ಗೋಕರ್ಣ: ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸಾರ್ವಭೌಮ ಗುರುಕುಲದಲ್ಲಿ ಇತ್ತೀಚೆಗೆ ವಿದ್ಯಾರ್ಥಿ ಪರಿಷತ್ ಉದ್ಘಾಟನೆ ನಡೆಯಿತು. ವಿವಿವಿ ನವಯುಗ ಶಿಕ್ಷಣ ವಿಭಾಗದ ವರಿಷ್ಠಾಚಾರ್ಯರಾದ ಎಸ್.ಜಿ.ಭಟ್ಟ, ಗೌರವ ಕಾರ್ಯಾಧ್ಯಕ್ಷರಾದ ಪ್ರೊ ಎಸ್.ಎಸ್.ಹೆಗಡೆ, ಸಮನ್ವಯ ಅಧಿಕಾರಿಗಳಾದ ಅಶ್ವಿನಿ ಉಡಚೆ, ಸಾರ್ವಭೌಮ ಗುರುಕುಲದ ಮುಖ್ಯೋಪಾಧ್ಯಾಯಿನಿ ಸೌಭಾಗ್ಯ ಭಟ್ಟ, ವಿವಿವಿ ಪಿಯು ವಿಭಾಗದ ಪ್ರಾಂಶುಪಾಲರಾದ ಶಶಿಕಲಾ ಕುರ್ಸೆ ಅತಿಥಿಗಳಾಗಿ ಆಗಮಿಸಿದ್ದರು. ವಿದ್ಯಾರ್ಥಿಗಳಿಗೆ ಚುನಾವಣಾ ವ್ಯವಸ್ಥೆ ಬಗ್ಗೆ ಮನವರಿಕೆ ಮಾಡಿಸುವ ಉದ್ದೇಶದಿಂದ ನಡೆದ ಚುನಾವಣೆ ಬಳಿಕ ಆಯ್ಕೆಯಾದ ಪ್ರತಿನಿಧಿಗಳಿಗೆ ಎಸ್.ಜಿ.ಭಟ್ಟ ಪ್ರತಿಜ್ಞಾ ವಿಧಿ ಬೋಧಿಸಿದರು. ವಿದ್ಯಾರ್ಥಿ ಪರಿಷತ್ತಿನ ಮಹತ್ವ ಹಾಗೂ ಪ್ರಾಮುಖ್ಯತೆಯ ಬಗ್ಗೆ ಮಕ್ಕಳಿಗೆ ತಿಳಿಸಿಕೊಟ್ಟರು.
ಪ್ರೊ ಎಸ್.ಎಸ್.ಹೆಗಡೆ ಅವರು ಶಾಲಾ ವಿದ್ಯಾರ್ಥಿ ಪರಿಷತ್ತಿನ ನೀತಿ ನಿಯಮಗಳ ಪುಸ್ತಿಕೆಯನ್ನು ನೀಡಿ ಶಾಲೆಗಳಲ್ಲಿ ವಿದ್ಯಾರ್ಥಿ ಪರಿಷತ್ತಿನ ಅಗತ್ಯತೆ, ಚುನಾಯಿತ ವಿದ್ಯಾರ್ಥಿಗಳ ಜವಾಬ್ದಾರಿ ಮತ್ತು ಅಳವಡಿಸಿಕೊಳ್ಳಬೇಕಾದ ಶಿಸ್ತಿನ ಬಗ್ಗೆ ತಿಳಿಸಿಕೊಟ್ಟರು.
ಆಯ್ಕೆಯಾದ ವಿದ್ಯಾರ್ಥಿ ಮುಖಂಡರು ಜವಾಬ್ದಾರಿಯನ್ನು ನಿಷ್ಠೆಯಿಂದ ನಿಭಾಯಿಸಿ, ನಾಯಕತ್ವ ಗುಣಗಳನ್ನು ಮೈಗೂಡಿಸಿಕೊಳ್ಳುವಂತೆ ಮುಖ್ಯೋಪಾಧ್ಯಾಯಿನಿ ಸೌಭಾಗ್ಯ ಭಟ್ಟ ಸಲಹೆ ಮಾಡಿದರು. ಶಶಿಕಲಾ ಕುರ್ಸೆ ಸ್ವಾಗತಿಸಿದರು. ವಿದ್ಯಾರ್ಥಿನಿ ಕಾಂತಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ತನ್ವಿಗೌರಿ ವಂದಿಸಿದರು.