ಗೋಕರ್ಣ ;ಯಕ್ಷಲೋಕದ ಧ್ರುವತಾರೆ ದಿ|| ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರಿಗೆ ಗೋಕರ್ಣದ ಶಂಕರ ಶಾರದಾಪೀಠದ ಸಭಾಭವನದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ. ಈ ಕಾರ್ಯಕ್ರಮವನ್ನು ಗೋಕರ್ಣದ ಸುತ್ತಮುತ್ತಲಿನ ಚಿಟ್ಟಾಣಿಯವರ ಅಭಿಮಾನಿಗಳಾದ ಶ್ರೀ ಅರುಣ ಕವರಿ, ಶಂಕರ ಗೋಪಿ, ಇವರ ನೇತ್ರತ್ವದಲ್ಲಿ ಸಂಯೋಜಿಸಲಾಗಿತ್ತು. ದಿ|| ಚಿಟ್ಟಾಣಿ ರಾಮಚಂದ್ರ ಹೆಗಡೆಯವರಿಗೆ ಪುಷ್ಪನಮನ ಸಲ್ಲಿಸಿ ನಾಗರಾಜ ನಾಯಕ ತೊರ್ಕೆಯವರು ಮಾತನಾಡಿ ಚಿಟ್ಟಾಣಿಯವರು ಏಕಮೇವ ಅದ್ವಿತೀಯ ಯಕ್ಷಗಾನ ಕಲಾವಿದ. ಇವರಿಗೆ ಇವರೇ ಸಾಟಿ, ಇವರಿಗೆ ಹೋಲಿಸಲು ಯಕ್ಷರಂಗದಲ್ಲಿ ಇನ್ನೊಬ್ಬ ಕಲಾವಿದರು ಗೋಚರಿಸುವುದಿಲ್ಲ. ನಾನೊಬ್ಬ ಅವರ ಅಭಿಮಾನಿ ಶಿಷ್ಯ. ಅವರು ನನ್ನ ಮೇಲೆ ಎಂತಹ ಪ್ರಭಾವ ಬೀರಿದ್ದರೆಂದರೆ ನನ್ನ 58 ನೇ ವಯಸ್ಸಿನಲ್ಲೂ ಅವರ ನೆಚ್ಚಿನ ಪಾತ್ರಗಳಲ್ಲೊಂದಾದ ಕೀಚಕನ ಪಾತ್ರವನ್ನು ವಹಿಸುವುದರ ಮೂಲಕ ಬಾಲ್ಯದ ಬಯಕೆಯನ್ನು ಈಡೇರಿಸಿಕೊಂಡಿದ್ದೇನೆ. ಕೇವಲ ಒಂದು ತಿಂಗಳ ಹಿಂದೆ ಮೊರಬದಲ್ಲಿ ಚಿಟ್ಟಾಣಿಯವರನ್ನು ಸನ್ಮಾನಿಸಿದ್ದು ಆಗ ನಿಮ್ಮ ಸಮ್ಮುಖದಲ್ಲಿ ಗದಾಯುದ್ಧದ ಕೌರವನ ಪಾತ್ರವನ್ನು ಮಾಡುವ ಹೆಬ್ಬಯಕೆ ಇದೆ ಎಂಬುದನ್ನು ವ್ಯಕ್ತಪಡಿಸಿದ್ದೆ. ಆದರೆ ಅವರು ಇಂದು ನಮ್ಮನ್ನೆಲ್ಲ ಅಗಲಿದ್ದಾರೆ. ಆದರೂ ಆ ಪಾತ್ರ ಮಾಡುವ ಮೂಲಕ ಹೃದಯಪೂರ್ವಕ ಶ್ರದ್ಧಾಂಜಲಿ ಸಲ್ಲಿಸಲು ಬಯಸುತ್ತೇನೆ. ಇದಕ್ಕೆ ನನ್ನ ಇನ್ನೋರ್ವ ಗುರುಗಳಾದ ಶ್ರೀ ಸುಬ್ರಹ್ಮಣ್ಯ ಧಾರೇಶ್ವರ ಅವರ ಕೃಪೆಯಾಗಬೇಕು ಎಂದು ನುಡಿದು ಯಕ್ಷರಂಗಕ್ಕೆ ಹೊಸಭಾಷ್ಯ ಬರೆದ ಧೀಮಂತ ನಾಯಕ. 84 ರ ಇಳಿ ವಯಸಿನಲ್ಲೂ ಲೀಲಾಜಾಲವಾಗಿ ಯಕ್ಷಗಾನದ ಪಾತ್ರ ನಿರ್ವಹಿಸುವಷ್ಟು ತನುಮನಗಳು ಯಕ್ಷಗಾನದಲ್ಲಿ ಹಾಸುಹೊಕ್ಕಾಗಿದ್ದು ಯಕ್ಷಗಾನವೆಂದರೆ ಚಿಟ್ಟಾಣಿರಾಮಚಂದ್ರ ಹೆಗಡೆ ಎನ್ನುವಷ್ಟರಮಟ್ಟಿಗೆ ಜನಮಾನಸದಲ್ಲಿ ಚಿರಸ್ಥಾಯಿಯಾಗಿದ್ದಾರೆ. ಪದ್ಮಶ್ರೀಯಂತಹ ಅತ್ಯನ್ನತ ಪ್ರಶಸ್ತಿ ಗಳಿಸಿದ್ದರೂ ಕೂಡಾ ಸಹ ಕಲಾವಿದರೊಂದಿಗೆ ಅತ್ಯಂತ ಅನ್ಯೋನ್ಯವಾಗಿ, ಗೌರವಪೂರ್ವಕವಾಗಿ ವ್ಯವಹರಿಸುವ, ಆಶೀರ್ವದಿಸಿ ಪ್ರೋತ್ಸಾಹಿಸುವ ಅವರ ಮಹತ್ತರ ಗುಣವನ್ನು ಸ್ಮರಿಸಿಕೊಂಡರು.

