕ ಬಿ.ಪಿ.ಮಹೇಂದ್ರಕುಮಾರ್, ಸಾಮಾಜಿಕ ಹೋರಾಟಗಾರ ಪಿರೋಜ್ ಖಾನ್ ಪಿರ್ಜಾದೆ ಹಾಗೂ ಅಂಬೇಡ್ಕರ್ ಸೇನೆಯ ಜಿಲ್ಲಾ ಘಟಕಗಳ ಪದಾಧಿಕಾರಿಗಳು ಮತ್ತು ದಲಿತ ಸಂಘಟನೆಗಳ ಮುಖಂಡರುಗಳು ಉಪಸ್ಥಿತರಿದ್ದರು. ಅಂಬೇಡ್ಕರ್ ಸೇನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನಾಯಕ ಕರ್ನಿಂಗ್, ಜಯ ಕರ್ನಾಟಕ ಸಂಘಟನೆಯ ತಾಲೂಕಾಧ್ಯಕ್ಷ ಆರ್.ಸಿ.ಸುದರ್ಶನ್, ಯುವ ಮುಖಂಡ ಜಾಪರ್ ಮಸನಕಟ್ಟಿ, ಮಾಜಿ ನಗರ ಸಭಾ ಸದಸ್ಯ ಸತೀಶ ನಾಯ್ಕ, ಸಚಿನ್ ಬೋರಕರ, ಮೊದಲಾದವರು ಸಹಕರಿಸಿದರು.
ಬಿಗಿ ಭದ್ರತೆ : ಶ್ರೀ ನಿಜಗುಣ ಸ್ವಾಮೀಜಿಯವರು ಕಾರ್ಯಕ್ರಮಕ್ಕೆ ಬಂದಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಬಿಗಿ ಭದ್ರತೆಯನ್ನು ಒದಗಿಸಲಾಗಿತ್ತು.