ಗೋಕರ್ಣ: ಗುರುವಿನ ಪರಿಪೂರ್ಣತೆಗೆ, ಗುರಿ ಸಾಧನೆಗೆ ಶ್ರೀ ಪರಿವಾರದವರು ಸೋಪಾನ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿ ನುಡಿದರು. ಸಂಘಟನಾ ಚಾತುರ್ಮಾಸ್ಯದ ಎರಡನೇ ದಿನ ಶ್ರೀಪರಿವಾರದಿಂದ ಭಿಕ್ಷಾಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದ ಶ್ರೀಗಳು, “ಇವರು ಗುರುಸೇವೆಗೆ ಸಮರ್ಪಿಸಿಕೊಂಡವರು. ಇವರಿಗೆ ಗುರುಪ್ರಭೆಯ ಬೆಳಕು ಮಾತ್ರವಲ್ಲದೇ ಬಿಸಿಯೂ ತಟ್ಟುತ್ತದೆ. ಬೆಂಕಿಯ ಒಳಗೆಯೇ ಇದ್ದು ಅಗ್ನಿಶುದ್ಧವಾಗಿ, ಪ್ರತಿಫಲಾಪೇಕ್ಷೆ ಇಲ್ಲದೇ ಸೇವೆ ಮಾಡುವವರು. ಪರಿವಾರದಲ್ಲಿ ಸೇವೆ ಸಲ್ಲಿಸುವುದು ಒಂದು ಹೆಗ್ಗಳಿಕೆ. ಅದು ಅಭಿಮಾನಪಡುವಂಥದ್ದು. ಸೇವೆಯಲ್ಲಿ ಎಂಥ ಸುಖ ಇದೆ. ಪರಿವಾರದವರಿಗೆ ಎಂದೂ ನಿವೃತ್ತಿ ಇಲ್ಲ. ಎಂದಿಗೂ ಪರಿವಾರದ ಸದಸ್ಯ. ಪ್ರತಿಫಲ ಅಪೇಕ್ಷೆ ಇಲ್ಲದೇ ಮಾಡುವ ಸೇವೆ. ಮಠ ನಡೆಯಲು ಗುರುಗಳು ಹೇಗೆ ಅನಿವಾರ್ಯವೋ ಹಾಗೆ ಪರಿವಾರ ಕೂಡಾ ಅನಿವಾರ್ಯ. ಸೇವೆಗೆ ಅವರು ದಾರಿಯೇ ವಿನಃ ಗೋಡೆ ಅಲ್ಲ. ಸೇವೆಗೆ ದ್ವಾರವಾಗಿರುವವರನ್ನು ನೋಯಿಸಬಾರದು. ಶ್ರದ್ಧೆ, ನಿಷ್ಠೆಯಿಂದ ರಾಮಸೇವೆ, ಗುರುಸೇವೆ ಮಾಡಿ ಎಂದು ಸಲಹೆ ನೀಡಿದರು.

RELATED ARTICLES  ಬೈಕ್ ನಿಂದ ಬಿದ್ದ ಯುವಕ ಸಾವು.


ಶ್ರೀ ಮಠಕ್ಕೆ ಹಾಗೂ ಸಮಾಜಕ್ಕೆ ಗಣನೀಯವಾಗಿ ಸೇವೆ ಸಲ್ಲಿಸಿದವರಿಗೆ ಶ್ರೀಮಠದಿಂದ ಸಾಧನ ಸನ್ಮಾನ ಪ್ರದಾನ ಮಾಡಲಾಯಿತು. ಶ್ರೀಪರಿವಾರದ ಸುಬ್ರಾಯ ಶಂಕರ ಅಗ್ನಿಹೋತ್ರಿ, ರಮೇಶ ಭಟ್ ವಿಭೂತಿ, ಪಾಕತಜ್ಞ ಕೆ.ವಿ.ಲಕ್ಮೀನಾರಾಯಣ ಸ್ವಾಮಿ, ಅನಂತ ಭಟ್, ಸುಬ್ರಹ್ಮಣ್ಯ ಭಟ್ ಹೆಗ್ಗಾರಹಳ್ಳಿ ಅವರಿಗೆ ಕಲ್ಪವೃಕ್ಷದೊಂದಿಗೆ ಸಾಧನ ಸನ್ಮಾನ ನೆರವೇರಿಸಲಾಯಿತು.


