ಕುಮಟಾ : ಲಯನ್ಸ್ ರೇವಣಕರ ಚೆರಿಟೇಬಲ್ ಕಣ್ಣಿನ ಆಸ್ಪತ್ರೆಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುವ ಜೊತೆಗೆ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಾರ್ಥಕ ಜೀವನ ಸಾಗಿಸಿದ ಪ್ರೊ. ವಿ.ಎಮ್ ಸಿದ್ದೇಶ್ವರ ನಿಧನರಾದ ಹಿನ್ನೆಲೆಯಲ್ಲಿ ತಾಲೂಕಿನ ವಿದ್ಯಾಗಿರಿಯ ಲಯನ್ಸ್ ಕಣ್ಣಿನ ಆಸ್ಪತ್ರೆಯಲ್ಲಿ ಶೃದ್ಧಾಂಜಲಿ ಸಭೆ ಹಮ್ಮಿಕೊಳ್ಳಲಾಗಿತ್ತು.

ಮೃತರ ಭಾವಚಿತ್ರಕ್ಕೆ ದೀಪ ಬೆಳಗಿಸಿ, ನುಡಿ ನಮನ ಸಲ್ಲಿಸಿದ ಲಯನ್ಸ್ ಹ್ಯುಮನಿಟೇರಿಯನ್ ಸರ್ವಿಸ್ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷ ಡಾ. ಸಿ.ಎಸ್.ವೇರ್ಣೇಕರ್, ಶಿಸ್ತು ಹಾಗೂ ಸಂಯಮದ ಪರಿಪೂರ್ಣ ವ್ಯಕ್ತಿತ್ವ ಪ್ರೊ. ವಿ.ಎಮ್.ಸಿದ್ದೇಶ್ವರ ಅವರದ್ದಾಗಿತ್ತು. ಸದಾ ಸಮಾಜದ ಹಿತ ಚಿಂತಕರಾಗಿದ್ದ ಅವರು ನಮ್ಮ ಲಯನ್ಸ ರೇವಣಕರ ಚೆರಿಟೇಬಲ್ ಕಣ್ಣಿನ ಆಸ್ಪತ್ರೆಯ ‘ಟ್ರಸ್ಟಿ’ ಯಾಗಿ ಸಂಸ್ಥೆಯ ಆರಂಭಿಕ ಹಂತದಲ್ಲಿ ನನ್ನ ಅಧ್ಯಕ್ಷೀಯ ಅವಧಿಯಲ್ಲಿ ನನ್ನೊಂದಿಗೆ ಸಮರ್ಥ ‘ಕಾರ್ಯದರ್ಶಿ’ಯಾಗಿ ಸಂಸ್ಥೆಗೆ ಸಲ್ಲಿಸಿದ ಅವರ ಸೇವೆ ಅನನ್ಯವಾದದ್ದು ಎಂದರು. ಜೊತೆಗೆ ಅವರೊಂದಿಗಿನ ಸ್ನೇಹಮಯ ಒಡನಾಟ ಎಂದೂ ಮರೆಯಲಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

RELATED ARTICLES  ಶ್ರೀ ನಂಜುಂಡ ಸ್ವಾಮಿಗಳಿಗೆ ಗೋಕರ್ಣ ಗೌರವ.

