ಗೋಕರ್ಣ: ಭಗವತ್ ಪ್ರೀತಿ, ಲೋಕಪ್ರೀತಿ ಎಲ್ಲಕ್ಕಿಂತ ಹೆಚ್ಚಾಗಿ ಆತ್ಮಕ್ಕೆ ಪ್ರಿಯವಾಗುವ ಸತ್ಕಾರ್ಯಗಳನ್ನು ಮಾಡಿ ಜೀವನ ಸಾರ್ಥಕಪಡಿಸಿಕೊಳ್ಳಬೇಕು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು. ಚಾತುರ್ಮಾಸ್ಯ ಸಂದರ್ಭದಲ್ಲಿ ಶಿಷ್ಯರು ಆಯೋಜಿಸಿದ್ದ ಪರಮಪೂಜ್ಯರ 49ನೇ ವರ್ಧಂತ್ಯುತ್ಸವದಲ್ಲಿ ಆಶೀರ್ವಚನ ನೀಡಿದ ಅವರು, “ಮನುಷ್ಯ ಜನ್ಮ ದೊಡ್ಡದು. ಮನುಷ್ಯ ತನ್ನ ಜೀವನದಲ್ಲಿ ದೇವರೂ ಆಗಬಲ್ಲ; ದಾನವನೂ ಆಗಬಲ್ಲ. ಸತ್ಕಾರ್ಯಗಳ ಮೂಲಕ ಜೀವನವನ್ನು ಮುಕ್ತಿಯ ಪಥವಾಗಿ ಮಾಡಿಕೊಳ್ಳುವ ಆಯ್ಕೆ ನಮಗೆ ಸಿಕ್ಕಿದೆ. ಇದನ್ನು ವ್ಯರ್ಥಪಡಿಸಿಕೊಳ್ಳಬೇಡಿ” ಎಂದು ಸಲಹೆ ಮಾಡಿದರು.
ಆಯಸ್ಸು ಅಮೂಲ್ಯ. ಆಯಸ್ಸೆಂಬ ಸುವರ್ಣದ್ರವವನ್ನು ವ್ಯರ್ಥವಾಗಿ ಚೆಲ್ಲುವುದು ನಮ್ಮ ಮೂರ್ಖತನ. ಸದೃಢವಾಗಿದ್ದಾಗಲೇ ಹೆಚ್ಚು ಹೆಚ್ಚು ಸೇವೆ ಸತ್ಕಾರ್ಯಗಳ ಮೂಲಕ ಪರಮಾತ್ಮನಿಗೆ ಹತ್ತಿರವಾಗುವ ಪ್ರಯತ್ನ ಮಾಡೋಣ ಎಂದರು. ಯೋಗಿ ಯೋಗದಿಂದ ಮುಕ್ತಿ ಸಾಧಿಸಿದರೆ ಯೋಧ ಯುದ್ಧದಿಂದ ಅದನ್ನು ಸಾಧಿಸುತ್ತಾನೆ. ಇಬ್ಬರೂ ಸೇರುವುದು ಒಂದೆಡೆಗೆ. ನಿಸ್ವಾರ್ಥವಾಗಿ ಸೇವೆ ಮಾಡುವ ಎಲ್ಲರೂ ಬ್ರಹ್ಮತ್ವವನ್ನೇ ಪಡೆಯುತ್ತಾರೆ ಎಂದು ವಿಶ್ಲೇಷಿಸಿದರು.


ಜೀವನದಲ್ಲಿ ಇನ್ನೊಬ್ಬರಿಗೆ ಒಳ್ಳೆಯದು ಮಾಡಿದರೆ, ಒಳ್ಳೆಯದು ಬಯಸಿದರೆ ನಮಗೂ ಅದೇ ಸಿಗುತ್ತದೆ. ನಾವು ಬಿತ್ತಿದ್ದನ್ನೇ ಫಲವಾಗಿ ಪಡೆಯುತ್ತೇವೆ ಎಂದರು.
ಹುಟ್ಟು ಸಂಭ್ರಮಿಸುವ ವಿಷಯವಲ್ಲ; ಪ್ರತಿಯೊಂದು ವರ್ಷ ಪೂರೈಸಿದಂತೆಲ್ಲ ನಮ್ಮ ಆಯಸ್ಸು ಕ್ಷೀಣಿಸುತ್ತಾ ಹೋಗುತ್ತದೆ. ಆದ್ದರಿಂದ ಇರುವ ಅಲ್ಪ ಅವಧಿಯಲ್ಲೇ ಸತ್ಕಾರ್ಯದ ಮೂಲಕ ಪುಣ್ಯ ಸಂಪಾದಿಸಬೇಕು ಎಂದು ನಮ್ಮನ್ನು ನೆನಪಿಸುವ ಸಮಾರಂಭವಾಗಿ ಹುಟ್ಟುಹಬ್ಬ ಮಾರ್ಪಡಬೇಕು ಎಂದು ಹೇಳಿದರು.

RELATED ARTICLES  ಬಿ.ಎಡ್ ನಲ್ಲಿ ಅಕ್ಕ ತಮ್ಮನ ಸಾಧನೆ : ಅಕ್ಕ ಪ್ರಥಮ - ತಮ್ಮ ದ್ವಿತೀಯ : ಅದ್ವತೀಯ ಸಾಧನೆಗೆ ಅಭಿನಂದನೆ.


