ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾದ ಮಾನ್ಯ ದಿನಕರ ಶೆಟ್ಟಿಯವರು, ಎಸ್. ಎಸ್. ಎಲ್. ಸಿ. ಪರೀಕ್ಷೆಯಲ್ಲಿ 625ಕ್ಕೆ 625 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಸಾಧನೆ ಮಾಡಿರುವ ವಿದ್ಯಾರ್ಥಿನಿ ಅದಿತಿ ಪ್ರಕಾಶ್ ವೈದ್ಯ ಅವಳ ಮನೆಗೆ ತೆರಳಿ ಸನ್ಮಾನ ಮಾಡಿದರು. ಹೊನ್ನಾವರ ತಾಲೂಕಿನ ನವಿಲುಗೋಣ ಗ್ರಾಮದ ನಿವಾಸಿಯಾಗಿರುವ ಅದಿತಿ ವೈದ್ಯ ಕೊಂಕಣ ಎಜುಕೇಷನ್ ಟ್ರಸ್ಟ್ ನ ಸಿ.ವಿ. ಎಸ್. ಕೆ. ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿದ್ದಾಳೆ.
ವಿದ್ಯಾರ್ಥಿನಿಯನ್ನು ಸನ್ಮಾನಿಸಿ ಮಾತನಾಡಿದ ದಿನಕರ ಶೆಟ್ಟಿಯವರು, ನಗರ ಪ್ರದೇಶದ ವಿದ್ಯಾರ್ಥಿಗಳು ಮಾತ್ರ ಹೆಚ್ಚಾಗಿ ರ್ಯಾಂಕ್ ಗಳಿಸುತ್ತಾರೆ ಎನ್ನುವುದು ಸಾಮಾನ್ಯವಾಗಿ ಎಲ್ಲರ ಭಾವನೆ. ಆದರೆ ನವಿಲುಗೋಣ ಗ್ರಾಮದ ಅದಿತಿ ವೈದ್ಯಳು ಪ್ರತಿದಿನ ಎರಡು ಕಿಲೋಮೀಟರ್ ಕಾಲ್ನಡಿಗೆಯಲ್ಲಿ ನಡೆದು ಪ್ರೌಢಶಾಲೆಗೆ ತೆರಳಿ, ನಮ್ಮ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿರುವುದು ಅತ್ಯಂತ ಸಂತಸದ ಸಂಗತಿ. 625ಕ್ಕೆ 625 ಅಂಕ ಗಳಿಸುವುದು ಸುಲಭದ ಕೆಲಸವಲ್ಲ. ಇದಕ್ಕೆ ಕಠಿಣ ಅಭ್ಯಾಸ ಅಗತ್ಯ. ಆದರೆ ಅದಿತಿ ಇದನ್ನು ಸಾಧಿಸಿ ತೋರಿಸಿದ್ದಾಳೆ. ಅವಳು ಪಾಲಕರಿಗೆ ಮಾತ್ರವಲ್ಲ, ನಮ್ಮ ತಾಲೂಕಿಗೆ ಹಾಗೂ ಜಿಲ್ಲೆಗೆ ಕೀರ್ತಿಯನ್ನು ತಂದಿದ್ದಾಳೆ. ಅವಳ ಭವಿಷ್ಯ ಇನ್ನೂ ಉಜ್ವಲವಾಗಲಿ ಎಂದು ಶುಭಕೋರಿದರು.
ಕೆ. ಡಿ. ಸಿ. ಸಿ. ಬ್ಯಾಂಕ್ ನಿರ್ದೇಶಕ ಶಿವಾನಂದ ಹೆಗಡೆ, ನವಿಲುಗೋಣ ಗ್ರಾಮಪಂಚಾಯತ್ ಅಧ್ಯಕ್ಷ ಸತೀಶ್ ಹೆಬ್ಬಾರ, ಕಡ್ಲೆ ಗ್ರಾಮಪಂಚಾಯತ್ ಅಧ್ಯಕ್ಷ ಗೋವಿಂದ ಗೌಡ, ಆರ್. ಆರ್. ಭಟ್, ಎಮ್. ಎಮ್. ಹೆಗಡೆ, ಸತೀಶ ಹಬ್ಬು, ಶಿವಾನಂದ ನಾಯ್ಕ, ಕುಟ್ಟು ಮಡಿವಾಳ, ಕೇಶವ ಮಡಿವಾಳ ಮತ್ತಿತರರು ಇದ್ದರು.