ಬೆಂಗಳೂರು: ಬಿಗಿಯಾದ, ಮೇಣದಂಥ ಮತ್ತು ಕಾಗದದಂತಹ ಚರ್ಮ ಹೊಂದಿರುವ ಮಗುವಿಗೆ ಮಹಿಳೆ ಜನ್ಮ ನೀಡಿರುವ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ. ಸುಮಾರು ನಾಲ್ಕು ವಾರಗಳ ಕಾಲ ತೀವ್ರವಾದ ಚಿಕಿತ್ಸೆ ನೀಡಿದ ಬಳಿಕ ಮಗು ಬದುಕಿ ಉಳಿದಿದೆ. ಮಗುವಿನ ದೇಹ ದಟ್ಟವಾದ ಪೊರೆಯಲ್ಲಿ ಸುತ್ತುವರಿದಿದ್ದರಿಂದ ಹಲವಾರು ಸವಾಲುಗಳನ್ನು ಎದುರಿಸಿತು. ಪರಿಣಾಮವಾಗಿ ಇದು ಕಣ್ಣಿನ ರೆಪ್ಪೆಗಳನ್ನು ಮುಚ್ಚಲು ಅಸಮರ್ಥವಾಗಿ ಮತ್ತು ಮೇಲಿನ ತುಟಿಯೂ ಅಸಹಜತೆಗಳಿಂದ ಕೂಡಿತ್ತು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಮಗುವಿನ ಚರ್ಮ ಪ್ಲಾಸ್ಟಿಕ್ ಹೊದಿಕೆಯನ್ನು ಹೋಲುವಂತಿತ್ತು. ಒಣ, ತುರಿಕೆ ಚರ್ಮ ಮಗುವನ್ನು ರಬ್ಬರ್ ತರಹದ ಆಕೃತಿ ಕಾಣುವಂತೆ ಮಾಡಿತ್ತು ಎಂದು ನಾರಾಯಣ ಹೆಲ್ತ್ ನ ಮಜುಮ್ದಾರ್ ಷಾ ವೈದ್ಯಕೀಯ ಕೇಂದ್ರದ ಶಿಶುವೈದ್ಯಶಾಸ್ತ್ರ ಮತ್ತು ನಿಯೋನಾಟಾಲಜಿ ವೈದ್ಯರಾದ ಡಾ. ಹರಿಣಿ ಶ್ರೀಧನ್ ಹೇಳಿದ್ದಾರೆ.
ಈ ಸ್ಥಿತಿಯಿಂದಾಗಿ ತಾಯಿಗೆ ಮಗುವಿಗೆ ಹಾಲು ಕುಡಿಸುವುದೂ ಕಷ್ಟವಾಗುತ್ತಿತ್ತು. ಇದಷ್ಟೇ ಅಲ್ಲದೇ ಮಗುವಿನ ಈ ರೀತಿಯ ಚರ್ಮದ ಸಮಸ್ಯೆಯಿಂದಾಗಿ ಸೋಂಕುಗಳು, ಉಸಿರಾಟದ ತೊಂದರೆ ಮತ್ತು ಎಲೆಕ್ಟ್ರೋಲೈಟ್ ಅಸಮತೋಲನಗಳೂ ಎದುರಾಗುತ್ತಿತ್ತು. ಮಗುವಿಗೆ ನಾಲ್ಕು ವಾರಗಳ ಕಾಲ ಐಸಿಯು ನಲ್ಲಿ ಚಿಕಿತ್ಸೆ ನೀಡಲಾಯಿತು. ಚರ್ಮಶಾಸ್ತ್ರಜ್ಞರು, ನೇತ್ರಶಾಸ್ತ್ರಜ್ಞರು ಮತ್ತು ನವಜಾತಶಾಸ್ತ್ರಜ್ಞರ ಚಿಕಿತ್ಸೆಯ ಪರಿಣಾಮದಿಂದ ಮಗು ಬದುಕಿ ಉಳಿಯಿತು.
ಈ ರೀತಿಯ ವಿಚಿತ್ರ ಸಮಸ್ಯೆ 3 ಲಕ್ಷ ಮಕ್ಕಳಲಲ್ಲಿ ಒಂದು ಮಗುವಿನಲ್ಲಿ ಮಾತ್ರ ಕಾಣಿಸಿಕೊಳ್ಳಲಿದೆ ಎಂದು ವೈದ್ಯರು ಹೇಳಿದ್ದಾರೆ.
ಕೊಲೊಡಿಯನ್ ಮೆಂಬರೇನ್ ಕಾಲಾನಂತರದಲ್ಲಿ ಕಿತ್ತುಬರುತ್ತದೆ. ಆದಾಗ್ಯೂ, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ವರದಿಯ ಪ್ರಕಾರ, ಹತ್ತನೇ ಒಂದು ಭಾಗದಷ್ಟು ರೋಗಿಗಳು ಮಾತ್ರ ನಂತರ ಸಾಮಾನ್ಯ ಚರ್ಮವನ್ನು ಹೊಂದುತ್ತಾರೆ. ಜಾಗತಿಕವಾಗಿ ಇಂತಹ ಸಂಕೀರ್ಣ ಪ್ರಕರಣಗಳಲ್ಲಿ ಮರಣ ಪ್ರಮಾಣ ಶೇ.53 ರಷ್ಟಿದೆ ಎಂದು ವೈದ್ಯರು ಹೇಳಿದ್ದಾರೆ.