ಕುಮಟಾ : ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡವರ ವ್ಯಕ್ತಿತ್ವ ಮಾದರಿಯಾಗಿ ರೂಪುಗೊಳ್ಳುತ್ತದೆ. ಕ್ರಿಯಾಶೀಲತೆ ಹೊಸತನ ಸದಾ ಚೈತನ್ಯ ತುಂಬುವುದು ಕಲೆಯ ಗುಣವಾಗಿದೆ. ಹೀಗಾಗಿ ಕಲಾವಿದನು ಸಮಾಜದಲ್ಲಿ ಅಗ್ರಗಣ್ಯ ಸ್ಥಾನದಲ್ಲಿ ಉಳಿದುಕೊಳ್ಳಲು ಸಾಧ್ಯವಾಗಿದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆಕ್ಕಾರು ಜಿ.ಡಿ ಭಟ್ಟ ಹೇಳಿದರು. ಅವರು ತಾಲೂಕಿನ ಕೊಂಕಣ ಎಜುಕೇಶನ್ ಟ್ರಸ್ಟ್ ನ ಜಾನಕಿ ಪ್ರಭು ಪ್ರತಿಭಾ ಚೈತನ್ಯ ಕೇಂದ್ರದ 2023-24 ನೇ ಸಾಲಿನ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 

ಕೇವಲ ಶಿಕ್ಷಣಕ್ಕಾಗಿ ಅನೇಕ ಸಂಸ್ಥೆಗಳು ಕಾರ್ಯನಿರ್ವಹಿಸುತ್ತದೆ, ಆದರೆ ಕೇವಲ ಶಿಕ್ಷಣದಲ್ಲಿ ಸಾಧನೆ ಮಾಡುವುದಷ್ಟೇ ಅಲ್ಲದೇ, ಮಕ್ಕಳ ಪರಿಪೂರ್ಣ ವ್ಯಕ್ತಿತ್ವ ರೂಪಿಸುತ್ತಿರುವ ಕೊಂಕಣ ಎಜುಕೇಶನ್ ಟ್ರಸ್ಟ್ ರಾಜ್ಯಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವುದು ಸ್ಥಳೀಯರಾದ ನಾವೆಲ್ಲರೂ ಹೆಮ್ಮೆ ಪಡುವ ವಿಚಾರವಾಗಿದೆ. 

ನಾನು ಸಾಮಾನ್ಯ ವ್ಯಕ್ತಿಯಾಗಿ ಸಂಸ್ಥೆಯ ಬೆಳವಣಿಗೆಗಳನ್ನು ಗಮನಿಸುತ್ತಾ ಬಂದಿದ್ದು, ಇಲ್ಲಿಯ ಕಾರ್ಯಕ್ರಮಗಳು ಜೀವನ ಶಿಕ್ಷಣವನ್ನು ನೀಡುವಂತೆ ಇರುತ್ತದೆ. ಮಕ್ಕಳನ್ನು ಕೊಂಕಣ ಶಾಲೆಗೆ ಕಳುಹಿಸಿದರೆ ಮಕ್ಕಳು ಎಲ್ಲಾ ವಿಚಾರಗಳಲ್ಲಿ ಪರಿಪೂರ್ಣತೆ ಹೊಂದುತ್ತಾರೆ ಎಂಬ ನಂಬಿಕೆ ಪಾಲಕರಲ್ಲಿದ್ದು ಸಂಸ್ಥೆಗೆ ಉತ್ತರೋತ್ತರ ಶ್ರೇಯಸ್ಸನ್ನು ಓರ್ವ ಕಲಾವಿದನಾಗಿ ನಾನು ಹಾರೈಸುತ್ತೇನೆ ಎಂದು ಜಿ.ಡಿ ಭಟ್ಟ ಹೇಳಿದರು.

RELATED ARTICLES  ಜನರಿಗೆ ಮುದ ನೀಡಿದ ದೀಪಾವಳಿ ವಿಶೇಷ ತಾಳಮದ್ದಲೆ ಕಾರ್ಯಕ್ರಮ

ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ವಿಶ್ವಸ್ಥರಾದ ರಮೇಶ ಪ್ರಭು ಮಾತನಾಡಿ, ಕಲಿಸಿದ ವಿಷಯಗಳ ಪರೀಕ್ಷೆ ಬರೆದು 98% ವನ್ನೋ 625 ಕ್ಕೆ 625 ಅಂಕವನ್ನೋ ಪಡೆದು ಸಾಧನೆ ಮಾಡುವುದು ದೊಡ್ಡ ಸಾಮರ್ಥ್ಯವಲ್ಲ. ಅದರ ಜೊತೆಗೆ ಯಾವುದಾದರೂ ಒಂದು ಕಲೆಯನ್ನು ಕಲಿತುಕೊಂಡರೆ ಅದು ಎಲ್ಲಾ ಶಿಕ್ಷಣಕ್ಕೆ ಕಿರೀಟವಿಟ್ಟಂತೆ ಆಗುತ್ತದೆ. ಹೀಗಾಗಿ ಕಲೆಯನ್ನು ಕಲಿಯುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕಾರ್ಯ ಪ್ರವೃತ್ತರಾಗಬೇಕು ಪಾಲಕರು ಅವರಿಗೆ ಅಗತ್ಯ ವ್ಯವಸ್ಥೆ ಮಾಡಿಕೊಡಬೇಕೆಂದು ಅಭಿಪ್ರಾಯಪಟ್ಟರು.

