ಕುಮಟಾ : ತಾಲೂಕಿನ ಕೊಂಕಣ ಎಜುಕೇಶನ್ ಟ್ರಸ್ಟ್ ನ ಸಿ.ವಿ.ಎಸ್.ಕೆ ಪ್ರೌಢಶಾಲೆಯ ಎಸ್.ಎಸ್ ಎಲ್.ಸಿ ವಿದ್ಯಾರ್ಥಿನಿ ಅದಿತಿ ಪ್ರಕಾಶ ವೈದ್ಯ ಮರುಮೌಲ್ಯಮಾಪನದಲ್ಲಿ 625 ಕ್ಕೆ 625 ಅಂಕಗಳನ್ನು ಪಡೆಯುವ ಮೂಲಕ ಕರ್ನಾಟಕ ರಾಜ್ಯದಲ್ಲಿ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿದ್ದಾಳೆ.
ಎಸ್.ಎಸ್.ಎಲ್.ಸಿ ಫಲಿತಾಂಶ ಘೋಷಣೆ ಸಂದರ್ಭದಲ್ಲಿ ಈಕೆಗೆ 622 ಅಂಕಗಳು ಲಭಿಸಿದ್ದವು, ಹೀಗಾಗಿ ಈಕೆ ರಾಜ್ಯಮಟ್ಟದಲ್ಲಿ ನಾಲ್ಕನೇ ಸ್ಥಾನ ಪಡೆಯುವಂತಾಗಿತ್ತು. ಆದರೆ ಈಕೆ, ಫಲಿತಾಂಶ ಬಂದ ಸಂದರ್ಭದಲ್ಲಿಯೂ 625 ಕ್ಕೆ 625 ಅಂಕಗಳನ್ನು ಪಡೆಯುವ ಭರವಸೆ ವ್ಯಕ್ತಪಡಿಸಿದ್ದಳು, ಹೀಗಾಗಿ ಮರುಮೌಲ್ಯಮಾಪನಕ್ಕಾಗಿ ಅರ್ಜಿಯನ್ನು ಕೂಡ ಸಲ್ಲಿಸಿದ್ದಳು. ಇದೀಗ ಇಂಗ್ಲಿಷ್ ವಿಷಯದ ಮರುಮೌಲ್ಯಮಾಪನದ ಫಲಿತಾಂಶ ಪ್ರಕಟಗೊಂಡಿದ್ದು ಈಕೆ ಹೆಚ್ಚಿನ ಮೂರು ಅಂಕ ಪಡೆದು ರಾಜ್ಯದ ಟಾಪರ್ ಆಗಿ ಗುರುತಿಸಿಕೊಂಡಿದ್ದಾಳೆ.
ಅದೇ ರೀತಿ, ಸುಮಂತ ಮಂಜುನಾಥ ಶಾಸ್ತ್ರಿ 625 ಕ್ಕೆ 624 ಅಂಕ ಅಂದರೆ ಇಂಗ್ಲಿಷ್ ಹಾಗೂ ವಿಜ್ಞಾನ ವಿಷಯದಲ್ಲಿ ತಲಾ ಒಂದೊಂದು ಅಂಕದ ಹೆಚ್ಚಳದೊಂದಿಗೆ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದರೆ,
ಆಕಾಶ ಕಿರಣ ಶೇಟಿಯಾ 625 ಕ್ಕೆ 623 ಅಂಕ ಗಳಿಸಿ (ಸಮಾಜ ವಿಜ್ಞಾನದಲ್ಲಿ ಒಂದು ಅಂಕ ಹೆಚ್ಚಳ) ತೃತೀಯ ಸ್ಥಾನ ಪಡೆದಿದ್ದಾರೆ. ಶಾಲೆಯ ಸಾಧನೆಯಲ್ಲಿ ಪ್ರಥಮ ನಾಲ್ಕು ರ‍್ಯಾಂಕ್‌ಗೆ ನಾಲ್ಕು ಮಂದಿ ಭಾಜನರಾದರೆ, ಐದನೇ ರ‍್ಯಾಂಕ್‌ಗೆ ಇಬ್ಬರು, ಏಳನೆ ರ‍್ಯಾಂಕ್‌ಗೆ ಓರ್ವ, ಎಂಟನೇ ರ‍್ಯಾಂಕ್‌ಗೆ ಇಬ್ಬರು, ಒಂಭತ್ತನೇ ರ‍್ಯಾಂಕ್‌ಗೆ ಓರ್ವ, ಹಾಗೂ ಹತ್ತನೇ ರ‍್ಯಾಂಕ್‌ಗೆ ಇಬ್ಬರು ವಿದ್ಯಾರ್ಥಿಗಳು ರಾಜ್ಯ ಮಟ್ಟದ ಟಾಪ್ 10 ರ‍್ಯಾಂಕ್ ಪಟ್ಟಿಯಲ್ಲಿ ತಮ್ಮ ಹೆಸರನ್ನು ದಾಖಲಿಸಿಕೊಂಡಿದ್ದಾರೆ.
ಒಟ್ಟಾರೆಯಾಗಿ ರಾಜ್ಯ ಮಟ್ಟದ ಹನ್ನೆರಡು ರ‍್ಯಾಂಕ್‌ಗಳು ಕೊಂಕಣದ ಸಿವಿಎಸ್‌ಕೆ ಶಾಲೆಯ ಪಾಲಾಗಿವೆ. ವಿದ್ಯಾರ್ಥಿಗಳ ಸಾಧನೆಗೆ ಪಾಲಕರು, ಮುಖ್ಯ ಶಿಕ್ಷಕಿ ಶ್ರೀಮತಿ ಸುಮಾ ಪ್ರಭು, ಆಡಳಿತ ಮಂಡಳಿ, ಹಾಗೂ ಹಿತೈಷಿಗಳು ಶುಭಾಶಯ ಕೋರಿದ್ದಾರೆ.