ಕುಮಟಾ : ಪಟ್ಟಣದ ಚಿತ್ರಗಿಯ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ಚಲನಚಿತ್ರ ನಿರ್ಮಾಪಕ ಸುಬ್ರಾಯ ವಾಳ್ಕೆಯವರು, ಕಳೆದ ಶೈಕ್ಷಣಿಕ ವರ್ಷದ ಸ್ನೇಹ ಸಮ್ಮೇಳನದಲ್ಲಿ ವಾಗ್ದಾನ ನೀಡಿದಂತೆ, ಈ ಸಾಲಿನ ಎಂಟನೇ ವರ್ಗಕ್ಕೆ ಪ್ರವೇಶಾತಿ ಪಡೆದ ಮಕ್ಕಳಿಗೆ ಉಚಿತ ಸ್ಕೂಲ್ ಬ್ಯಾಗ್ ಹಾಗೂ ಆಯ್ದ ಅರ್ಹರಿಗೆ ಪಾಠೋಪಕರಣ ವಿತರಿಸಿ ಆದರ್ಶ ಮೆರೆದರು.
ವಾಳ್ಕೆಯವರ ಅನುಪಸ್ಥಿತಿಯಲ್ಲಿ ಅವರ ಕುಟುಂಬಿಕರಾದ ಕರುಣಾ ಕಿಶನ್ ವಾಳ್ಕೆ ಹಾಗೂ ಶ್ವೇತಾ ವಾಳ್ಕೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಈ ಮೊದಲು ಶಿಕ್ಷಕ ಸುರೇಶ್ ಪೈ ನೇತೃತ್ವದಲ್ಲಿ ಶಾಲಾ ಸಂಸತ್ತನ್ನು ಸಂಘಟಿಸಲಾಯಿತು. ಸಂದೇಶ ಗೋವಿಂದ ಪಟಗಾರ ಹಾಗೂ ನವ್ಯಾ ದಾಮೋದರ ನಾಯ್ಕ ಶಾಲಾ ಮುಖ್ಯಮಂತ್ರಿಗಳಾಗಿ ಸರ್ವಾನುಮತದಿಂದ ಆಯ್ದುಕೊಂಡರು. ಇವರ ನಿರ್ದೇಶನದಲ್ಲಿ ಅರ್ಹ ವಿದ್ಯಾರ್ಥಿ- ವಿದ್ಯಾರ್ಥಿನಿಯರನ್ನು ಆಯ್ದು ವಿದ್ಯಾರ್ಥಿ ಮಂಡಲ ರಚಿಸಲಾಯಿತು. ಅಲ್ಲದೆ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪೂರ್ವ ನಿಗದಿಗೊಂಡ ಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು. ಅನೇಕ ವಿದ್ಯಾರ್ಥಿಗಳು ತಮ್ಮ ವಾಕ್ ಪ್ರತಿಭೆಯನ್ನು ಈ ಮೂಲಕ ತೋರ್ಪಡಿಸಿದರು.
ಪರಿಸರ ಸಂರಕ್ಷಣೆಯ ಸಂಸ್ಮರಣೆಯಲ್ಲಿ ಹೂಕುಂಡಕ್ಕೆ ನೀರೆರೆಯುವುದರ ಮೂಲಕ ಶುಭಾರಂಭಗೊಂಡ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯಾಧ್ಯಾಪಕ ಪಾಂಡುರಂಗ ವಾಗ್ರೇಕರ ವಹಿಸಿದ್ದರು. ಸುಮಾರು 80 ಸಾವಿರ ರೂಪಾಯಿ ಮೌಲ್ಯದ ಪಾಠೋಪಕರಣಗಳನ್ನು ವಿತರಿಸಿ, ವಿವಿಧ ಸಂದರ್ಭಗಳಲ್ಲಿ ಶಾಲೆಗೆ ದೇಣಿಗೆ ನೀಡಿದ ವಾಳ್ಕೆಯವರ ಸಹಾಯವನ್ನು ಸ್ಮರಿಸಿದರು.
ಈ ಮೂಲಕ ಬ್ಯಾಗ ರಹಿತ ದಿನದ ವಿಶೇಷ ಅನುಭವವನ್ನು ವಿದ್ಯಾರ್ಥಿಗಳು ಪಡೆದು ಸಂತಸಗೊಂಡರು. ಅತಿಥಿಗಳಾಗಿ ಆಗಮಿಸಿದ ಕರುಣಾ ವಾಳ್ಕೆ ಕೊಡಮಾಡಿದ ಸಿಹಿ ವಿತರಣೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.