ಗೋಕರ್ಣ: ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿಯವರ ಚಾತುರ್ಮಾಸ್ಯ ವ್ರತ, ಸನಾತನ ಭಾರತೀಯ ಸಂಸ್ಕøತಿಯ ಸಂವರ್ಧನೆ ಸಂಕಲ್ಪದಿಂದ ಸಂಸ್ಥಾಪಿಸಲ್ಪಟ್ಟ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸುಂದರ ಪರಿಸರದಲ್ಲಿ ಜುಲೈ 3ರಂದು ವ್ಯಾಸಪೂಜೆಯೊಂದಿಗೆ ಆರಂಭಗೊಂಡು ಸೆಪ್ಟೆಂಬರ್ 29ಕ್ಕೆ ಸೀಮೋಲ್ಲಂಘನೆಯೊಂದಿಗೆ ಸಂಪನ್ನಗೊಳ್ಳಲಿದೆ.
ಈ ಬಾರಿ ಅಧಿಕ ಶ್ರಾವಣ ಮಾಸ ಇರುವ ಹಿನ್ನೆಲೆಯಲ್ಲಿ ಆಷಾಢ ಹುಣ್ಣಿಮೆಯಿಂದ ಆರಂಭವಾಗುವ ವ್ರತ ಭಾದ್ರಪದ ಹುಣ್ಣಿಮೆಯವರೆಗೆ ಮೂರು ತಿಂಗಳ ಕಾಲ ನಡೆಯಲಿದೆ. ಶಿಷ್ಯಕೋಟಿಯ ಸಂಘಟನೆಯ ಮಹದೋದ್ದೇಶದಿಂದ ಈ ಬಾರಿಯ ಚಾತುರ್ಮಾಸ್ಯಕ್ಕೆ ಸಂಘಟನಾ ಚಾತುರ್ಮಾಸ್ಯವೆಂದು ಅಭಿದಾನ ನೀಡಲಾಗಿದೆ ಎಂದು ಚಾತುರ್ಮಾಸ್ಯ ಸಮಿತಿ ಗೌರವಾಧ್ಯಕ್ಷ ಡಿ.ಡಿ.ಶರ್ಮಾ ಮತ್ತು ಅಧ್ಯಕ್ಷ ಯು.ಎಸ್.ಗಣಪತಿ ಭಟ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜುಲೈ 6ರಂದು ಶ್ರೀವರ್ಧಂತಿ, ಸೆಪ್ಟೆಂಬರ್ 6ರಂದು ಶ್ರೀಕೃಷ್ಣ ಜನ್ಮಾಷ್ಟಮಿ, ಸೆಪ್ಟೆಂಬರ್ 18ರಂದು ಗಣೇಶ ಚತುರ್ಥಿಯಂಥ ವಿಶೇಷ ಕಾರ್ಯಕ್ರಮಗಳ ಜತೆಗೆ ವೈದಿಕ ಸಮಾವೇಶ, ಗುರಿಕಾರರ ಸಮಾವೇಶ, ಯುವ ಸಮಾವೇಶ, ಮಾತೃಸಮಾವೇಶ, ಕಾರ್ಯಕರ್ತರ ಸಮಾವೇಶ ಈ ಅವಧಿಯಲ್ಲಿ ಆಯೋಜಿತವಾಗಿವೆ. ವೈಯಕ್ತಿಕ ಹಾಗೂ ಕೌಟುಂಬಿಕ ಶ್ರೇಯೋಭಿವೃದ್ಧಿಗಾಗಿ ಯಾಗಮಾಲಿಕೆಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಸಾಂಸ್ಕøತಿಕ ಕಾರ್ಯಕ್ರಮಗಳು, ಭಜನೆ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕ ಸನ್ಮಾನ ನೆರವೇರಲಿದೆ.
ಚಾತುರ್ಮಾಸ್ಯದ ಅವಧಿಯಲ್ಲಿ ಶ್ರೀಕರಾರ್ಚಿತ ದೇವರಿಗೆ ಸರ್ವಸೇವೆ ಸಮರ್ಪಣೆಗೆ ಅವಕಾಶ ಇದೆ. ಅಂತೆಯೇ ಸ್ವರ್ಣಪಾದುಕಾ ಪೂಜೆ, ಪಾದುಕಾಪೂಜೆ, ಅನ್ನದಾನ, ಸುವಸ್ತು ಸಮರ್ಪಣೆ, ಅಭೀಷ್ಟ ಹವನ ಮತ್ತಿತರ ಸೇವೆಗಳನ್ನೂ ಸಲ್ಲಿಸಲು ಅವಕಾಶವಿದೆ.
