ಶಿರಸಿ: ನಗರದ ಮಾರುಕಟ್ಟೆ ರಸ್ತೆಯಲ್ಲಿರುವ ಓಂಕಾರ್ ಜ್ಯುವೆಲ್ಲರಿ ಅಂಗಡಿಯಲ್ಲಿ ಸುಮಾರು
93 ಸಾವಿರ ರೂ. ಮೌಲ್ಯದ ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಹಾಗೂ ಕಳುವಾದ ಚಿನ್ನಾಭರಣಗಳನ್ನು ಶಿರಸಿ ನಗರ ಠಾಣೆ
ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
ಗದಗದ ಸಂಗೀತಾ ಯಲ್ಲೋಸಾ ಬಾಕಳೆ(42), ಹುಬ್ಬಳ್ಳಿಯ ರಾಜೇಶ್ವರಿ ಬಾಂಡಗೆ (48) ಹಾಗೂ ಗದಗದ ಶೋಭಾ ಬಾಯಿ ಜಿತೂರಿ(63) ಬಂಧಿತ ಆರೋಪಿಗಳಾಗಿದ್ದಾರೆ.
ಈ ಮೂವರು ಜೂ.15 ರಂದು ವಾಮನ ನಾಗೇಶ್ ರಾಯ್ಡರ್ ಎಂಬವರ ಓಂಕಾರ್ ಜ್ಯುವೆಲ್ಲರಿ ಅಂಗಡಿಗೆ ಬಂದು ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿದ್ದರು. ಕಳ್ಳತನದ ದೃಶ್ಯಾವಳಿಗಳು ಸಿ.ಸಿ.ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ಈ ದೃಶ್ಯಾವಳಿಗಳನ್ನು ಆಧಾರವಾಗಿಟ್ಟುಕೊಂಡು ಆರೋಪಿಗಳನ್ನು ಬಂಧಿಸಿ ಸುಮಾರು 93 ಸಾವಿರ ರೂ. ಮೌಲ್ಯದ ಬಂಗಾರ ಹಾಗೂ ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಶಿರಸಿ ನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.