ಹೊನ್ನಾವರ: ಪಟ್ಟಣದ ನ್ಯೂ ಎಜ್ಯುಕೇಶನ್ ಸೊಸೈಟಿಯ ನ್ಯೂ ಇಂಗ್ಲಿಷ್ ಸ್ಕೂಲ್ 3 ವಿಭಾಗದ ಪ್ರತಿಭಾವಂತ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪುಂಡಲಿಕ ಗೋವಿಂದ ಚಾರಿಟೇಬಲ್ ಟ್ರಸ್ಟ್, ಹಳದೀಪುರ ಇವರ ಪ್ರಾಯೋಜಕತ್ವದಲ್ಲಿ ಉಚಿತ ನೋಟ್‌ಬುಕ್‌ಗಳನ್ನು ವಿತರಿಸುವ ಕಾರ್ಯಕ್ರಮ ನ್ಯೂ ಇಂಗ್ಲೀಷ್ ಸ್ಕೂಲ್‌ನಲ್ಲಿ ನೆರವೇರಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಹಿಂದಿನ ಅಧ್ಯಕ್ಷರು ಮತ್ತು ಹಿರಿಯ ನ್ಯಾಯವಾದಿಗಳಾದ ಡಿ.ಎ.ಕಾಮತ್, ಟ್ರಸ್ಟಿನ ಈ ಉದಾತ್ತ ಸೇವೆಯ ಬಗ್ಗೆ ಸಂತಸ ವ್ಯಕ್ತಪಡಿಸಿದರು.ಮುಂದೆಯು ಸಹ ಟ್ರಸ್ಟಿನಿಂದ ಉತ್ತಮ ಕಾರ್ಯಗಳು ನೆರವೇರಲಿ ಎಂದು ಶುಭ ಹಾರೈಸಿದರು.
ಮ್ಯಾನೆಜಿಂಗ್ ಟ್ರಸ್ಟಿ ರಾಜೀವ ಶ್ಯಾನಭಾಗರು ಟ್ರಸ್ಟಿನ ಸ್ಥಾಪನೆಯ ಉದ್ದೇಶ ಮತ್ತು ಮುಂದಿನ ದಿನಗಳಲ್ಲಿ ಕೈಗೊಳ್ಳಬಹುದಾದ ಯೋಜನೆಯ ಬಗ್ಗೆ ಪ್ರಾಸ್ತಾವಿಕಾಗಿ ಮಾತನಾಡಿದರು. ಆರ್ಥಿಕವಾಗಿ ಹಿಂದುಳಿದ ಮಕ್ಕಳ ಶೈಕ್ಷಣಿಕ ಉನ್ನತಿಗಾಗಿ ತಮ್ಮ ಸಂಸ್ಥೆ ಸಹಾಯವನ್ನು ಮುಂದುವರೆಸುವುದೆಂದು ಅವರು ಈ ಸಂದರ್ಭದಲ್ಲಿ ಹೇಳಿದರು.
ಸಂಸ್ಥೆಯ ಅಧ್ಯಕ್ಷರಾದ ರಘುನಾಥ ಜಿ ಪೈ ಅಧ್ಯಕ್ಷೀಯ ನುಡಿಗಳನ್ನಾಡಿ, ಟ್ರಸ್ಟಿನ ಸಮಾಜಮುಖಿ ಕಾರ್ಯಗಳನ್ನು ಪ್ರಶಂಶಿಸಿ, ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿ ಸಮಾಜದಲ್ಲಿ ಉನ್ನತ ಸ್ಥಾನಗಳಿಸಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.
ಪ್ರಾಯೋಜಕರ ವತಿಯಿಂದ ಟ್ರಸ್ಟ್ನ ಮ್ಯಾನೆಜಿಂಗ್ ಟ್ರಸ್ಟಿ ಮತ್ತು ಕುಟುಂಬದವರು ಉಪಸ್ಥಿತರಿದ್ದರು. ಸಂಸ್ಥೆಯ ಕಾರ್ಯದರ್ಶಿ ನಾಗರಾಜ ಕಾಮತ್ ಸ್ವಾಗತಿಸಿದರು. ಮುಖ್ಯಾಧ್ಯಾಪಕ ಜಯಂತ ನಾಯಕ್ ವಂದಿಸಿದರು. ಕಾರ್ಯಕ್ರಮದಲ್ಲಿ ಆಡಳಿತಮಂಡಳಿಯ ಸದಸ್ಯರು ಮತ್ತು ಶಾಲಾ ಸಿಬ್ಬಂದಿಗಳು ಹಾಜರಿದ್ದರು. ಸುಮಾರು 100 ವಿದ್ಯಾರ್ಥಿಗಳು ಕಾರ್ಯಕ್ರಮದ ಪ್ರಯೋಜನವನ್ನು ಪಡೆದರು.