ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕರಾವಳಿಯ ಮಧ್ಯವರ್ತಿ ಸ್ಥಳ ಹಾಗೂ ಸಾಹಿತ್ಯಿಕ ಗಟ್ಟಿ ನೆಲೆಯಾದ ಕುಮಟಾದಲ್ಲಿ ಸಾಹಿತ್ಯ ಭವನ ನಿರ್ಮಾಣಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮುಂದಾಗಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ತಾಲೂಕಾ ಅಧ್ಯಕ್ಷ ಡಾ. ಶ್ರೀಧರ ಗೌಡ ಉಪ್ಪಿನ ಗಣಪತಿ ಪತ್ರಿಕಾ ಪ್ರಕಟಣೆ ಮೂಲಕ ಒತ್ತಾಯಿಸಿದ್ದಾರೆ.
ಕನ್ನಡ ಸಾಹಿತ್ಯಕ್ಕೆ ಮಹತ್ತರ ಕೊಡುಗೆ ನೀಡಿದಂತಹ ಕುಮಟಾ ಗೌರೀಶ್ ಕಾಯ್ಕಿಣಿ, ಯಶವಂತ ಚಿತ್ತಾಲ, ಗಂಗಾಧರ ಚಿತ್ತಾಲ, ಜಿಲ್ಲೆಯ ಮೊದಲ ಮಹಿಳಾ ಸಾಹಿತಿ ದೇವಾಂಗಣ ಶಾಸ್ತ್ರಿ, ಜಯಂತ ಕಾಯ್ಕಿಣಿ, ಸು.ರಂ. ಎಕ್ಕುಂಡಿ, ಎಂ.ಹೆಚ್. ನಾಯ್ಕ ಬಾಡ, ದಯಾನಂದ ತೊರ್ಕೆ, ಚಿಂತಾಮಣಿ ಕೊಡ್ಲಕೆರೆ, ಮಹಾಬಲಮೂರ್ತಿ ಕೊಡ್ಲಕೆರೆ, ರೋಹಿದಾಸ ನಾಯಕ ಮೊದಲಾದ ಹಿರಿಯ ಸಾಹಿತಿಗಳ ನೆಲೆ ಹಾಗೂ ಪ್ರೇರಣೆ ನೀಡಿದ ಸ್ಥಳ. ಸ್ವಾತಂತ್ರ್ಯ ಬಂದು 75 ವರ್ಷಗಳು ಸಂದರೂ ಇಲ್ಲಿ ಕನ್ನಡ ಭಾಷೆ ಸಾಹಿತ್ಯ, ಕಲೆ ಸಂಸ್ಕೃತಿ ಬಿಂಬಿಸಲು ಯಾವುದೇ ಭವನಗಳು ನಿರ್ಮಾಣವಾಗದಿರುವುದು ದುರಂತ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಅದಲ್ಲದೆ ಕಾರವಾರದಲ್ಲಿ ಕನ್ನಡ ಭವನ ಕಟ್ಟಡವಿದ್ದು ಇದು ಕಾರವಾರ ತಾಲ್ಲೂಕು ಸಾಹಿತ್ಯ ಪರಿಷತ್ತಿನ ನಿರ್ವಹಣೆಯಲ್ಲಿದೆ. ಇಲ್ಲಿ ಕನ್ನಡ ಭಾಷೆ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಕಾರ್ಯಕ್ರಮ ನಡೆಸಲು ಅನುಕೂಲವಿದೆ. ಜೊತೆಗೆ ಜಿಲ್ಲಾ ರಂಗಮಂದಿರವಿದ್ದು ಕನ್ನಡ ಸಂಸ್ಕೃತಿ ಕಲೆ ಸಂಪ್ರದಾಯ ಅನಾವರಣಗೊಳಿಸಲು ಅತ್ಯದ್ಭುತವಾದಂತ ಭವನವಿದೆ. ಜೊತೆಗೆ ಗುರುಭವನ, ಪತ್ರಿಕಾ ಭವನಗಳು ಕಾರವಾರದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಆದರೆ ಕುಮಟಾದಂತಹ ಸಾಹಿತ್ಯಿಕ ಗಟ್ಟಿ ನೆಲದಲ್ಲಿ ಕನ್ನಡ ಭಾಷೆ, ಕಲೆ, ಪುಸ್ತಕ ಬಿಡುಗಡೆಯಂತಹ ಕಾರ್ಯಕ್ರಮ ಹಮ್ಮಿಕೊಳ್ಳಲು ಸಾಹಿತಿಗಳು ಖಾಸಗಿ ಕಟ್ಟಡಕ್ಕೆ ಬಾಡಿಗೆ ತೆತ್ತು ಮಾಡಬೇಕಾದಂತ ಅನಿವಾರ್ಯತೆ ಇದೆ. ಅದಲ್ಲದೆ ಪತ್ರಿಕಾಗೋಷ್ಠಿ ನಡೆಸುವುದಿದ್ದರೂ ಖಾಸಗಿ ಕಟ್ಟಡಕ್ಕೆ ಜೋತು ಬೀಳಬೇಕು. ಇದು ಮೂಗಿಗಿಂತ ಮೂಗುತಿಯೇ ಭಾರ ಎಂಬಂತಾಗಿದೆ. ಇದನ್ನು ಮನಗಂಡು ಕುಮಟಾದಲ್ಲಿ ಸಾಹಿತ್ಯ ಭವನ ಇಲ್ಲವೇ ಕನ್ನಡ ಭವನ ನಿರ್ಮಿಸಬೇಕೆಂದು ತಾನು ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಸಾಹಿತ್ಯ ಪರಿಷತ್ತಿಗೆ ಮತ್ತು ಅಂದಿನ ಶಾಸಕರಾಗಿದ್ದ ಶಾರದಾ ಶೆಟ್ಟಿ, ನಂತರದಲ್ಲಿ ಶಾಸಕರಾದ ದಿನಕರ ಶೆಟ್ಟಿ ಅವರಿಗೆ ಹಾಗೂ ಉಪವಿಭಾಗಾಧಿಕಾರಿಗಳಿಗೆ ಮನವಿ ನೀಡಿ ಒತ್ತಾಯಿಸಿದ್ದರೂ ಅದು ಸಾಧ್ಯವಾಗಿರಲಿಲ್ಲ.
ಇದೀಗ ಕೇಂದ್ರ ಸಾಹಿತ್ಯ ಪರಿಷತ್ತು ಜಿಲ್ಲೆಯಲ್ಲಿ ಎರಡು ಸಾಹಿತ್ಯ ಭವನ ನಿರ್ಮಾಣಕ್ಕೆ ಒಪ್ಪಿಗೆ ನೀಡಿದ್ದು ತುಂಬಾ ಸಂತೋಷದ ಸಂಗತಿ. ಅದರಲ್ಲಿ ಒಂದನ್ನು ಕಾರವಾರದ ಬದಲು ಕರಾವಳಿ ಮಧ್ಯವರ್ತಿ ಸ್ಥಳವಾದ ಕುಮಟಾದಲ್ಲಿ ನಿರ್ಮಿಸಲು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾದ ಬಿ.ಎನ್ ವಾಸರೆಯವರು ಮುಂದಾಗಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷ ಡಾ. ಶ್ರೀಧರ ಗೌಡ ಉಪ್ಪಿನ ಗಣಪತಿ ಒತ್ತಾಯಿಸಿದ್ದಾರೆ.