ಭಟ್ಕಳ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಒಬ್ಬ ಪ್ರವಾಸಿಗ ಕಣ್ಮರೆಯಾಗಿದ್ದು, ಇಬ್ಬರನ್ನು ರಕ್ಷಣೆ ಮಾಡಿರುವ ಘಟನೆ ತಾಲೂಕಿನ ಮುರ್ಡೇಶ್ವರ ಕಡಲತೀರದಲ್ಲಿ ನಡೆದಿದೆ. ಕಲಘಟಗಿ ಮೂಲದ ಸಂತೋಷ ಹುಲಿಗೊಂಡ (19) ಕಣ್ಮರೆಯಾದ ಪ್ರವಾಸಿಗನಾಗಿದ್ದು, ಹಸನ್ ಮಜ್ಜಿಗಿ ಗೌಡರ್ (21), ಸಂಜೀವ ಹೆಬ್ಬಳ್ಳಿ (20) ಎಂಬುವವರನ್ನು ರಕ್ಷಣೆ ಮಾಡಲಾಗಿದೆ. ಸೋಮವಾರ 22 ಮಂದಿ ಪ್ರವಾಸಕ್ಕೆಂದು ಮುರ್ಡೇಶ್ವರಕ್ಕೆ ಆಗಮಿಸಿದ್ದರು.
ಸಮುದ್ರದಲ್ಲಿ ಬಿಪರ್‌ಜಾಯ್ ಸೈಕ್ಲೋನ್ ಎಫೆಕ್ಟ್‌ನಿಂದ ದಡಕ್ಕೆ ಆಳೆತ್ತರದ ಅಲೆಗಳು ಅಪ್ಪಳಿಸುತ್ತಿದ್ದವು. ಇದರಿಂದ ಕಡಲತೀರದ ಬಳಿ ನೀರಿಗಿಳಿಯದಂತೆ ಸೂಚನಾ ಫಲಕ ಹಾಕಲಾಗಿತ್ತು. ಆದರೂ ಪ್ರವಾಸಿಗರೂ ನಿರ್ಲಕ್ಷಿಸಿ ನೀರಿಗಿಳಿದಿದ್ದಾರೆ. ಇದರಿಂದ ಭಾರಿ ಅಲೆಗಳ ಹೊಡೆತಕ್ಕೆ ಸಿಲುಕಿದ್ದ ಮೂವರ ಪೈಕಿ ಇಬ್ಬರನ್ನು ಲೈಫ್ ಗಾರ್ಡ್‌ಗಳು ರಕ್ಷಣೆ ಮಾಡಿದ್ದು, ಒಬ್ಬ ನಾಪತ್ತೆಯಾಗಿದ್ದಾನೆ.
ಮುರ್ಡೇಶ್ವರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಣ್ಮರೆಯಾದ ಪ್ರವಾಸಿಗನಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಸೈಕ್ಲೋನ್ ಹಿನ್ನೆಲೆ ಕಡಲತೀರಗಳಲ್ಲಿ ಸಮುದ್ರ ಪ್ರಕ್ಷುಬ್ಧಗೊಂಡಿದ್ದು ಯಾರೂ ಸಮುದ್ರಕ್ಕಿಳಿಯದಂತೆ ಸೂಚನಾ ಫಲಕಗಳನ್ನು ಅಳವಡಿಸಿ ಪ್ರವಾಸಿಗರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಆದರೂ ಪ್ರವಾಸಿಗರು ಜಿಲ್ಲಾಡಳಿತದ ಎಚ್ಚರಿಕೆಯನ್ನು ನಿರ್ಲಕ್ಷಿಸಿ ನೀರಿಗಿಳಿಯುತ್ತಿರುವುದರಿಂದ ಅವಘಡಗಳಿಗೆ ಕಾರಣವಾಗುತ್ತಿದೆ. ಈ ಸಂಬಂಧ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.