ದಾಂಡೇಲಿ: ಕವಿ, ಪತ್ರಕರ್ತ ಎನ್. ಚಯಚಂದ್ರನ್ ಅವರ ಕೃತಿ ‘ಹಸಿರುಡುಗೆಯ ಮಿಂಚು’ ಕೃತಿ ಪರಿಸರದ ಕುರಿತಂತೆ ಸಾಕಷ್ಟು ಮಾತಾಡುತ್ತದೆ. ಇದರಲ್ಲಿನ ಬರಹಗಳನ್ನು ಬಿಡಿ ಲೆಖನಗಳು ಅನ್ನುವುದಕ್ಕಿಂತ ಹಸಿರು ಕಥನ ಎಂದು ಕರೆಯಯಬಹುದು. ಈ ಮೂಲಕ ಜಯಚಂದ್ರನ್ ಓರ್ವ ಹಸಿರು ಪತ್ರಕರ್ತ ಎಂದು ದಾಖಲಾಗುತ್ತಾರೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಕನ್ನಡ ಭಾಷಾ ಸಲಹಾ ಮಂಡಳಿ ಸದಸ್ಯ, ಕವಿ ಚೆನ್ನಪ್ಪ ಅಂಗಡಿ ಅವರು ಅಭಿಪ್ರಾಯಪಟ್ಟರು.
‘ಹಣತೆ’ ಸಾಹಿತ್ಯಕ, ಸಾಂಸ್ಕೃತಿಕ ಜಗಲಿ ದಾಂಡೇಲಿ ಘಟಕ ಇಲ್ಲಿಗೆ ಸಮೀಪದ ಕೋಗಿಲಬನದ ವೈಷ್ಯವಾಣಿ ಸಬಾಭವನದಲ್ಲಿ ಲೇಖಕ, ಪತ್ರಕರ್ತ ಎನ್. ಜಯಚಂದ್ರನ್ ಅವರ ಕೃತಿ ‘ಹಸಿರುಡುಗೆಯ ಮಿಂಚು’ ಬಿಡುಗಡೆ ಮಾಡಿ ಮಾತನಾಡಿದ ಅವರು, ಈ ಭೂಮಿಯ ಮೇಲೆ ಸಹಸ್ರಾರು ಜೀವವೈವಿಧ್ಯಗಳಿವೆ. ಅವೆಲ್ಲವೂ ಈ ಭೂಮಿಗೆ ಬಂದ ಎಷ್ಟೋ ಲಕ್ಷ ವರ್ಷಗಳ ಮೇಲೆ ಮಾವನ ಇಲ್ಲಿಗೆ ಬಂದಿದ್ದಾನೆ. ಕೊನೆಯಲ್ಲಿ ಬಂದ ಮಾನವನೇ ಅವೆಲ್ಲವುಗಳ ಮೇಲೆ ದಾಳಿ ಮಾಡುತ್ತಿರುವುದು ಅಸಹನೀಯ. ಜಯಚಂದ್ರನ್ ಇಲ್ಲಿ ಪರಿಸರ ಮಾತ್ರವಲ್ಲ ಮಹಾ ಮಾನವತಾವಾದಿ ನಾರಾಯಣ ಗುರುಗಳ ಚಳುವಳಿ, ಹಳಿಯಾಳದ ಕುಸ್ತಿ ಪರಂಪರೆ, ಕೇರಳದ ಗ್ರಾಮ ಸ್ವಾವಲಂಬಿ ಹೋರಾಟ ಹೀಗೆ ವಿಭಿನ್ನ ದೃಷ್ಟಿಕೋನದ ಚಿಂತನೆಗಳನ್ನು ದಾಖಲಿಸುವ ಮೂಲಕ ತಮ್ಮೊಳಗಿನ ಒಳನೋಟಗಳಿಗೆ ಮೂರ್ತರೂಪ ನೀಡಿದ್ದಾರೆ ಎಂದು ಚೆನ್ನಪ್ಪ ಅಂಗಡಿ ನುಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ನಾಡಿನ ಹಿರಿಯ ತಬಲಾ ವಾದಕ ಉಸ್ತಾದ್ ಕೆ.ಎಲ್.ಜಮಾದಾರ್, ತುಂಬ ಪರಿಣಾಮಕಾರಿಯಾಗಿ ಸಮುದಾಯಕ್ಕೆ ಸ್ಪಂದಿಸುವ ಪತ್ರಕರ್ತ ಜಯಚಂದ್ರನ್ ಅವರು ಸರ್ವಧರ್ಮ ಸಮನ್ವಯತೆಯನ್ನು ಸಾರುವಲ್ಲಿ ಸದಾ ಮುಂಚೂಣಿಯಲ್ಲಿ ನಿಂತಿರುತ್ತಾರೆ. ಅವರ ಇನ್ನಷ್ಟು ಕೃತಿಗಳು ಓದುಗರಿಗೆ ಸಿಗುವಂತಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಹಣತೆ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ಅವರು ಸಶಕ್ತ ಪತ್ರಕರ್ತ, ಸಾಹಿತಿ ಎನ್.