ಸಂಸ್ಥೆಯ ಟ್ರಸ್ಟಿ ಹಾಗೂ ಚೇರಮನ್ ಮದನ ನಾಯಕ ಅವರು ಮಾತನಾಡಿ, ತಾನು ಕುಮಟಾ ಕಾಲೇಜ್ ವಿದ್ಯಾರ್ಥಿಯಾಗಿದ್ದಾಗ ತನ್ನ ಗುರುವಾಗಿದ್ದ ಪ್ರೊ. ಸಿದ್ದೇಶ್ವರರವರ ಕಾರ್ಯತತ್ಪರತೆಯ ಕುರಿತು ಸ್ಮರಿಸುತ್ತಾ, ನಂತರದ ಕೆಲ ವರ್ಷಗಳ ಕಾಲ ಕಾಲೇಜನಲ್ಲಿ ಅವರ ಸಹೋದ್ಯೋಗಿಯಾಗಿಯೂ ಸೇವೆ ಸಲ್ಲಿಸಿದ ಸಂದರ್ಭವನ್ನು ಸ್ಮರಿಸಿಕೊಂಡರು. ಅವರ ನಿಸ್ಪ್ರಹ ಸೇವೆಗಾಗಿ ಲಯನ್ಸ್ ಕಣ್ಣಿನ ಆಸ್ಪತ್ರೆಯ ಟ್ರಸ್ಟ್ ಪರವಾಗಿ ನುಡಿನಮನ ಸಲ್ಲಿಸಿ ಆತ್ಮಕ್ಕೆ ಸದ್ಗತಿ ಕೋರಿ ಕುಟುಂಬದವರಿಗೆ ಸಾಂತ್ವಾನ ತಿಳಿಸಿದರು.

RELATED ARTICLES  ಹೊನ್ನಾವರದಲ್ಲಿ ಬೆಂಕಿ ಅವಘಡ : ಲಕ್ಷಾಂತರ ರೂಪಾಯಿ ಹಾನಿ.

ಟ್ರಸ್ಟ್ ಸೆಕ್ರೆಟರಿ ಡಾ. ಸುರೇಶ ಜಿ.ಹೆಗಡೆ ಹಾಗೂ ಟ್ರಸ್ಟಿ ಡಾ. ಸತೀಶ ವಿ.ಪ್ರಭು ಮಾತನಾಡಿ ಪ್ರೊ. ಸಿದ್ದೇಶ್ವರ ಅವರ ಗುಣಗಾನ ಮಾಡಿ ಅವರ ಆದರ್ಶಗಳನ್ನು ಪಾಲಿಸುವುದೇ ಅವರಿಗೆ ಸಲ್ಲಿಸುವ ನಿಜವಾದ ಶೃದ್ಧಾಂಜಲಿ ಎಂದರು.

ನೇತ್ರತಜ್ಞೆ ಡಾ.ರೇಣುಕಾ ಬರ್ಕಿ, ಆಡಳಿತಾಧಿಕಾರಿ ಜಯದೇವ ಬಳಗಂಡಿ, ರಾಜೇಶ ರೇವಣಕರ ಹಾಗೂ ಆಸ್ಪತ್ರೆಯ ಎಲ್ಲಾ ಸಿಬ್ಬಂದಿಗಳು ಪಾಲ್ಗೊಂಡು ಪುಷ್ಪನಮನ ಸಲ್ಲಿಸಿದರು. ಸಭೆಯಲ್ಲಿ ಒಂದು ನಿಮಿಷ ಮೌನಾಚರಣೆಗೈದು ಅಗಲಿದ ಮಹಾನ್ ಚೇತನಕ್ಕೆ ಗೌರವ ನಮನ ಸಲ್ಲಿಸಲಾಯಿತು.

ಕುಮಟಾ ಎ.ವಿ.ಬಾಳಿಗಾ ಮಹಾವಿದ್ಯಾಲಯದಲ್ಲಿ ಇತಿಹಾಸ ಪ್ರಾಧ್ಯಾಪಕರಾಗಿ ಸುದೀರ್ಘ ಸೇವೆ ಸಲ್ಲಿಸಿದ್ದ ಪ್ರೊ.ವಿ.ಎಮ್.ಸಿದ್ದೇಶ್ವರರವರು ನಿವೃತ್ತಿ ನಂತರ ಇತ್ತೀಚಿನ ಕೆಲ ವರ್ಷಗಳಿಂದ ಬೆಂಗಳೂರಿನಲ್ಲಿ ಕುಟುಂಬದವರೊಂದಿಗೆ ನೆಲೆಸಿದ್ದರು. ವಯೋಸಹಜವಾಗಿ ಇವರು ಕಳೆದ ಸೋಮವಾರ ನಿಧನರಾಗಿದ್ದಾರೆ.