ಚಾತುರ್ಮಾಸ್ಯಕ್ಕೆ ಪೂರ್ವಭಾವಿಯಾಗಿ ರಾಜ್ಯದ ಮೂಲೆಮೂಲೆಗಳಿಂದ ಶಿಷ್ಯಭಕ್ತರು ಸಮರ್ಪಿಸಿದ ಸುವಸ್ತುಗಳಿಗೆ ಧಾನ್ಯಲಕ್ಷ್ಮಿಪೂಜೆಯನ್ನು ರಾಘವೇಶ್ವರ ಶ್ರೀಗಳು ಜುಲೈ 1ರಂದು ನೆರವೇರಿಸುವರು. 2ರಂದು ಮಧ್ಯಾಹ್ನ 12.00 ಗಂಟೆಗೆ ಅನ್ನಪೂರ್ಣೇಶ್ವರಿ ಪೂಜೆಯೊಂದಿಗೆ ಚಾತುರ್ಮಾಸ್ಯ ಪರ್ಯಂತ ಲಕ್ಷಾಂತರ ಶಿಷ್ಯಭಕ್ತರಿಗೆ ಅನ್ನದಾನ ಆರಂಭವಾಗಲಿದೆ.
ಚಾತುರ್ಮಾಸ್ಯ ವ್ರತಾರಂಭದಂದು ಬೆಳಿಗ್ಗೆ ವ್ಯಾಸಪೂಜೆ ನಡೆಯಲಿದ್ದು, ಮಧ್ಯಾಹ್ನ ನಡೆಯುವ ಧರ್ಮಸಭೆಯಲ್ಲಿ ಶ್ರೀಗಳು ಚಾತುರ್ಮಾಸ್ಯ ಸಂದೇಶ ಕರುಣಿಸುವರು. ಬಿ.ಎಲ್.ನಾಗರಾಜ್ ರಚಿಸಿರುವ ಶ್ರೀಮದಾತ್ಮಲಿಂಗ ವೈಭವಂ ಕೃತಿಯ ಲೋಕಾರ್ಪಣೆ ನಡೆಯಲಿದೆ.
ಮೂರು ತಿಂಗಳ ಅವಧಿಯ ಚಾತುರ್ಮಾಸ್ಯದಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿ ಗಣ್ಯರು, ಶಿಷ್ಯಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಅಗತ್ಯ ಸಿದ್ಧತೆಗಳು ಈಗಾಗಲೇ ಪೂರ್ಣಗೊಂಡಿವೆ. ಸಂಘಟನೆ, ಸಮರ್ಪಣೆ ಹಾಗೂ ಸಮಾಧಾನ ಎಂಬ ಮೂರು ಪ್ರಧಾನ ಅಂಶಗಳ ಮೇಲೆ ಈ ಬಾರಿಯ ಚಾತುರ್ಮಾಸ್ಯ ಕೇಂದ್ರಿತವಾಗಿದ್ದು, ಈ ನಿಟ್ಟಿನಲ್ಲಿ ಸಂಘಟನಾ ಚಾತುರ್ಮಾಸ್ಯ ಸಮಿತಿ ಹಾಗೂ ಹವ್ಯಕ ಮಹಾಮಂಡಲ ಈಗಾಗಲೇ ಕಾರ್ಯಪ್ರವೃತ್ತವಾಗಿವೆ.
ಚಾತುರ್ಮಾಸ್ಯದ ಪುಣ್ಯಸಂದರ್ಭದಲ್ಲಿ ಶಿಷ್ಯಭಕ್ತರ ದೇಣಿಗೆಯಿಂದ ರಾಘವೇಶ್ವರ ಶ್ರೀಗಳ ಮಹತ್ಸಂಕಲ್ಪವಾದ ಶ್ರೀವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕೆ ನಿಧಿ ಸಮರ್ಪಣೆ, ಶ್ರೀಸಂಸ್ಥಾನದವರು ಶಿಷ್ಯಭಕ್ತರನ್ನು ಅನುಗ್ರಹಿಸುವುದಕ್ಕಾಗಿಯೇ ವಿಶೇಷವಾಗಿ ನಿರ್ಮಾಣಗೊಳ್ಳುತ್ತಿರುವ ಗುರುದೃಷ್ಟಿ ಸಭಾಭವನ ಸಮರ್ಪಣೆಯೂ ನೆರವೇರಲಿದೆ. ಚಾತುರ್ಮಾಸ್ಯ ಸಂದರ್ಭದಲ್ಲಿ ಏಕಾದಶಿ ಹೊರತುಪಡಿಸಿ ಎಲ್ಲ ಶನಿವಾರ ಮತ್ತು ಭಾನುವಾರಗಳಂದು ಸಾರ್ವಜನಿಕ ಮಂತ್ರಾಕ್ಷತೆ ಇರುತ್ತದೆ ಎಂದು ವಿವರಿಸಿದರು.
ವಿವಿವಿ ಆಡಳಿತಾಧಿಕಾರಿ ಪ್ರಸನ್ನ ಕುಮಾರ್ ಟಿ.ಜಿ, ಚಾತುರ್ಮಾಸ್ಯ ಸಮಿತಿ ಕಾರ್ಯದರ್ಶಿ ಶ್ರೀಕಾಂತ್ ಪಂಡಿತ್, ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಮಾಧ್ಯಮ ವಿಭಾಗದ ಶ್ರೀಸಂಯೋಜಕ ಉದಯಶಂಕರ ಭಟ್ ಮಿತ್ತೂರು, ಕಾರ್ಯಾಲಯ ಕಾರ್ಯದರ್ಶಿ ಜಿ.ವಿ.ಹೆಗಡೆ ಉಪಸ್ಥಿತರಿದ್ದರು.