ಕುಮಟಾ : ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂದರೆ ಒಂದು ವಿಷಯದ ಕುರಿತಾಗಿ ಅತಿಯಾದ ಹುಚ್ಚಿರಬೇಕು, ಹಾಗೂ ನಮ್ಮೊಳಗೆ ಕಿಚ್ಚಿರಬೇಕು, ಇವೆರಡು ಇದ್ದಾಗ ಮಾತ್ರ ನಾವು ಸಾಧನೆ ಮಾಡಲು ಸಾಧ್ಯ ಎಂದು ಧಾರವಾಡದ ಖ್ಯಾತ ಮನೋ ತಜ್ಞ ವೈದ್ಯ ಡಾ.ಆನಂದ ಪಾಂಡುರಂಗಿ ಹೇಳಿದರು. ತಾಲೂಕಿನ ಗೋರೆಯ ಶ್ರೀ ಜಿ.ಎಸ್.ಹೆಗಡೆ ಟ್ರಸ್ಟ್ ನ ಕೆನರಾ ಎಕ್ಸಲೆನ್ಸ್ ಪದವಿಪೂರ್ವ ಕಾಲೇಜಿನ ಆಶ್ರಯದಲ್ಲಿ ನಡೆದ 2023-24ನೇ ಸಾಲಿನ ಶೈಕ್ಷಣಿಕ ವರ್ಷದ ‘ಕಾಲೇಜು ಪ್ರಾರಂಭೋತ್ಸವ’ ಉದ್ಘಾಟಿಸಿ ಅವರು ಮಾತನಾಡಿದರು.
ಜನರು ಇರದಂತಹ ಒಂದು ಕಲ್ಲಿನ ಪ್ರದೇಶವೇ ಆಗಿದ್ದರೂ ಒಂದು ಶಿಕ್ಷಣ ಸಂಸ್ಥೆಯನ್ನು ಮಾಡಬೇಕೆಂಬ ಹುಚ್ಚು ಹಾಗೂ ಕಿಚ್ಚು ಖ್ಯಾತ ವೈದ್ಯ ಡಾ. ಜಿ.ಜಿ ಹೆಗಡೆಯವರಲ್ಲಿ ಇದ್ದ ಕಾರಣದಿಂದಲೇ ಮೌಲ್ಯ ಕೊಡುವ, ಸಂಸ್ಕಾರ ಕೊಡುವ ಒಂದು ಶಿಕ್ಷಣ ಸಂಸ್ಥೆಯನ್ನು ಹುಟ್ಟು ಹಾಕಲು ಕಾರಣವಾಯಿತು. ಗುರುಕುಲ ಪದ್ದತಿಯ ಶಿಕ್ಷಣ ಸಂಸ್ಥೆಯ ಸ್ಥಾಪನೆಗೆ ಕಾರಣವಾಯಿತು. ಪ್ರಕೃತಿಯ ಸೌಂದರ್ಯದ ಸೊಬಗಿನ ಮಧ್ಯದಲ್ಲಿ, ಪ್ರಶಾಂತವಾದ ವಾತಾವರಣದಲ್ಲಿ ಗುರುಕುಲ ಪದ್ದತಿಯ ಶಿಕ್ಷಣ ಸಂಸ್ಥೆ ಕಟ್ಟಿ ನೂರಾರು ಮಕ್ಕಳಿಗೆ ವಿದ್ಯೆಯನ್ನು ಧಾರೆಯೆರೆಯುತ್ತಿರುವುದು ಹೆಮ್ಮೆಪಡುವ ಸಂಗತಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಸಮಯವನ್ನು ವ್ಯರ್ಥ ಮಾಡದೇ ಗುಣಮಟ್ಟದ ಶಿಕ್ಷಣ ಪಡೆಯುವತ್ತ ಹೆಚ್ಚಿನ ಗಮನಹರಿಸಬೇಕು,
ಕಲಿಕೆ ನಿರಂತರ ಪ್ರಕ್ರಿಯೆ. ವಿದ್ಯಾರ್ಥಿಗಳು ರಚನಾತ್ಮಕ, ಧನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿ ಹೇಳಿದ ಅವರು, ಪ್ರತಿಯೊಬ್ಬ ವಿದ್ಯಾರ್ಥಿ ಪ್ರತಿದಿನ 3 ರಿಂದ 4 ಘಂಟೆ ಏಕಾಗ್ರಚಿತ್ತದಿಂದ ಅಭ್ಯಾಸ ಮಾಡಬೇಕು. ಕೇವಲ ಪುಸ್ತಕದ ಹುಳುಗಳಾಗದೇ ಪಠ್ಯೇತರ ಚಟುವಟಿಕೆಗಳಲ್ಲಿಯೂ ಸಕ್ರೀಯವಾಗಿ ಭಾಗವಹಿಸುವ ಮೂಲಕ ಸರ್ವತೋಮುಖ ಬೆಳವಣಿಗೆ ಹೊಂದಬೇಕು. ಶಿಕ್ಷಕಕರ ಮಾರ್ಗದರ್ಶನದಲ್ಲಿ ಗುರಿ ತಲುಪಲು ಪ್ರಾಮಾಣಿಕ ಪ್ರಯತ್ನವಿದ್ದರೆ ಮಾತ್ರ ಸಫಲತೆ ಕಾಣಲು ಸಾಧ್ಯ ಎಂದರು.
