ಕುಮಟಾ: ಮೂರೂರು ಪ್ರಗತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಶಾಲಾ ಸಂಸತ್ತಿನ ರಚನೆಗಾಗಿ ಶನಿವಾರ ವಿದ್ಯಾರ್ಥಿಗಳಿಗೆ ಮತದಾನ ನಡೆಯಿತು. ಸಾರ್ವತ್ರಿಕ ಚುನಾವಣೆಯ ರೀತಿಯಲ್ಲಿಯೇ ವಿದ್ಯಾರ್ಥಿಗಳಿಗೆ ಮತದಾನಕ್ಕೆ ಅವಕಾಶ ಕಲ್ಪಿಸಿಕೊಡಲಾಗಿತ್ತು. ಶಾಲಾ ಮುಖ್ಯ ಕಾರ್ಯದರ್ಶಿ, ಸಾಂಸ್ಕೃತಿಕ ಕಾರ್ಯದರ್ಶಿ, ಶಾಲಾ ಶಿಸ್ತು ಮತ್ತು ನೈರ್ಮಲ್ಯ ಕಾರ್ಯದರ್ಶಿ, ಹಾಗೂ ಕ್ರೀಡಾ ಕಾರ್ಯದರ್ಶಿ ಸ್ಥಾನಕ್ಕಾಗಿ ಅತ್ಯಂತ ವ್ಯವಸ್ಥಿತವಾಗಿ ಹಾಗೂ ಪಾರದರ್ಶಕವಾಗಿ ಚುನಾವಣೆ ನಡೆಯಿತು.
ವಿದ್ಯಾರ್ಥಿಗಳಿಗೆ ಚುನಾವಣೆಯ ಪ್ರಯುಕ್ತ ಮುಂಚಿತವಾಗಿಯೇ ನಾಮಪತ್ರ ಸಲ್ಲಿಸುವ, ನಾಮಪತ್ರ ಹಿಂಪಡೆಯುವ ಅವಕಾಶ ನೀಡಲಾಗಿತ್ತು. ನಾಮಪತ್ರ ಪರಿಶೀಲನೆಯ ನಂತರ ಅವರಿಗೆ ಚಿಹ್ನೆಗಳನ್ನು ನೀಡಿ, ಪ್ರಚಾರಕ್ಕೆ ಅವಕಾಶ ನೀಡಲಾಗಿತ್ತು.

RELATED ARTICLES  ಕುಮಟಾ: ದೈವಜ್ಞ ದರ್ಶನ ಹಾಗೂ ಗಾಯತ್ರಿ ಹವನ ಕಾರ್ಯಕ್ರಮ ಯಶಸ್ವಿ

ಮತದಾನದ ದಿನದಂದು ವಿದ್ಯಾರ್ಥಿಗಳು ತಮ್ಮ ಭಾವಚಿತ್ರ ಇರುವ ಗುರುತಿನ ಪತ್ರ ತೋರಿಸಿ ಚಿಹ್ನೆ ಹೊಂದಿರುವ ಮತಪತ್ರದಲ್ಲಿ ತಮ್ಮ ನೆಚ್ಚಿನ ಸಹಪಾಠಿ ಅಭ್ಯರ್ಥಿಗಳಿಗೆ ಮತ ಚಲಾಯಿಸುವ ಮೂಲಕ ತಮ್ಮ ಹಕ್ಕನ್ನು ಪಡೆದು ಮತದಾನದಲ್ಲಿ ಪಾಲ್ಗೊಂಡರು. ಶಿಕ್ಷಕರು ಅವರಿಗೆ ಚಿಹ್ನೆಗಳಿರುವ ಮತಪತ್ರ, ಬೆರಳು ಗುರುತು ನೀಡುವುದರ ಮೂಲಕ ಸಾರ್ವತ್ರಿಕ ಚುನಾವಣೆಯ ಕಲ್ಪನೆ ಮೂಡಿಸಿದರು.
ವಿದ್ಯಾರ್ಥಿಗಳು ಈ ಚುನಾವಣೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಮುಖ್ಯಾಧ್ಯಾಪಕರಾದ ವಿವೇಕ ಆಚಾರಿ ಚುನಾವಣಾ ವೀಕ್ಷಕರಾಗಿ ಆಗಮಿಸಿ ವ್ಯವಸ್ಥೆಯನ್ನು ಪರಿಶೀಲಿಸಿದರು.

RELATED ARTICLES  ಶಾಸಕ ಶಿವರಾಮ ಹೆಬ್ಬಾರ ಅವರ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ಖಂಡನೀಯ!

ಶಾಲಾ ಸಾಕ್ಷರತಾ ಕ್ಲಬ್ ಈ ಚುನಾವಣೆಯನ್ನು ಅತ್ಯಂತ ವ್ಯವಸ್ಥಿತವಾಗಿ ನಡೆಸಿತು. ಶಾಲಾ ಸಾಕ್ಷರತಾ ಕ್ಲಬ್‌ನ ಸಂಚಾಲಕ ಶಿಕ್ಷಕ ಮನೋಹರ ಹರಿಕಂತ್ರ ಅವರ ನೇತೃತ್ವದಲ್ಲಿ ಶಿಕ್ಷಕರಾದ ಲೊಕೇಶ ಹೆಗಡೆ, ಅರುಣ ನಾಯ್ಕ, ಶ್ರೀಕಾಂತ್ ನಾಯ್ಕ, ಶಿಕ್ಷಕಿಯರಾದ ತೃಪ್ತಿ ಗುನಗಾ, ನಯನಾ ನಾಯ್ಕ, ಮಮತಾ ಕೆ ಎಸ್, ಜಯಶ್ರೀ ಭಟ್ಟ, ಭಾವನಾ ಹೆಗಡೆ ಸಹಕರಿಸಿ ವಿದ್ಯಾರ್ಥಿಗಳಿಗೆ ಸಾರ್ವತ್ರಿಕ ಚುನಾವಣೆಯ ಕಲ್ಪನೆ ಹಾಗೂ ಜಾಗೃತಿ ಮೂಡಿಸಿದರು. ಶಾಲಾ ಸ್ಕೌಟ್ಸ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಈ ಚುನಾವಣೆ ವ್ಯವಸ್ಥಿತವಾಗಿ ನಡೆಯಲು ಶ್ರಮಿಸಿದರು.