ಕುಮಟಾ : ಇಂದಿನ ವಿದ್ಯಾರ್ಥಿಗಳು ತುಂಬಾ ಬುದ್ಧಿವಂತರು. ಪರೀಕ್ಷೆಗಳಲ್ಲಿ ಸಲೀಸಾಗಿ 90% ಕ್ಕಿಂತ ಹೆಚ್ಚು ಅಂಕಗಳನ್ನು ಪಡೆಯುತ್ತಾರೆ. ಆದರೆ ಜೀವನ ಎಂಬುದು ಕೇವಲ ಹೆಚ್ಚು ಅಂಕಗಳನ್ನು ಪಡೆಯುವುದಕ್ಕೆ ಸೀಮಿತವಲ್ಲ. ಇದರ ಜೊತೆ ವಿದ್ಯಾರ್ಥಿಗಳು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಾಜೇಂದ್ರ ಎಲ್ ಭಟ್ಟ ಅಭಿಪ್ರಾಯಪಟ್ಟರು. ಅವರು ಕುಮಟಾದ ಹವ್ಯಕ ವಿದ್ಯಾವರ್ಧಕ ಸಂಘ ಆಯೋಜಿಸಿದ್ದ “ಪ್ರತಿಭಾ ಪುರಸ್ಕಾರ -2023” ಹಾಗೂ “ಆಯ್ದ ಸಾಧಕರಿಗೆ ಸನ್ಮಾನ” ಕಾರ್ಯಕ್ರಮದಲ್ಲಿ ಸಾಧಕರನ್ನು ಗೌರವಿಸಿ ಮಾತನಾಡಿದರು.
ಉತ್ತಮ ಸಂಸ್ಕಾರ ರೂಢಿಸಿಕೊಳ್ಳುವುದು ಮಕ್ಕಳ ಆದ್ಯ ಕರ್ತವ್ಯ. ಜೀವನವೆಂಬ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದುಕೊಳ್ಳಬೇಕು. ಈ ದಿಶೆಯಲ್ಲಿ ಶಿಕ್ಷಕರು ಹಾಗೂ ಪಾಲಕರು ಮಕ್ಕಳನ್ನು ತಯಾರುಗೊಳಿಸಬೇಕಿದೆ. ಇಂದಿನ ವಿದ್ಯಾರ್ಥಿಗಳು ಚಿಕ್ಕ, ಪುಟ್ಟ ಸಮಸ್ಯೆಗಳನ್ನು ಎದುರಿಸಲಾಗದೇ ಕಂಗಾಲಾಗುವುದನ್ನು ನಾವು ನೋಡಿದ್ದೇವೆ. ವಿದ್ಯಾರ್ಥಿಗಳು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವುದೇ ಈ ಸಮಸ್ಯೆ ಪರಿಹಾರಕ್ಕೆ ಉತ್ತಮ ಮಾರ್ಗವಾಗಿದೆ ಎಂದರು.
ಜೀವನ ಎದುರಿಸುವ ಪಾಠ ಎಲ್ಲೂ ಇಲ್ಲ. ಅವನ್ನು ಅನುಭವದಿಂದ ನಾವೇ ಕಲಿಯಬೇಕು. ಅಂತಹ ಕೌಶಲ್ಯ ರೂಢಿಸಿಕೊಳ್ಳಬೇಕು. ಮಕ್ಕಳಿಗೆ ಪಾಲಕರು ಪ್ರೀತಿ ಕೊಡಬೇಕು. ಬ್ಯಾಂಕಿನ ಠೇವಣೆಗಿಂತ ಪ್ರೀತಿ ಮುಖ್ಯ. ಮಕ್ಕಳೊಡನೆ ಪಾಲಕರು ಬೆರೆಯಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಹವ್ಯಕ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಶ್ರೀಕಾಂತ ಪಿ ಹೆಗಡೆ ಮಾತನಾಡಿ, “ಹವ್ಯಕ ಬ್ರಾಹ್ಮಣರು ಬುದ್ಧಿವಂತರು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಇಂದು ಅವರ ಬುದ್ಧಿವಂತಿಕೆ ಕೇವಲ ಇಂಜಿನಿಯರಿಂಗ್ ಹಾಗೂ ವೈದ್ಯಕೀಯ, ವಾಣಿಜ್ಯ ವಿಭಾಗಗಳಿಗೆ ಮಾತ್ರ ಸೀಮಿತವಾಗಿಬಿಟ್ಟಿದೆ. ಹವ್ಯಕರ ಬುದ್ಧಿವಂತಿಕೆ ಸಮಾಜದ ಇತರ ಕ್ಷೇತ್ರಗಳಿಗೂ ಉಪಯೋಗವಾದರೆ ಇನ್ನೂ ಉತ್ತಮ ಈ ಬಗ್ಗೆ ಚಿಂತನೆಗಳು ನಡೆಯಲಿ ಎಂದರು. ನಮ್ಮ ಜೀವನದ 25ನೇ ವರ್ಷದವರೆಗೆ ಶಿಕ್ಷಣಕ್ಕಾಗಿ ವ್ಯಯವಾಗುತ್ತದೆ. ವೃತ್ತಿ ಆಯ್ಕೆಮಾಡುವಾಗ ವಿದ್ಯಾಭ್ಯಾಸ ಉಪಯೋಗಕ್ಕೆ ಬರದು. ಇದು ಇಂದಿನ ಸ್ಥಿತಿ. ವ್ಯವಹಾರ ಜ್ಞಾನ ಅಷ್ಟೇ ಮುಖ್ಯ. ಮುಂದಿನ ದಿನಗಳಲ್ಲಿ ಎಲ್ಲವನ್ನೂ ಯಂತ್ರಗಳ ಮೂಲಕವೇ ಮಾಡಿಸಬೇಕಾಗುತ್ತದೆ. ಅದರೊಟ್ಟಿಗೆ ಜೀವಿಸುವ ಕಲೆ ಕಲಿಯ ಬೇಕು ಎಂದರು.
2023 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಕಡಾ 90 ಹಾಗೂ ಅದಕ್ಕಿಂತ ಮೇಲ್ಪಟ್ಟು ಅಂಕ ಪಡೆದ ಒಟ್ಟೂ 29 ಹವ್ಯಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಹಾಗೆಯೇ ಸಾಧಕರ ಸನ್ಮಾನದಲ್ಲಿ ಉತ್ತರ ಕನ್ನಡ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶ್ರೀಕಾಂತ ಸುಬ್ರಾಯ ಹೆಗಡೆ ಮತ್ತು ಜಿಲ್ಲಾ ಮಟ್ಟದ ಅತ್ಯುತ್ತಮ ಅಂಗನವಾಡಿ ಕಾರ್ಯಕರ್ತೆ ಪ್ರಶಸ್ತಿ ಪಡೆದ ಶ್ರೀಮತಿ ಸಾವಿತ್ರಿ ಶ್ರೀಕಾಂತ ಶಾಸ್ತ್ರಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸರಿತಾ ಹೆಗಡೆಯವರು ಪ್ರಾರ್ಥಿಸಿದರು. ಆಡಳಿತ ಮಂಡಳಿಯ ಸದಸ್ಯ ಕೃಷ್ಣ ಕೆ.ಎನ್. ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು. ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರಾದ ಚಂದ್ರಶೇಖರ ಉಪಾಧ್ಯಾಯ ಹಾಗೂ ಮಧು ಹೆಗಡೆ ಸನ್ಮಾನ ಪತ್ರ ವಾಚಿಸಿದರೆ, ಸಂಘದ ಕಾರ್ಯದರ್ಶಿ ಶ್ರೀಕಾಂತ ಭಟ್ಟರು ಧನ್ಯವಾದ ಸಮರ್ಪಿಸಿದರು.
ಬಾಕ್ಸ್
ಹೇಗೆ ಮಾರವಾಡಿಗಳು ತಮ್ಮ ದುಡಿಮೆಯ ಕೆಲ ಭಾಗವನ್ನು ಕೂಡಿಸಿ ಬಡ್ಡಿರಹಿತ ಸಾಲವನ್ನು ನೀಡಿ, ತಮ್ಮ ಸಮಾಜ ಬಾಂಧವರನ್ನು ಪ್ರೋತ್ಸಾಹಿಸುತ್ತಾರೋ ಅದೇ ರೀತಿ ಹವ್ಯಕರೂ, ಸ್ವ ಉದ್ಯೋಗ ಮಾಡುವವರಿಗೆ ಪ್ರೋತ್ಸಾಹಿಸಲಿ – ಶ್ರೀಕಾಂತ ಹೆಗಡೆ ಸನ್ಮಾನಿತ.