ಸಂಸ್ಥೆಯ ಶಿಕ್ಷಕರಾದ ಚಿದಾನಂದ ಬಂಡಾರಿ ಪ್ರಸ್ತಾವಿಕವಾಗಿ ಮಾತನಾಡಿ, ಜಿ.ಡಿ ಭಟ್ಟ ಕೆಕ್ಕಾರು ಸರಳ ಸಜ್ಜನಿಕೆಯ ಮೂಲಕವೇ ಹೆಸರಾದವರು. ರಾಷ್ಟ್ರೀಯ ಮಟ್ಟದಲ್ಲಿ ಕಲೆಯನ್ನು ಪರಿಚಯಿಸಿದ ಕೀರ್ತಿ ಅವರದ್ದು. ನಾಟಕಕಾರರಾಗಿ, ಕಲಾವಿದರಾಗಿ, ಸಾಮಾಜಿಕ ಕಳಕಳಿಯ ವ್ಯಕ್ತಿಯಾದ ಅವರನ್ನು ಸಂಸ್ಥೆಯಲ್ಲಿ ಕಾಣಲು ಹೆಮ್ಮೆ ಎನಿಸುತ್ತದೆ ಎಂದರು. ಅವರ ಮಾರ್ಗದರ್ಶನದಲ್ಲಿ ಸಂಸ್ಥೆಯಲ್ಲಿ ಒಂದು ರೂಪಕ ನಾಟಕ ಪ್ರದರ್ಶನ ಮಾಡುವಂತೆ ವಿನಂತಿಸಿದರು.

RELATED ARTICLES  ಕಾಗೇರಿ ಅವರ ಮಾರ್ಗದರ್ಶನದಲ್ಲಿ ರಾಜ್ಯ ಅಭಿವೃದ್ಧಿ ಕಾಣಲು ಸಾಧ್ಯ‌ : ಮುಖ್ಯಮಂತ್ರಿ

ವೇದಿಕೆಯಲ್ಲಿ ಸಂಸ್ಥೆಯ ಶೈಕ್ಷಣಿಕ ಮಾರ್ಗದರ್ಶಕರಾದ ಆರ್.ಎಚ್ ದೇಶಭಂಡಾರಿ, ಪ್ರಾಂಶುಪಾಲರಾದ ಕಿರಣ ಭಟ್ಟ, ಮುಖ್ಯೋಪಾಧ್ಯಾಯರಾದ ಸುಮಾ ಪ್ರಭು, ಸುಜಾತಾ ನಾಯ್ಕ, ಜಾನಕಿ ಪ್ರಭು ಪ್ರತಿಭಾ ಚೈತನ್ಯ ಕೇಂದ್ರದ ಗುರುಗಳಾದ ಎಸ್.ಪಿ ಹಂದೆ, ಸಿರಿಲ್ ಲೋಪೀಸ್, ನಯನಾ ಪ್ರಸನ್ನ ಭಟ್ಕಳ, ಶಿವಾನಂದ ಭಟ್ಟ ಹಡಿನಬಾಳ, ಜಯರಾಜ ಶೇರುಗಾರ, ನಾಗರಾಜ ಭಂಡಾರಿ, ಈಶ್ವರ ಗೌಡ, ರಾಮನಾಥ ಕೇಳಸ್ಕರ್ ಇನ್ನಿತರರು ಇದ್ದರು. ಶಿಕ್ಷಕ ಗಣೇಶ ಜೋಶಿ ಕಾರ್ಯಕ್ರಮ ನಿರೂಪಿಸಿದರು, ಸಂಚಾಲಕರಾದ ವಿನಾಯಕ ಹೆಗಡೆಕರ ಸಹಕರಿಸಿದರು.

ಸಭಾ ಕಾರ್ಯಕ್ರಮದ ನಂತರ ನಡೆದ ಪ್ರತಿಭಾ ಪ್ರದರ್ಶನ ಗಮನ ಸೆಳೆಯಿತು. ಸಂಗೀತ, ಭರತನಾಟ್ಯ, ಯಕ್ಷಗಾನ, ಕರಾಟೆ, ತಬಲಾ, ಚಿತ್ರಕಲೆ, ವಿದ್ಯಾರ್ಥಿ ಪಿರಾಮಿಡ್ ಪ್ರೇಕ್ಷಕರ ಮನಸೂರೆಗೊಂಡಿತು.