RELATED ARTICLES  2019ರ ಸಿಇಟಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 3, 200 ರ್ಯಾಂಕ್ ಪಡೆದು ಸಾಧನೆ ಮಾಡಿದ ಕತಗಾಲದ ಚಂದ್ರಶೇಖರ ಗೌಡ

ಈ ಸಂದರ್ಭದಲ್ಲಿ ಪ್ರಸಿದ್ಧ ಯಕ್ಷಗಾನ ಭಾಗವತರಾದ ಸುಬ್ರಹ್ಮಣ್ಯ ಧಾರೇಶ್ವರ, ಬಿಜೆಪಿ ಮುಖಂಡ ನಾಗರಾಜ ನಾಯಕ ತೊರ್ಕೆ, ಅನಂತ ಹಾವಗೋಡಿ, ಯಕ್ಷ ಕಲಾವಿದ ಬೀರಣ್ಣ ಮಾಸ್ತರ, ಪ್ರದೀಪ ನಾಯಕ, ಭಾರತಿ ದೇವತೆ ಮುಂತಾದವರು ಉಪಸ್ಥಿತರಿದ್ದರು.

RELATED ARTICLES  ಇಂದಿನ ಅಡಿಕೆ ಧಾರಣೆ ( ಕುಮಟಾ,ಹೊನ್ನಾವರ,ಸಿದ್ದಾಪುರ)

ಇದೇ ವೇದಿಕೆಯಲ್ಲಿ ಸುಬ್ರಹ್ಮಣ್ಯ ಧಾರೇಶ್ವರ ಅವರು ಮಾತನಾಡಿ ತೆಂಕು-ಬಡಗು ತಿಟ್ಟಿನ ಯಕ್ಷಕಲೆಯಲ್ಲಿ ಏಕಕಾಲದಲ್ಲಿ ಚಕ್ರಾಧಿಪತಿಗಳಾಗಿ ಮೆರೆದವರು ನಮ್ಮ ಚಿಟ್ಟಾಣಿ ಹೆಗಡೆಯವರು. ತೆಂಕುತಿಟ್ಟಿನ ಕಲಾಭಿಮಾನಿಗಳೂ ಸಹ ಅಲ್ಲಿಯ ಪ್ರಸಿದ್ಧ ಕಲಾವಿದರಂತೆ ಇವರನ್ನೂ ಗೌರವದಿಂದ ನೋಡುತ್ತಿದ್ದರು. ಯಕ್ಷಲೋಕಕ್ಕೆ ಭಸ್ಮಾಸುರ, ಕೀಚಕ, ಕೌರವ, ಹಿರಣ್ಯಕಶ್ಯಪು ಮುಂತಾದ ಪಾತ್ರಗಳು ಚಿಟ್ಟಾಣಿಯವರದೇ ಶೈಲಿಯಲ್ಲಿ ಬೆಳೆದು ಬಂದಿವೆ. ಇದು ಚಿಟ್ಟಾಣಿಯವರ ವ್ಯಕ್ತಿತ್ವ ಮತ್ತು ಅವರು ಯಕ್ಷಗಾನಕ್ಕೆ ಕೊಟ್ಟ ಕೊಡುಗೆ. ಇಳಿ ವಯಸ್ಸಿನಲ್ಲೂ ಅಭಿನಯದಲ್ಲಿ ತಮ್ಮ ಪ್ರಯತ್ನವನ್ನು ಕಡಿಮೆ ಮಾಡಿದವರಲ್ಲ ಎಂದು ನುಡಿದು ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು.

ಈ ಸಂದರ್ಭದಲ್ಲಿ ಪ್ರದೀಪ ನಾಯಕ, ಶ್ರೀಧರ ಅಡಿ, ಅರುಣ ಕವರಿ, ಶಂಕರ ಗೋಪಿ ಹಾಗೂ ಇನ್ನಿತರರು ಹೂನಮನ ಅರ್ಪಿಸಿದರು. ಅನಂತ ಅಡಿಯವರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.