ಕುಮಟಾ : ರೋಟರಿ ಕ್ಲಬ್ ಕುಮಟಾ ಹಾಗೂ ಸೌಖ್ಯ ಚಾರಿಟೇಬಲ್ ಟ್ರಸ್ಟ್ ಇದರ ಸಹಯೋಗದಲ್ಲಿ, ಬೆಂಗಳೂರು ಕಿಡ್ನಿ ಫೌಂಡೇಶನ್ ಅವರು ಸೌಖ್ಯ ಡಯಾಲಿಸಿಸ್ ಸೆಂಟರ್ ಗೆ ಕೊಡುಗೆಯಾಗಿ ನೀಡಿರುವ ಎರಡು ಡಯಾಲಿಸಿಸ್ ಯಂತ್ರಗಳನ್ನು ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾದ ದಿನಕರ ಶೆಟ್ಟಿಯವರು ರವಿವಾರ ಲೋಕಾರ್ಪಣೆ ಮಾಡಿದರು.
ನಂತರ ಮಾತನಾಡಿದ ಅವರು ರೋಟರಿ ಕ್ಲಬ್ ಸಮಾಜಕ್ಕೆ ಈ ಹಿಂದಿನಿಂದಲೂ ಉತ್ತಮ ಕೊಡುಗೆಯನ್ನು ನೀಡುತ್ತಾ ಬಂದಿದೆ, ನಾನು ಚಿಕ್ಕವನಿದ್ದಾಗಿನಿಂದಲೂ ರೋಟರಿ ಕ್ಲಬ್ ನ ಕಾರ್ಯ ಚಟುವಟಿಕೆಯನ್ನು ಗಮನಿಸುತ್ತಾ ಬಂದಿದ್ದೇನೆ. ಕುಮಟಾದ ಜನರಿಗೆ ಬೇಕಾಗುವ ಎಲ್ಲಾ ಅವಶ್ಯಕತೆಗಳನ್ನು ಈಡೇರಿಸಲು ರೋಟರಿ ಕ್ಲಬ್ ಪ್ರಾಮಾಣಿಕ ಪ್ರಯತ್ನ ಮಾಡುತ್ತಾ ಬರುತ್ತಿರುವುದನ್ನು ನಾನು ಗಮನಿಸಿದ್ದೇನೆ. ವರ್ಷಕ್ಕೆ 14 ಸಾವಿರ ರೂಪಾಯಿಗಳನ್ನು ರೋಟರಿ ಸದಸ್ಯರು ತಾವು ಕಟ್ಟಿ, ತಮ್ಮ ಸಮಯವನ್ನು ನೀಡಿ, ಸಮಾಜಕ್ಕೆ ಉತ್ತಮವಾದ ಕೊಡುಗೆ ನೀಡುತ್ತಿದ್ದಾರೆ. ಕುಮಟಾದಲ್ಲಿ ಟ್ರಾಮಾ ಸೆಂಟರ್ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಜನರ ಆರೋಗ್ಯದ ದೃಷ್ಟಿಯಿಂದ ಅವಶ್ಯ ಹೇಳಿದ ಇನ್ನಿತರ ಕಾಮಗಾರಿಗಳನ್ನು ಮಾಡಿಸಿ ಕೊಡುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಅಭಿಪ್ರಾಯ ಪಟ್ಟರು.
ಸೌಖ್ಯ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಸತೀಶ್ ನಾಯ್ಕ ಮಾತನಾಡಿ, ಡಯಾಲಿಸಿಸ್ ಮಾಡಿಕೊಳ್ಳಲು ದುಡ್ಡಿಲ್ಲವೆಂಬ ಕಾರಣಕ್ಕೆ ಡಯಾಲಿಸಿಸ್ ಮಾಡಿಸಿಕೊಳ್ಳದೆ ಪ್ರಾಣ ಕಳೆದುಕೊಳ್ಳುವ ಅನೇಕ ಜನರಿದ್ದಾರೆ. ಅಂತವರಿಗೆ ನೆರವಾಗುವುದು ನಮ್ಮ ಕರ್ತವ್ಯ. ಹೀಗಾಗಿ ಈ ವಿಷಯವನ್ನು ರೋಟರಿ ಸದಸ್ಯರ ಗಮನಕ್ಕೆ ತಂದು ಈ ಕಾರ್ಯಕ್ಕೆ ನಾನು ಮುಂದಾಗಿದ್ದೇನೆ. ದಾನಿಗಳಿಂದ ಕೊಡುಗೆಯಾಗಿ ನೀಡಿದ ಡಯಾಲಿಸಿಸ್ ಮಶೀನ್ ಗಳು ಜನತೆಯ ಉಪಯೋಗಕ್ಕೆ ಬರುತ್ತಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ದಿನನಿತ್ಯದ ಖರ್ಚುಗಳಿಗೆ ನಮಗೆ ಹಣ ಸಾಕಾಗದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಅಂತಹ ಸಂದರ್ಭದಲ್ಲಿ ಡಯಾಲಿಸಿಸ್ ಮಾಡಿಸಿಕೊಳ್ಳುವಂತಹ ಪರಿಸ್ಥಿತಿ ಬಂದಾಗ ಜನರ ಗೋಳು ಹೇಳತೀರದು. ಇಂತಹ ಜನರಿಗೆ ಆರೋಗ್ಯ ಕ್ಷೇತ್ರದಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ ರೋಟರಿ ಜನತೆಯ ಉಪಯೋಗಕ್ಕೆ ಬರುವಂತಹ ಅನೇಕ ಕಾರ್ಯ ಮಾಡುತ್ತಿದೆ. ಕುಮಟಾದ ಹೈ ಟೆಕ್ 24×7 ಆಸ್ಪತ್ರೆಯಲ್ಲಿ ಕುಮಟಾ ರೋಟರಿ ವತಿಯಿಂದ ಸೌಖ್ಯ ಡಯಾಲಿಸಿಸ್ ಸೆಂಟರ್ ಸೇವೆಸಲ್ಲಿಸಲಿದೆ ಎಂದು ರೋಟೇರಿಯನ್ ಡಾ. ಅನಂತಮೂರ್ತಿ ಶಾಸ್ತ್ರಿ ಹೇಳಿದರು.
ಕಿಡ್ನಿ ಫೌಂಡೇಶನ್ ಬೆಂಗಳೂರು ಇದರ ಟ್ರಸ್ಟಿ ಶ್ರೀ ಸುಧೀರ್ ಶೆಣೈ, ರೋಟೇರಿಯನ್ ವಸಂತ್ ಚಂದ್ರ ಬೆಂಗಳೂರು, ನೆಪ್ರೂಲಾಜಿಸ್ಟ್ ಡಾ. ರಾಘವೇಂದ್ರ ನಾಯಕ, ಹೈಟೆಕ್ ಆಸ್ಪತ್ರೆಯ ಮುಖ್ಯಸ್ಥ ನಿತೀಶ ಶಾನಭಾಗ, ಕುಮಟಾ ರೋಟರಿ ಕ್ಲಬ್ ಅಧ್ಯಕ್ಷ ಶ್ರೀ ಚೇತನ್ ಶೇಟ್ ಹಾಗೂ ಕಾರ್ಯದರ್ಶಿ ಪವನ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.