ಗೋಕರ್ಣ: ವಿಜ್ಞಾನದಂಥ ವಿಷಯಗಳಲ್ಲಿ ಪ್ರಯೋಗಗಳು ಹಾಗೂ ಪ್ರಯೋಗಾಲಯ ಚಟುವಟಿಕೆಗಳು ವಿದ್ಯಾರ್ಥಿಗಳ ಸೃಜನಶೀಲತೆಯನ್ನು ಹೆಚ್ಚಿಸಲು ಸಹಕಾರಿಯಾಗುತ್ತವೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ನುಡಿದರು. ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸಾರ್ವಭೌಮ ಗುರುಕುಲದಲ್ಲಿ ಇತ್ತೀಚೆಗೆ ಸ್ಟೆಮ್ (ಸೈನ್ಸ್, ಟೆಕ್ನಾಲಜಿ, ಎಂಜಿನಿಯರಿಂಗ್, ಮ್ಯಾಥ್ಸ್) ಉದ್ಘಾಟನೆ ಮತ್ತು ಪ್ರಾಯೋಜಕರ ಕೊಡುಗೆ ಹಾಗೂ ಬೆಂಬಲವನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ವಿಷಯವನ್ನು ಬೋಧಿಸುವಾಗ ಪ್ರಯೋಗಗಳ ಮೂಲಕ ಕಲಿಸಿದರೆ ಅದು ಹೆಚ್ಚು ಮನದಟ್ಟಾಗುತ್ತದೆ. ನಾವು ಕೇಳಿದ ವಿಷಯಕ್ಕಿಂತ ನೋಡಿದ ವಿಷಯಗಳು ಸುಧೀರ್ಘ ಕಾಲ ನೆನಪಿನಲ್ಲಿ ಉಳಿಯುತ್ತವೆ ಎಂದು ಅಭಿಪ್ರಾಯಪಟ್ಟರು.


ಇಐಎ ವೋಲ್ವೊ ಇಂಡಿಯಾದ ಸಿಎಸ್‍ಆರ್ ನಿರ್ದೇಶಕ ಜಿ.ವಿ.ರಾವ್ ಮಾತನಾಡಿ, ಸ್ಟೆಮ್ ಮಿನಿ ಸೈನ್ಸ್ ಲ್ಯಾಬ್‍ನ ಯಶಸ್ಸಿಗೆ ಸಂಸ್ಥೆಯ ಪ್ರಯತ್ನವನ್ನು ಶ್ಲಾಘಿಸಿದರು. ಸಂಸ್ಥೆಗೆ ನಿರಂತರ ಬೆಂಬಲ ಮುಂದುವರಿಸುವುದಾಗಿ ಈ ಸಂದರ್ಭದಲ್ಲಿ ಅವರು ಭರವಸೆ ನೀಡಿದರು. ನಂತರ “ನೀವೇ ಮಾಡಿ” ಮಾದರಿ ತಯಾರಿಕೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು.
ವಿಜ್ಞಾನ, ತಂತ್ರಜ್ಞಾನ, ಎಂಜಿಯರಿಂಗ್ ಹಾಗೂ ಗಣಿತ ಈ ನಾಲ್ಕು ಪ್ರಮುಖ ವಿಷಯಗಳ ಶಿಕ್ಷಣ ಕ್ಷೇತ್ರದಲ್ಲಿ ವೈಜ್ಞಾನಿಕ ಶೋಧನೆ, ನಾವೀನ್ಯತೆ ಮತ್ತು ಕಲಿಕೆಯನ್ನು ಉತ್ತೇಜಿಸುವಲ್ಲಿ ಸ್ಟೆಮ್ ಮಿನಿ ಲ್ಯಾಬ್ ಮಹತ್ವದ ಪಾತ್ರ ವಹಿಸುತ್ತದೆ. ವೋಲ್ವೋ ಉದ್ಯಮ ಸಮೂಹದ ಸಿಎಸ್‍ಆರ್ ಟ್ರಸ್ಟ್ (ಇಂಡಿಯಾ) ಈ ಮಿನಿ ಪ್ರಯೋಗಾಲಯವನ್ನು ಪ್ರಾಯೋಜಿಸಿದೆ.

RELATED ARTICLES  ಜನರಿಗಾಗಿ ನಾವು ಕಾರ್ಯ ಮಾಡುತ್ತಿದ್ದೇವೆ : ದಿನಕರ‌ ಶೆಟ್ಟಿ.


