ಶಿರಸಿ: ತಾಲೂಕಿನ ಹೆಗಡೆಕಟ್ಟಾದಲ್ಲಿ ನಡೆದ ಗೋ ಹತ್ಯೆ ಖಂಡಿಸಿ, ಕೃತ್ಯಕ್ಕೆ ಕಾರಣರಾದ ದುಷ್ಕರ್ಮಿಗಳನ್ನು ಬಂಧಿಸುವಂತೆ ಆಗ್ರಹಿಸಿ ಹಿಂದೂ ಸಂಘಟನೆಯ ವತಿಯಿಂದ ಪ್ರತಿಭಟಿಸಿ ಉಪವಿಭಾಗಾಧಿಕಾರಿ ಮೂಲಕ ಸರಕಾರಕ್ಕೆ ಸಲ್ಲಿಸಲಾಯಿತು. ಗೋಹತ್ಯೆ ಖಂಡಿಸಿ ಹಿಂದೂ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು. ಈ ಸಂದರ್ಭದಲ್ಲಿ ಮಾತನಾಡಿದ ನಂದನ ಸಾಗರ, ಹೆಗಡೆಕಟ್ಟಾ ಸಮೀಪದ ಗೋವನ್ನು ಕಡಿದು ಅದರ ರುಂಡವನ್ನು ಸಾರ್ವಜನಿಕವಾಗಿ ರಸ್ತೆಯಲ್ಲಿ ಎಸೆದು ವಿಕೃತಿ ಮೆರೆದಿರುವುದು ಖಂಡನೀಯ. ಗೋವುಗಳು ಸಮಸ್ತ ಹಿಂದೂಗಳಿಗೆ ಪೂಜನೀಯವಾಗಿದೆ. ದುಷ್ಕರ್ಮಿಗಳು, ಸಮಾಜಘಾತುಕರು ಹಿಂದೂಗಳ ಪವಿತ್ರ ದೇವತೆ ಗೋವನ್ನು ವಧಿಸುವ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಹುನ್ನಾರ ನಡೆಸಿದ್ದಾರೆ. ಅಂತಹ ವ್ಯಕ್ತಿಗಳನ್ನು ಕೂಡಲೇ ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ವಿಧಾನಸಭಾ ಚುನಾವಣಾ ಫಲಿತಾಂಶದ ವಿಜಯೋತ್ಸವದಲ್ಲಿ ಜಗನ್ಮಾತೆ ಮಾರಿಕಾಂಬಾ ದೇವಾಲಯದ ಎದುರಿಗೆ ಹಸಿರು ಬಾವುಟ ಹಾರಿದ ನಂತರ ಇಂತಹ ಘಟನೆಗಳು ಹೆಚ್ಚುತ್ತಿವೆ. ಈ ಘಟನೆಯನ್ನು ಇಲ್ಲಿಗೆ ಬಿಡುವ ಪ್ರಶ್ನೆಯೇ ಇಲ್ಲ. ಹಿಂದೂಗಳನ್ನು ಹೆದರಿಸುವ ಶಕ್ತಿಗೆ ಖಂಡಿತ ಅವಕಾಶ ನೀಡುವುದಿಲ್ಲ. ಹೆಗಡೆಕಟ್ಟಾ ಘಟನೆ ನಡೆದು 8 ದಿನ ಕಳೆದರೂ ಅಪರಾಧಿಗಳನ್ನು ಬಂಧಿಸಲು ಪೊಲೀಸ್ ಇಲಾಖೆ ಮೀನಾಮೇಷ ಮಾಡುತ್ತಿದೆ. ಅಪರಾಧಿಗಳಿಗೆ ಶಿಕ್ಷೆಯಾಗದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.ಕಳೆದ ಒಂದುವರೆ ತಿಂಗಳ ನಂತರ ಬೆಳಿಗ್ಗಿನ ಜಾವ ಮಸೀದಿಗಳಲ್ಲಿ ಮೈಕ್ ಶಬ್ದ ಹೆಚ್ಚುತ್ತಿದೆ. ಇದರ ಬಗ್ಗೆ ಪೊಲೀಸ್ ಇಲಾಖೆ ತನಿಖೆ ನಡೆಸಿ, ಕ್ರಮ ವಹಿಸಬೇಕೆಂದು ಒತ್ತಾಯಿಸಿದರು.
ಸಹಾಯ ಆಯುಕ್ತರ ಅನುಪಸ್ಥಿತಿಯಲ್ಲಿ ತಹಸೀಲ್ದಾರ್ ಶ್ರೀಧರ ಮಂದಲಮನಿ ಮನವಿ ಸ್ವೀಕರಿಸಿ, ಮಾತನಾಡಿ, ಈಗಾಗಲೇ ತನಿಖೆ ನಡೆಸಲು ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ. ಸಹಾಯಕ ಆಯುಕ್ತರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಕಳುಹಿಸಲಾಗುವುದು ಎಂದರು.
ವಿಶ್ವ ಹಿಂದೂ ಪರಿಷತ್ ಪ್ರಮುಖ ಕೇಶವ ಮರಾಠೆ, ನಗರಸಭೆ ಮಾಜಿ ಉಪಾಧ್ಯಕ್ಷೆ ವೀಣಾ ಶೆಟ್ಟಿ, ಪ್ರಮುಖರಾದ ಹರೀಶ ಕರ್ಕಿ, ಚಂದ್ರು ಎಸಳೆ, ದೀಪಾ ಮಾಲಿಂಗಣನವರ್, ನಾಗರಾಜ ನಾಯ್ಕ, ಉಷಾ ಹೆಗಡೆ, ಪ್ರಿಯಾ ಸಂತೋಷ, ಪ್ರಸನ್ನ ಭಟ್ಟ, ಆರ್.ಡಿ.ಹೆಗಡೆ ಜಾನ್ಮನೆ, ಗುರುಪ್ರಸಾದ ಹೆಗಡೆ ಹರ್ತೆಬೈಲ್, ರಾಘವೇಂದ್ರ ನಾಯ್ಕ, ನರಸಿಂಹ ಹೆಗಡೆ ಬಕ್ಕಳ, ಅನಂತ ಅಶೀಸರ, ಸದಾನಂದ ಭಟ್ಟ, ರಾಜೇಶ ಶೆಟ್ಟಿ ಸೇರಿದಂತೆ ಮತ್ತಿತರರು ಇದ್ದರು.