ಅಂಕೋಲಾ : ಇಲೆಕ್ಟ್ರಾನಿಕ್ಸ್ ಮಳಿಗೆಯ ಮೇಲ್ಮಹಡಿಯಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿ ಕೆಲ ಕಾಲ ಗೊಂದಲದ ಪರಿಸ್ಥಿತಿ ಉಂಟಾದ ಘಟನೆ ಪಟ್ಟಣದ ಅಂಬಾರ ಕೋಡ್ಲ ರಸ್ತೆಗೆ ಹೊಂದಿಕೊಂಡಿರುವ ಪ್ರಸಿದ್ಧ ಮಂಜುಶ್ರೀ ಇಲೆಕ್ಟ್ರಾನಿಕ್ಸ್ ನಲ್ಲಿ ನಡೆದಿದೆ. ರವಿವಾರ ಮುಂಜಾನೆ ಪುರಸಭೆಗೆ ಸಂಬಂಧಿಸಿದ ವಾಣಿಜ್ಯ ಮಳಿಗೆ ಕಟ್ಟಡದಲ್ಲಿ (ಡಿ.ಟಿ ಎಚ್ ಮಳಿಗೆ) ಯಿಂದ ಹೊಗೆ ಹೊರ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು, ಅಂಗಡಿ ಮಾಲಕ ಹಾಗೂ ಅಗ್ನಿ ಶಾಮಕ ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ಪಟ್ಟಣದಲ್ಲಿ ಸುರಿದ ಭಾರೀ ಮಳೆ, ಗುಡುಗು – ಸಿಡಿಲಿನಿಂದ ಸಂಭವಿಸಿರಬಹುದಾದ ವಿದ್ಯುತ್ ಶಾರ್ಟ ಸರ್ಕಿಟ್ ಇಲ್ಲವೇ ಬೇರೆ ಯಾವುದೋ ಕಾರಣಗಳಿಂದ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿರುವ ಸಾಧ್ಯತೆ ಕೇಳಿಬಂದಿದೆ. ಬೆಂಕಿ ಬಿದ್ದ ಕಟ್ಟಡದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಗೃಹೋಪಯೋಗಿ ಇಲೆಕ್ಟ್ರಾನಿಕ್ಸ್ ಉಪಕರಣಗಳಿದ್ದು , ಫರ್ನಿಚರ ಸೇರಿ ಕೆಲ ಪ್ರಮಾಣದ ವಸ್ತುಗಳು ಸುಟ್ಟು ಕರಕಲಾಗಿದೆ. ಲಕ್ಷಾಂತರ ರೂಪಾಯಿ ಹಾನಿಯಾಗಿದೆ.