ಇದೇ ಸಂದರ್ಭದಲ್ಲಿ ದಿನೇಶ್ ಶಹ್ರಾ ಅವರ ಸನಾತನ ಜೀವನ ಕೃತಿ ಲೋಕಾರ್ಪಣೆಯನ್ನು ಶ್ರೀಗಳು ನೆರವೇರಿಸಿದರು. ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದಲ್ಲಿ ವಿಶಿಷ್ಟ ಸಾಧನೆ ಮಾಡಿದ 30 ವಿದ್ಯಾರ್ಥಿಗಳಿಗೆ ದಿನೇಶ್ ಶಹರಾ ಫೌಂಡೇಷನ್‍ನಿಂದ ತಲಾ 10 ಸಾವಿರ ರೂಪಾಯಿ ವಿದ್ಯಾರ್ಥಿ ವೇತನ ನೀಡಲಾಯಿತು.


ವಿವಿವಿ ಪರಿಸರವನ್ನು ಹಸಿರು ಕ್ಯಾಂಪಸ್ ಮಾಡುವ ಉದ್ದೇಶದಿಂದ ಸೀತಾವನ, ನಕ್ಷತ್ರ ವನ ನಿರ್ಮಾಣಕ್ಕೆ 5 ಲಕ್ಷ ದೇಣಿಗೆಯನ್ನು ಫೌಂಡೇಷನ್‍ನಿಂದ ನೀಡಲಾಯಿತು. ಪರಂಪರಾ ಗುರುಕುಲದಲ್ಲಿ ತರಕಾರಿ ತೋಟ ನಿರ್ಮಾಣಕ್ಕೂ ಫೌಂಡೇಷನ್ ನೆರವು ನೀಡಲಿದೆ ಎಂದು ದಿನೇಶ್ ಶಹ್ರಾ ಪ್ರಕಟಿಸಿದರು. ಸನಾತನ ಜೀವನಕ್ಕೆ ಮರಳುವುದು ನಮ್ಮೆಲ್ಲರ ಗುರಿಯಾಗಬೇಕು. ಶ್ರೀಗಳ ಮಾರ್ಗದರ್ಶನ ಹಾಗೂ ದೂರದೃಷ್ಟಿಯ ಯೋಜನೆಗಳು ಇದಕ್ಕೆ ಪೂರಕವಾಗಿದೆ ಎಂದು ಶಹ್ರಾ ಅಭಿಪ್ರಾಯಪಟ್ಟರು. ವಿವಿವಿ ಗೋವಿಶ್ವದಲ್ಲಿ ಫೌಂಡೇಷನ್ ವತಿಯಿಂದ ಗೋ ಚಿಕಿತ್ಸಾ ಶಿಬಿರ ನಡೆಯಿತು. ಹವ್ಯಕ ಮಹಾಮಂಡಲ ಅಧ್ಯಕ್ಷ ಮೋಹನ್ ಹೆಗಡೆ, ಗೌರವ ಕಾರ್ಯದರ್ಶಿ ನಾಗರಾಜ ಭಟ್ ಪೆದಮಲೆ, ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಯು.ಎಸ್.ಗಣಪತಿ ಭಟ್, ಶಹ್ರಾ ಫೌಂಡೇಷನ್‍ನ ಮೀರಾ ರಾಜ್ದಾ, ಅಲ್ಕಾ ಪಟೇಲ್, ಅನುಭೂತಿ ಗೋಸ್ವಾಮಿ, ಬಾಹುಬಲಿ ಗಾಯಕಿ ಮಧುಶ್ರೀ, ಡಾ. ಸುಧೀಂದ್ರ ಅಡಿಗ ಉಪ್ಪೂರ್, ಉದ್ಯಮಿ ಗೋಪಾಲ ರೆಡ್ಡಿ, ಯಕ್ಷಗಾನ ಕಲಾವಿದ ಬಳ್ಕೂರು ಕೃಷ್ಣ ಯಾಜಿ ಭಾಗವಹಿಸಿದ್ದರು.

RELATED ARTICLES  ಸಂಪನ್ನವಾಯ್ತು ಕಬಡ್ಡಿ ಪಂದ್ಯಾವಳಿ : ಶಾಸಕ ಮಂಕಾಳ ವೈದ್ಯರಿಗೆ ಸಂದಿತು ಸನ್ಮಾನ