ಕುಮಟಾ : ವಿದ್ಯಾರ್ಥಿಗಳು ಅಧ್ಯಯನಕಡೆಗೆ ಹೆಚ್ಚಿನ ಗಮನ ನೀಡಬೇಕು. ಸಾಮಾಜಿಕ ಜಾಲತಾಣಗಳಿಗೆ ಹಾಗೂ ಮಾದಕ ವ್ಯಸನದ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಅವುಗಳಿಗೆ ಅಂಟಿಕೊಳ್ಳದೆ ದೂರವಿರಬೇಕು ಎಂದು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಈ.ಸಿ ಸಂಪತ್ ಮಕ್ಕಳಿಗೆ ಕಿವಿಮಾತು ಹೇಳಿದರು. ಅವರು ತಾಲೂಕಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಹಾಗೂ ವಿಧಾತ್ರಿ ಅಕಾಡೆಮಿಯ ಸಹಯೋಗದಲ್ಲಿ ನಡೆಯುತ್ತಿರುವ ಸರಸ್ವತಿ ಪಿ.ಯು ಕಾಲೇಜಿನಲ್ಲಿ ಉತ್ತರಕನ್ನಡ ಜಿಲ್ಲಾ ಪೊಲೀಸ್ ಭಟ್ಕಳ ಉಪ ವಿಭಾಗದ ಕುಮಟಾ ಪೊಲೀಸ್ ಠಾಣೆಯ ಸಹಯೋಗದಲ್ಲಿ ನಡೆದ ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದರು.

ಮಾದಕ ದ್ರವ್ಯಗಳ ಕುರಿತಾಗಿ ಮಕ್ಕಳು ಜಾಗೃತಿ ವಹಿಸಬೇಕು. ಇನ್ನೊಬ್ಬರ ಮೋಸದ ಜಾಲದಲ್ಲಿ ಸಿಲುಕಿ ಮಾದಕ ದ್ರವ್ಯಗಳಾದ ತಂಬಾಕು, ಸಿಗರೇಟು, ಗುಟ್ಕಾ, ಗಾಂಜಾ, ಸಾರಾಯಿಗಳ ವ್ಯಸನಕ್ಕೆ ಬಲಿಯಾಗುವವರ ಸಂಖ್ಯೆ ಹೆಚ್ಚಿದೆ. ವಿದ್ಯಾರ್ಥಿಗಳು ಈ ಬಗ್ಗೆ ಎಚ್ಚರ ವಹಿಸಬೇಕು ಎಂದರು.

RELATED ARTICLES  ಗೋಡೆ ನಾರಾಯಣ ಹೆಗಡೆ ಅವರಿಗೆ ಅನಂತಶ್ರೀ ಪ್ರಶಸ್ತಿ ಪ್ರದಾನ

ಸಾಮಾಜಿಕ ಜಾಲತಾಣಗಳ ಮೋಹಕ ಜಾಲದ ಸುಳಿಯಲ್ಲಿ ಹದಿಹರೆಯದವರು ಮಿತ್ರರಿಂದ ದೂರವಾಗಿ ತಮ್ಮನ್ನು ತಾವೇ ಏಕಾಂಗಿತನಕ್ಕೆ ನೂಕಿಕೊಳ್ತಿದ್ದಾರೆ. ಜೀವನ ಹಾಗೂ ಸಾಮಾಜಿಕ ಜಾಲತಾಣಗಳ ಮಧ್ಯೆ ಸಮತೋಲನ ಬೇಕಾಗಿದೆ. ಅತಿಯಾದ ಬಳಕೆ ಏಕಾಂಗಿತನ, ಖಿನ್ನತೆ, ಆತಂಕಗಳಿಗೆ ದೂಡುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣದಿಂದ ದೂರವಿರಬೇಕು. ಮಾದಕ ದ್ರವ್ಯಗಳ ಬಗ್ಗೆ ಎಚ್ಚರ ಇರಲಿ. ಯಾರಾದರೂ ಮಾದಕ ವ್ಯಸನದಲ್ಲಿ ತೊಡಗಿದ್ದರೆ ಪಾಲಕರಿಗೆ ಅಥವಾ ಉಪನ್ಯಾಸಕರಿಗೆ ಮಾಹಿತಿ ನೀಡಿ ಅವರನ್ನು ಸರಿದಾರಿಗೆ ತರಲು ಪ್ರಯತ್ನಿಸಿ ಎಂದು ಅವರು ಸಲಹೆ ನೀಡಿದರು.

RELATED ARTICLES  ಹೊಸ ಹೆರವಟ್ಟಾ ರೋಡಿಗೆ  ಸಿಗುವುದೇ ಕಾಯಕಲ್ಪ?

ನಮ್ಮ ಕರ್ತವ್ಯದ ಅರಿವು ನಮಗೆ ಇರಬೇಕು. ಕಾಲೇಜಿನ ವಯಸ್ಸಿನಲ್ಲಿ ತಪ್ಪುಗಳಾಗದಂತೆ ವಿದ್ಯಾರ್ಥಿಗಳು ತಿಳುವಳಿಕೆ ಬೆಳೆಸಿಕೊಳ್ಳಬೇಕು. ಯಾವುದೇ ದುರ್ವ್ಯಸನಕ್ಕೆ ಒಳಗಾಗದೆ ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ನಾವು ಕೊಡುಗೆ ನೀಡಬೇಕು. ಮುಳ್ಳಿನ ಮೇಲೆ ಬಟ್ಟೆ ಬಿದ್ದರೂ, ಬಟ್ಟೆಯ ಮೇಲೆ ಮುಳ್ಳು ಬಿದ್ದರೂ ಹರಿಯುವುದು ಬಟ್ಟೆಯೇ ಎಂಬುದು ನೆನಪಿರಲಿ ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.

ವಿಧಾತ್ರಿ ಅಕಾಡೆಮಿಯ ಸಹಸಂಸ್ಥಾಪಕರಾದ ಗುರುರಾಜ ಶೆಟ್ಟಿ, ಪ್ರಾಂಶುಪಾಲರಾದ ಕಿರಣ ಭಟ್ಟ, ಉಪ ಪ್ರಾಂಶುಪಾಲರಾದ ಸುಜಾತಾ ಹೆಗಡೆ ವೇದಿಕೆಯಲ್ಲಿದ್ದರು. ಚಿದಾನಂದ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು. ಲತಾ ಮೇಸ್ತ ಸ್ವಾಗತಿಸಿದರು, ದೀಕ್ಷಿತಾ ಕುಮಟಾಕರ್ ವಂದಿಸಿದರು, ಪೊಲೀಸ್ ಇಲಾಖೆಯ ರಮ್ಯಾ ನಾಯ್ಕ ಸಹಕರಿಸಿದರು.