ಜಂಜಾಣವಿಲ್ಲದ ಪುಣ್ಯ ಸಂತರ ಓಡಾಟದ ಸ್ಥಳದಲ್ಲಿ, ಮೌಲ್ಯಯುತವಾದ ಗುರುಕುಲ ಪದ್ದತಿಯಲ್ಲಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಾದ ನೀವುಗಳು ಧನ್ಯರು. ತಪಭೂಮಿಯಲ್ಲಿ, ಪುಣ್ಯ ಪರಿಸರದಲ್ಲಿ ಹಠ ಹಿಡಿದು ಈ ಸಂಸ್ಥೆಯನ್ನು ಸ್ಥಾಪಿಸಿದ ಡಾ. ಜಿ.ಜಿ ಹೆಗಡೆಯವರ ಕಾರ್ಯವನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.
ಮೊಬೈಲ್, ಸೋಶಿಯಲ್ ಮೀಡಿಯಾಗಳು ಜನರ ಜೀವ ಹಿಂಡುತ್ತಿದೆ. ಮೊಬೈಲ್ ಬಳಕೆಯಿಂದ ದೂರವಿರಬೇಕು ಎಂದು ತಿಳಿ ಹೇಳಿದ ಅವರು. ಸಹಾಯ ನಮ್ಮದು, ಪ್ರಯತ್ನ ನಿಮ್ಮದಾದರೆ ಗುರಿ ತಲುಪಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಜೀವನಪಾಠ ಮಾಡಿದರು.
ವಿ.ಆರ್.ಎಲ್ ಸಮೂಹ ಸಂಸ್ಥೆ ನೋಡಿ ನಾವು ಕಲಿಯಬೇಕಾಗಿರುವುದು ಬಹಳಷ್ಟಿದೆ. ಸಮಯಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಸಮಯ ವ್ಯರ್ಥ ಮಾಡದೇ ನಿರಂತರ ಪರಿಶ್ರಮ, ಓದು ರೂಢಿಸಿಕೊಳ್ಳಬೇಕು. ಕೇವಲ ಶೈಕ್ಷಣಿಕ ಜ್ಞಾನ ಸಾಲದು. ಸಮಗ್ರ ವ್ಯಕ್ತಿತ್ವ ವಿಕಸನವಾಗಬೇಕು. ಒಂದೊಂದು ಕ್ಷಣವೂ ಹೆಜ್ಜೆ ಇಡುವಾಗ ಯೋಚನೆ ಮಾಡಬೇಕು ಎಂದರು. ಖ್ಯಾತ ಮನೋ ತಜ್ಞ ವೈದ್ಯ ಡಾ.ಆನಂದ ಪಾಂಡುರಂಗಿ ಅವರನ್ನು ಸಂಸ್ಥೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕೆನರಾ ಎಕ್ಸಲೆನ್ಸ್ ಪದವಿಪೂರ್ವ ಕಾಲೇಜಿನ ಅಧ್ಯಕ್ಷ ಡಾ.ಜಿ.ಜಿ.ಹೆಗಡೆ ಪ್ರಸ್ತಾವಿಕ ಮಾತನಾಡಿ,
