ಕುಮಟಾ : ಬಣ್ಣದ ಬಟ್ಟೆ ಧರಿಸಿ ಮಳೆಯಲ್ಲಿ ಛತ್ರಿ ಹಿಡಿದು ಕುಣಿಯುತ್ತಿರುವ ಮಕ್ಕಳು ಒಂದೆಡೆ, ಹರಿಯುವ ನೀರಿನಲ್ಲಿ ಕಾಗದದ ದೋಣಿ ತಯಾರಿಸಿ ದೋಣಿ ಬಿಟ್ಟು ಸಂತಸ ಪಡುತ್ತಿರುವ ಮಕ್ಕಳು ಇನ್ನೊಂದೆಡೆ. ಇದೆಲ್ಲಾ ಕಂಡುಬAದಿದ್ದು “ರೇನಿ ಡೇ” ಯಲ್ಲಿ. ತಾಲೂಕಿನ ಕೊಂಕಣಿ ಎಜುಕೇಶನ್ ಸರಸ್ವತಿ ವಿದ್ಯಾ ಕೇಂದ್ರದ ಪುಟಾಣಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ “ರೇನಿ ಡೇ” ಎಲ್ಲರ ಮೆಚ್ಚುಗೆ ಪಾತ್ರವಾಯಿತು. ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ಸಂತಸ ಪಟ್ಟು ಮಳೆಯಲ್ಲಿ ಕುಣಿದು, ನಲಿದು ಕಾಗದ ದೋಣಿ ಮಾಡಿ ನೀರಿನಲ್ಲಿ ಬಿಟ್ಟು ಸಂಭ್ರಮಿಸುವ ಕ್ಷಣಗಳಿಗೆ ಈ ಕಾರ್ಯಕ್ರಮ ಸಾಕ್ಷಿಯಾಗಿತ್ತು.
ಪರಿಸರದ ನೈಸರ್ಗಿಕ ವ್ಯವಸ್ಥೆಯ ಬಗ್ಗೆ ತಿಳಿಸುವ, ಮಾನವನ ಬದುಕಿಗೆ ಅಗತ್ಯವಾದ ಜಲಚಕ್ರದ ಮೂಲಭೂತ ಕಲ್ಪನೆಯ ಬಗ್ಗೆ ತಿಳಿಸಿಕೊಡುವ ವಿನೂತನ ಪ್ರಯೋಗವಾಗಿ ಈ ಕಾರ್ಯಕ್ರಮವನ್ನು ಸಂಸ್ಥೆಯವರು ರೂಪಿಸಿದ್ದರು. ನೀರಿನ ಮೂಲಗಳು, ನೀರು ಆವಿಯಾಗಿ ಘನೀಕರಿಸಿ ಮೋಡವಾಗುವ ವ್ಯವಸ್ಥೆ. ತಂಪು ತಗುಲಿದಾಗ ಮೋಡವು ಮಳೆಯಾಗಿ ಸುರಿದು ಮತ್ತೆ ನೀರಾಗಿ ಭೂಮಿಯನ್ನು ತಲುಪುವುದು. ಈ ಎಲ್ಲ ವಿಚಾರಗಳ ಬಗ್ಗೆ ಶಿಕ್ಷಕ ಗಣೇಶ ಜೋಶಿ ವಿವರಣೆ ನೀಡಿ ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು. ಪ್ರೊಜೆಕ್ಟರ್ ಮೂಲಕ ಚಿತ್ರವನ್ನು ವೀಕ್ಷಿಸಿದ ವಿದ್ಯಾರ್ಥಿಗಳು ತಾವು ಕಲಿತ ವಿಚಾರವನ್ನು ವೇದಿಕೆಗೆ ಬಂದು ತಮ್ಮದೇ ಶೈಲಿಯಲ್ಲಿ ಅಭಿವ್ಯಕ್ತ ಪಡಿಸಿದರು.
ವಿದ್ಯಾರ್ಥಿಗಳು ಕಾಗದ ದೋಣಿಯನ್ನು ತಯಾರಿಸಿ ತಂದಿದ್ದು, ಶಾಲೆ ಎದುರಿಗೆ ಹರಿಯುವ ನೀರಿನಲ್ಲಿ ಅವುಗಳನ್ನು ಬಿಟ್ಟು ಕೇಕೆ ಹಾಕಿ ಸಂಭ್ರಮಿಸಿದರು. ನಂತರ ವಿದ್ಯಾರ್ಥಿಗಳಿಗಾಗಿ ಮಳೆಯಲ್ಲಿ ರೈನ್ ಡ್ಯಾನ್ಸ್ ಸಂಯೋಜಿಸಲಾಗಿತ್ತು. ಹಾಡಿನ ತಾಳಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳು ಮಳೆಯಲ್ಲಿ ಛತ್ರಿ ಹಿಡಿದು ಹೆಜ್ಜೆ ಹಾಕಿದರು. ೧ನೇ ತರಗತಿಯ ವಿದ್ಯಾರ್ಥಿಗಳು ನೃತ್ಯ ಮಾಡುತ್ತಿದ್ದರೆ ಉಳಿದ ವಿದ್ಯಾರ್ಥಿಗಳು ಅದನ್ನು ಕಂಡು ಸಂಭ್ರಮಿಸಿದರು.
ನಂತರದಲ್ಲಿ ವಿದ್ಯಾರ್ಥಿಗಳು ತಮ್ಮ ಅನಿಸಿಕೆ ಹಂಚಿಕೊಂಡು, ನಮಗೆ ಮನೆಯಲ್ಲಿಯೂ ಮನೆಯಲ್ಲಿ ಆಟವಾಡುವ ಅವಕಾಶ ಸಿಗುತ್ತಿಲ್ಲ. ಶಾಲೆಯಲ್ಲಿ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿದ್ದು ತುಂಬಾ ಸಂತಸವೆನಿಸಿದೆ ಎನ್ನುತ್ತಾ, ಚಟುವಟಿಕೆಯನ್ನು ಸಂಯೋಜಿಸಿದ ಎಲ್ಲಾ ಶಿಕ್ಷಕರಿಗೆ ಹಾಗೂ ವರ್ಗ ಶಿಕ್ಷಕರಿಗೆ ಧನ್ಯವಾದ ಸಮರ್ಪಿಸಿದರು.