ಜಯಚಂದ್ರನ್ ಅವರ ಸ್ಪಷ್ಟತೆಯುಳ್ಳ ನಿಷ್ಠುರ ಬರಹಗಾರ. ಹಣತೆಯ ಜಿಲ್ಲಾ ಪ್ರಧಾನ ಸಂಚಾಲಕರೂ ಆದ ಅವರ ಕೃತಿಯನ್ನು ಹಣತೆ ಮೂಲಕ ಪ್ರಕಟಿಸುತ್ತಿರುವದು ನಮ್ಮ ಸಂಘಟನೆಗೆ ಅಭಿಮಾನದ ಸಂಗತಿ. ಮುಂದಿನ ದಿನಗಳಲ್ಲಿ ‘ಮನೆ ಮನೆ ಜಗಲಿಯಲ್ಲಿ ಹಣತೆ’ ಪರಿಕಲ್ಪನೆಯಡಿ ಚಿಂತನ, ಉಪನ್ಯಾಸ, ಜಾಣಪದ, ಸಂಗೀತ ಹೀಗೆ ವಿವಿಧ ನೆಲೆಯಲ್ಲಿ ಕಾರ್ಯಕ್ರಮವನ್ನು ನಮ್ಮ ಸಂಘಟನೆ ಹಮ್ಮಿಕೊಂಡು ಹಳ್ಳಿ ಹಳ್ಳಿಗಳಲ್ಲಿ ಸಮುದಾಯದ ನಡುವೆ ಹಣತೆ ಬೆಳಕನ್ನು ಚೆಲ್ಲಲು ಪ್ರಯತ್ನಿಸಲಾಗುವುದು ಎಂದರು.
ಹಣತೆ ಕಾರವಾರ ತಾಲೂಕು ಘಟಕದ ಅಧ್ಯಕ್ಷ, ಪತ್ರಕರ್ತ ನಾಗರಾಜ ಹರಪನಳ್ಳಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಕೋಗಿಲಬನ ಗ್ರಾ.ಪಂ. ಅಧ್ಯಕ್ಷ ಅಶೋಕ ನಾಯ್ಕ, ಸದಸ್ಯ ರಮೇಶ ನಾಯ್ಕ, ಹಣತೆ ಹಳಿಯಾಳ ತಾಲೂಕು ಘಟಕದ ಅಧ್ಯಕ್ಷ ರಾಮಕೃಷ್ಣ ಗುನಗ ಗೌರವ ಉಪಸ್ಥಿತರಿದ್ದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಚೆನ್ನಪ್ಪ ಅಂಗಡಿ, ಉಸ್ತಾದ್ ಕೆ.ಎಲ್.ಜಮಾದಾರ್, ಕೃತಿಕಾರ ಎನ್.ಜಯಚಂದ್ರನ್ ಅವರನ್ನು ಹಣತೆ ದಾಂಡೇಲಿ ತಾಲೂಕು ಘಟಕದ ಪರವಾಗಿ ಸನ್ಮಾನಿಸಲಾಯಿತು.
ಹಣತೆ ದಾಂಡೇಲಿ ಘಟಕದ ಅಧ್ಯಕ್ಷ ರಾಘವೇಂದ್ರ ಗಡೆಪ್ಪನವರ್ ಸ್ವಾಗತಿಸಿದರು. ಹಣತೆ ಜಿಲ್ಲಾ ಸಮಿತಿ ಸದಸ್ಯ ಉಪೇಂದ್ರ ಘೋಪೇಂದ್ರ ಘೋರ್ಪಡೆ ಕೃತಿ ಪರಿಚಯಿಸಿದರು. ಸೋಮಶೇಖರ ಅಂಧಕಾರ ವಂದಿಸಿದರು. ಎ.ಆರ್.ರೆಹಮಾನ್ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ನಂತರ ಸ್ಥಳೀಯ ಅಭಿಷೇಕ್ ಡ್ಯಾನ್ಸ್ ಅಕಾಡೆಮಿ ಅವರಿಂದ ಜಾನಪದ ನೃತ್ಯ ವೈಭವ ನಡೆಯಿತು.