ಕುಮಟಾ : ಪಠ್ಯ ಪರಿಷ್ಕರಣೆ ಬುದ್ದಿಗೇಡಿತನದ ಪರಮಾವಧಿ ಎಂದು ಜನಪರ ಹೋರಾಟ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಎಂ.ಜಿ. ಭಟ್ಟ ಆರೋಪಿಸಿದ್ದಾರೆ. ರಾಜ್ಯವನ್ನಾಳುತ್ತಿರುವ ಕಾಂಗ್ರೆಸ್ ಸರ್ಕಾರ ಪಠ್ಯವನ್ನು ಪರಿಷ್ಕರಣೆ ಮಾಡುತ್ತೇನೆ ಎಂದಿರುವುದಕ್ಕೆ ಅವರು ಹೇಳಿಕೂ ನೀಡಿದ್ದು. ಕಳೆದ ಎಪ್ಪತ್ತು ವರ್ಷಗಳಿಂದಲೂ ನಮ್ಮ ಶಿಕ್ಷಣವು ನಮ್ಮ ನೈಜ ಇತಿಹಾಸವನ್ನು ಮರೆಮಾಚಿದ ಶಿಕ್ಷಣವಾಗಿದೆ. ರಾಷ್ಟ್ರೀಯತೆಯನ್ನ, ನಮ್ಮ ಭಾರತೀಯತೆಯನ್ನು, ಬಿಂಬಿಸುವ ಅಥವಾ ನಮ್ಮ ಸಂಸ್ಕೃತಿಯನ್ನು ಮುಂದುವರೆಸಿಕೊಂಡು ಹೋಗುವಂತಹ ಶಿಕ್ಷಣ ವಾಗಿಲ್ಲದೆ ಇರುವುದು ವಿಷಾಧಕರ ಸಂಗತಿ ಎಂದಿದ್ದಾರೆ.
ಈ ಹಿಂದಿನ ಪಠ್ಯದಲ್ಲಿ ನಮ್ಮ ದೇಶದ ಮಹಾನ್ ಪರಾಕ್ರಮಿ ರಾಜರುಗಳ ಬಗ್ಗೆ ಒಂದಿಷ್ಟು ಮಾಹಿತಿ ಕೂಡ ಇಲ್ಲ .ನಮ್ಮ ದೇಶದಲ್ಲಿ ಆಗಿನ ಕಾಲದಲ್ಲಿ ಪ್ರಖ್ಯಾತ ಹಾಗೂ ಮಹಾನ್ ಪರಾಕ್ರಮಿ ರಾಜರುಗಳು ಆಗಿ ಹೋಗಿದ್ದಾರೆ ಅಂತವರ ಸಾಧನೆ ಆಡಳಿತದ ಬಗ್ಗೆ ಕಿಂಚಿತ್ತು ನಮಗೆ ಯಾವ ಪಠ್ಯದಲ್ಲಿ ಸಿಗಲಿಲ್ಲ ಅದರ ಹೊರತಾಗಿ ಹೊರಗಡೆಯಿಂದ ಬಂದ ನಮ್ಮ ದೇಶದ ಮೇಲೆ ಅಕ್ರಮಣ ಮಾಡಿ ನಮ್ಮ ದೇಶವನ್ನು ಲೂಟಿ ಗೈದ ನಮ್ಮ ದೇವಸ್ಥಾನಗಳನ್ನು ಧ್ವಂಸಗೈದ ನಮ್ಮ ಭಾರತೀಯರನ್ನ ಕ್ರೂರವಾಗಿ ನಡೆಸಿಕೊಂಡ ರಾಜರುಗಳ ಬಗ್ಗೆ ಹೇರಳವಾಗಿ ಪಠ್ಯದಲ್ಲಿ ವಿಶ್ಲೇಷಿಸಿ ಬರೆಯಲಾಗಿತ್ತು.
ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಕ್ಕಾಗಿ ಅನೇಕ ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಜೀವವನ್ನು, ತಮ್ಮ ಜೀವನವನ್ನು ತ್ಯಾಗ ಮಾಡಿದಂತಹ ಸಹಸ್ರಾರು ಲಕ್ಷಾಂತರ ಉದಾಹರಣೆಗಳಿವೆ ಆದರೆ ಅವರುಗಳ ಬಗ್ಗೆ ವಿಸ್ತೃತವಾಗಿ ತಿಳಿಸಿದ್ದಲ್ಲಿ ಅದು ನಮ್ಮ ಮುಂದಿನ ಪೀಳಿಗೆಗೆ ಪ್ರೇರಣೆಯಾಗಬಹುದಿತ್ತು. ಆದರೆ ನಮ್ಮ ಶಿಕ್ಷಣ ಬ್ರಿಟಿಷ್ ಅಧಿಕಾರಿಗಳನ್ನು ಹಾಡಿ ಹೊಗಳಿ ನಮ್ಮತನವನ್ನು ಕಳೆದುಕೊಳ್ಳುವ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದೆ ಹೊರತು ನಮ್ಮಲ್ಲಿ ಚೈತನ್ಯ ತುಂಬುವ ಪಠ್ಯ ಸಿಗಲೆ ಇಲ್ಲ ಎಂದು ಸ್ವತಃ ಶಿಕ್ಷಕರಾಗಿರುವ ಎಂ.ಜಿ.ಭಟ್ಟ ಬೇಸರದಿಂದ ಹೇಳಿದ್ದಾರೆ.
ಇತ್ತೀಚಿಗೆ ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಗಾರರು ಇರಬಹುದು ಅಥವಾ ನಮ್ಮ ದೇಶಕ್ಕಾಗಿ ತಮ್ಮ ಜೀವವನ್ನು ಜೀವನವನ್ನು ಬಲಿದಾನಗೈದ ದೇಶಪ್ರೇಮಿಗಳ ಬಗ್ಗೆ ಇರಬಹುದು ಅಥವಾ ರಾಷ್ಟ್ರೀಯತೆಯನ್ನು ಬಿಂಬಿಸುವಂತಹ ಪಠ್ಯ ಸ್ವಲ್ಪಮಟ್ಟಿಗೆ ಬರಲು ಆರಂಭವಾಗಿತ್ತು ಪ್ರಯತ್ನ ಮುಂದುವರಿಯಬೇಕಾಗಿತ್ತು ಆದರೆ ಅಷ್ಟರಲ್ಲಿ ಕಾಂಗ್ರೆಸ್ ಸರ್ಕಾರ ಪಠ್ಯವನ್ನು ಬದಲಾಯಿಸುತ್ತೇವೆ ಎಂಬ ಹೇಳಿಕೆ ನೀಡಿದ್ದು ಸಮಸ್ತ ದೇಶ ಪ್ರೇಮಿಗಳಿಗೆ ತುಂಬಾ ನೋವನ್ನು ಉಂಟು ಮಾಡಿದೆ ಹಾಗಾಗಿ ಎಲ್ಲಾ ದೇಶಪ್ರೇಮಿಗಳ ಪರವಾಗಿ ಒತ್ತಾಯಿಸುವುದೇನೆಂದರೆ ಸತ್ಯವನ್ನು ಯಾವುದೇ ಕಾರಣಕ್ಕೂ ಬದಲಾಯಿಸದೆ ಇನ್ನಷ್ಟು ದೇಶದ ಬಗ್ಗೆ ನಮ್ಮ ಇತಿಹಾಸದ ಬಗ್ಗೆ ನೈಜ ಚಿತ್ರಣವನ್ನು ಕೊಡುವ ಪ್ರಯತ್ನ ಆಗಲಿ .ನಮ್ಮ ದೇಶದ ಸಂಪ್ರದಾಯ, ಸಂಸ್ಕೃತಿ ಒಟ್ಟಾರೆ ನಮ್ಮತನವನ್ನು ಉಳಿಸಿಕೊಳ್ಳುವ ಪಠ್ಯ ಬರುವಂತಾಗಲಿ ಎಂದು ಅವರು ಒತ್ತಾಯಿಸಿದ್ದಾರೆ.