ಅಂತೆಯೇ ಕೆಲವೊಮ್ಮೆ ಸಾವು ಕೂಡಾ ಸಂಭ್ರಮಕ್ಕೆ ಕಾರಣವಾಗುತ್ತದೆ. ಸನ್ಯಾಸಿಗಳ ಸಾವಿಗೆ ಶೋಕವಿಲ್ಲ. ಬ್ರಹ್ಮಪದವನ್ನು ಪಡೆಯುವುದು ನಿಜಕ್ಕೂ ಸಂತಸದ ವಿಚಾರ. ಉಳಿದ ಜನಸಾಮಾನ್ಯರಿಗೆ ಹುಟ್ಟು ಹಾಗೂ ಸಾವು ಎರಡೂ ಬಂಧನವೇ. ಹುಟ್ಟು ಇಹಲೋಕದ ಬಂಧನಕ್ಕೆ ಕಾರಣವಾದರೆ ಸಾವು ಮತ್ತೊಂದು ಹುಟ್ಟಿಗೆ ಕಾರಣವಾಗುತ್ತದೆ. ಈ ಬಂಧನವನ್ನು ಕಳಚಿಕೊಂಡು ಮುಕ್ತಿ ಸಾಧಿಸಿದಾಗ ಮಾತ್ರ ಸಾವು ಕೂಡಾ ಸಂಭ್ರಮಿಸುವಂಥದ್ದಾಗುತ್ತದೆ ಎಂದು ತಿಳಿಸಿದರು.


ಶ್ರೀಗಳ ವರ್ಧಂತಿ ಉತ್ಸವ ಶುಭಸಂದರ್ಭದಲ್ಲಿ ಶ್ರೀಮಠದ ಶ್ರೀಪರಿವಾರಕ್ಕಾಗಿ ನಿರ್ಮಿಸಲಾಗಿರುವ ಸುಸಜ್ಜಿತ ಭೋಜನಶಾಲೆ ಮತ್ತು ಪಾಕಶಾಲೆಯನ್ನು ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರದ ಧರ್ಮಕರ್ತ ಶ್ರೀ ಭೀಮೇಶ್ವರ ಜೋಶಿ ಲೋಕಾರ್ಪಣೆ ಮಾಡಿದರು. ಅವರ ಕುಟುಂಬದವರಿಂದ ಇದೇ ಸಂದರ್ಭದಲ್ಲಿ ಭಿಕ್ಷಾಸೇವೆಯೂ ನೆರವೇರಿತು.

RELATED ARTICLES  20ಕ್ಕೂ ಅಧಿಕ ಕಾರ್ಮಿಕರು ಅಸ್ವಸ್ಥ: ಕಲುಷಿತ ನೀರು ಸೇವನೆ.


ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ದೇವವ್ರತ ಶರ್ಮಾ, ಸತ್ಯನಾರಾಯಣ ಶರ್ಮಾ, ಜನಾರ್ದನ ಭಟ್ ಹಾಗೂ ಮಹಾಬಲ ಭಟ್ ಅವರನ್ನು ಸಾಧನ ಸನ್ಮಾನ ನೀಡಿ ಗೌರವಿಸಲಾಯಿತು.


ಶ್ರೀಗಳ ವರ್ಧಂತಿ ಉತ್ಸವ ಅಂಗವಾಗಿ ವೈದಿಕ ಸಮಾವೇಶ ಮತ್ತು ನೂರಾರು ಭಕ್ತರಿಂದ ಶ್ರೀಗಳಿಗೆ ಮಂತ್ರಸಹಿತ ಅರುಣ ಗುರು ನಮಸ್ಕಾರ ಸಮರ್ಪಣೆ ನಡೆಯಿತು. ಹವ್ಯಕ ಮಹಾಮಂಡಲ ಅಧ್ಯಕ್ಷ ಮೋಹನ್ ಭಾಸ್ಕರ ಹೆಗಡೆ ಪ್ರಾಸ್ತಾವಿಕ ಭಾಷಣ ಮಾಡಿದರು. ವರ್ಧಂತಿ ಉತ್ಸವದಂದು ವಿಶೇಷವಾಗಿ ಶ್ರೀಮಾತೆ ಪರಮಪೂಜ್ಯರಿಗೆ ಮಂಗಳಾರತಿ ನೆರವೇರಿಸಿದರು. ಧರ್ಮಭಾರತಿ ಭಾವರಾಮಾಯಣದ 5ನೇ ಕಂತಿನ ಬಿಡುಗಡೆಯನ್ನು ಶ್ರೀ ಭೀಮೇಶ್ವರ ಜೋಶಿ ದಂಪತಿ ನೆರವೇರಿಸಿದರು. ಹವ್ಯಕ ಮಹಾಮಂಡಲ ಮಾಜಿ ಅಧ್ಯಕ್ಷ ಆರ್.ಎಸ್.ಹೆಗಡೆ ಹರಗಿ, ಗೌರವ ಕಾರ್ಯದರ್ಶಿ ನಾಗರಾಜ ಭಟ್ ಪೆದಮಲೆ, ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಯು.ಎಸ್.ಗಣಪತಿ ಭಟ್, ಪದಾಧಿಕಾರಿಗಳಾದ ಶ್ರೀಕಾಂತ ಪಂಡಿತ್, ಮಂಜುನಾಥ ಸುವರ್ಣಗದ್ದೆ ಮತ್ತಿತರರು ಉಪಸ್ಥಿತರಿದ್ದರು. ಉಡುಪಿ ನಗರಸಭೆ ಸದಸ್ಯ ಶ್ರೀಶ ಕೊಡವೂರು ಚಾತುರ್ಮಾಸ್ಯ ಸಂದರ್ಭದಲ್ಲಿ ಶ್ರೀಗಳಿಂದ ಅನುಗ್ರಹ ಮಂತ್ರಾಕ್ಷತೆ ಪಡೆದರು.