ಅನೇಕ ಸಾಧಕರನ್ನು ಪರಿಚಯಿಸುವ ತುಡಿತದ ಕಾರ್ಯ ನಮ್ಮದು. ಸಾಧಕರಂತೆ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳೂ ಸಾಧನೆ ಮಾಡಬೇಕು ಎಂಬುದು ನಮ್ಮ ಉದ್ದೇಶ. ನಮ್ಮ ಶಿಕ್ಷಣ ಸಂಸ್ಥೆ ಸಂಸ್ಕಾರದೊಂದಿಗೆ ಶಿಕ್ಷಣ ನೀಡುವ ಸದುದ್ದೇಶ ಹೊಂದಿದೆ. ವಿದ್ಯಾಸಂಸ್ಥೆ ಕಟ್ಟಬೇಕೆಂಬ ಬಯಕೆಯೂ ನನ್ನದಾಗಿತ್ತು. ಆ ಛಲ ಈಗ ಸಫಲವಾಗಿದೆ. ಕರೋನ ಕಾಲದಲ್ಲಿಯೂ ಅನೇಕ ಏಳುಬೀಳುಗಳ ನಡುವೆಯೂ ದೈವಾನುಗ್ರಹದಿಂದ ಈ ಸಂಸ್ಥೆ ಕಟ್ಟಿದ್ದೇನೆ. ನಮ್ಮಲ್ಲಿ ಅನೇಕ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ಗೋರೆ ಶಿಕ್ಷಣ ಸಂಸ್ಥೆ ಮೇಲೆ ಪಾಲಕರು ವಿಶ್ವಾಸವಿಟ್ಟು ತಮ್ಮ ಮಕ್ಕಳನ್ನು ಇಲ್ಲಿ ಓದಿಸಲು ಮುಂದಾಗಿದ್ದಾರೆ ಎಂದ ಅವರು ನಮ್ಮ ಸಂಸ್ಥೆ ಅನೇಕರ ಬದುಕು ಬೆಳಗಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಸಾಧನೆಗೈದ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳಾದ ವೈಶಾಲಿ ವೆಂಕಟ್ರಮಣ ಭಟ್ಟ, ಸಮರ್ಥ ಹೆಗಡೆ, ರಕ್ಷಿತಾ ಹೆಗಡೆ, ಸಿಂಧು ಹೆಗಡೆ, ಶ್ರೀನಿಧಿ ಹೆಗಡೆ, ಧನ್ಯಾ ದೇವಾಡಿಗ, ರೋಹನ ಗುನಗಾ, ವಿಶಾಲ ಹೆಗಡೆ ಯವರನ್ನು ಗೌರವಿಸಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಾಜೇಂದ್ರ ಎಲ್ ಭಟ್ಟ ಮಾತನಾಡಿ ಇಂತಹ ದಿವ್ಯ ಪರಿಸರದಲ್ಲಿ ಸಂಸ್ಥೆಯನ್ನು ಕಟ್ಟಿ ಯಶಸ್ವಿಯಾಗಿ ಮುನ್ನಡೆಸುತ್ತಿರುವುದು ಶಿಕ್ಷಣ ಇಲಾಖೆಯೂ ಹೆಮ್ಮೆಪಡುವ ಸಂಗತಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಖ್ಯಾತ ಸ್ತ್ರೀ ತಜ್ಞೆ, ಸಂಸ್ಥೆಯ ಕಾರ್ಯದರ್ಶಿ ಸೀತಾಲಕ್ಷ್ಮೀ ಹೆಗಡೆ, ಡಾ.ಅಶೋಕ ಭಟ್ಟ ಹಳಕಾರ್ ಉಪಸ್ಥಿತರಿದ್ದರು. ಸಂಸ್ಥೆಯ ಪ್ರಾಚಾರ್ಯ ಡಿ.ಎನ್.ಭಟ್ ಸ್ವಾಗತಿಸಿದರು. ಶಿಕ್ಷಕಿ ಪೂಜಾ ಭಟ್ಟ ನಿರೂಪಿಸಿದರು. ಹರ್ಷಿತ ಎಸ್. ವಿ ವಂದಿಸಿದರು.