ಕಾರ್ಯಕ್ರಮದ ಅಂಗವಾಗಿ ಸ್ಟೆಮ್ ಲರ್ನಿಂಗ್ ಪ್ರೈವೇಟ್ ಲಿಮಿಟೆಡ್‍ನ ಪ್ರವೀಣ್ ಮತ್ತು ತಂಡದವರು “ನೀವೇ ಮಾಡಿ ನೋಡಿ” ಎಂಬ ವಿಜ್ಞಾನ ಮಾದರಿ ತಯಾರಿಕಾ ಸ್ಪರ್ಧೆಯನ್ನು ವಿದ್ಯಾರ್ಥಿಗಳಿಗಾಗಿ ನಡೆಸಿಕೊಟ್ಟರು. ಇದರ ಮೂಲಕ ವಿದ್ಯಾರ್ಥಿಗಳು ಮೂಲ ವಿಜ್ಞಾನ ಮಾದರಿಗಳನ್ನು ತಯಾರಿಸುವ ಸುಲಭ ವಿಧಾನಗಳ ಬಗ್ಗೆ ಅಲ್ಪ ಅವಧಿಯಲ್ಲೇ ತಿಳಿದುಕೊಂಡರು.
ಸ್ಟೆಮ್ ಪ್ರಯೋಗಾಲಯವನ್ನು ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಮತ್ತು ಗಣಿತ ವಿಷಯಗಳ ಮೇಲಿನ ಪ್ರಯೋಗಗಳಿಗೆ ಮತ್ತು ವ್ಯಾಪಕ ಶ್ರೇಣಿಯ ಕಲಿಕಾ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ನಿಖರವಾಗಿ ವಿನ್ಯಾಸಗೊಳಿಸಲಾಗಿದೆ. ಇದೇ ಸಂದರ್ಭದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ನಮ್ಮ ಲ್ಯಾಬ್‍ನಲ್ಲಿ ಕೆಲವು ಪ್ರಯೋಗಗಳನ್ನು ಮಾಡಿದರು.

RELATED ARTICLES  ಎಲಿಷಾ ಎಲಕಪಾಟಿ ವಿರುದ್ಧ ಹೆಚ್ಚುತ್ತಿದೆ ಆಕ್ರೋಶ : ಕುಮಟಾದಲ್ಲಿ ಮುಕ್ರಿ ಸಮಾಜದವರಿಂದ ಪತ್ರಿಕಾಗೋಷ್ಠಿ : ಕುಮಟಾದಲ್ಲಿ ಪ್ರಕರಣ ದಾಖಲಿಸಲು ತಯಾರಿ.


ಮಾಧವಿ ರಾವ್, ವೋಲ್ವೊ ಇಂಡಿಯಾದ ಕಂಪನಿ ಕಾರ್ಯದರ್ಶಿ ಎಲ್.ಆರ್.ಹೆಗಡೆ, ಸ್ಟೆಮ್ ವ್ಯವಸ್ಥಾಪಕ ನಾಗದೇವ್, ವಿವಿವಿ ಆಡಳಿತಾಧಿಕಾರಿ ಪ್ರಸನ್ನ ಕುಮಾರ್ ಟಿ.ಜಿ, ಮುಖ್ಯೋಪಾಧ್ಯಾಯಿನಿ ಸೌಭಾಗ್ಯ ಭಟ್ಟ ಮತ್ತಿತರರು ಉಪಸ್ಥಿತರಿದ್ದರು.
ಮಾನಸ ಆರ್ಯೆ ಕಾರ್ಯಕ್ರಮ ನಿರೂಪಿಸಿದರು. ವಿಜ್ಞಾನ ವಿಭಾಗದ ಅಧ್ಯಾಪಕ ಕಿರಣ್ ಜೆ.ನಾಯಕ್ ಸ್ವಾಗತಿಸಿದರು. ವಿಜ್ಞಾನ ಶಿಕ್ಷಕಿ ಅನುಪಮಾ ಜಿ. ಸ್ಟೆಮ್ ಲ್ಯಾಬ್ ಬಳಕೆ ಸಾಧ್ಯತೆಯನ್ನು ವಿವರಿಸಿದರು. ಇದು ವಿಷಯಗಳನ್ನು ವಿದ್ಯಾರ್ಥಿಗಳು ಸುಲಭವಾಗಿ ಅರ್ಥಮಾಡಿಕೊಳ್ಳಲು ಹೇಗೆ ಅನುಕೂಲಕರವಾಗಿದೆ ಮತ್ತು ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ತೊಡಗಿಸಿಕೊಳ್ಳಲು, ವಿಮರ್ಶಾತ್ಮಕ ಚಿಂತನೆಯನ್ನು ಅಭಿವೃದ್ಧಿಪಡಿಸುವಲ್ಲಿ ಹೇಗೆ ನೆರವಾಗುತ್ತದೆ ಎಂದು ತಿಳಿಸಿಕೊಟ್ಟರು.ವಿದ್ಯಾರ್ಥಿಗಳಲ್ಲಿ ಸಮಕಾಲೀನ ಶಿಕ್ಷಣ ಮತ್ತು ತಾಂತ್ರಿಕ ಬಳಕೆಯನ್ನು ಉನ್ನತೀಕರಿಸಲು ಇದು ತುಂಬಾ ಉಪಯುಕ್ತ ಎಂದರು.