ಕುಮಟಾ : ಸಮಯ ಬಂದಾಗ ದೇವರಿಗೂ ಸಹಕಾರ ನೀಡಿದವರು, ಸಮಾಜಕ್ಕೆ ಬದುಕಿನ ದಾರಿ ತೋರಿದವರು ಋಷಿಗಳು. ಅನೇಕ ಮಂತ್ರಗಳನ್ನು ತೋರಿದವರು, ಸಹಸ್ರ ನಾಮಗಳನ್ನು ಕೊಟ್ಟವರು ಋಷಿ ಮುನಿಗಳು. ಭಾರತದ ಸಾಂಸ್ಕೃತಿಕ ವಾಂಗ್ಮಯ ಕಟ್ಟಿಕೊಟ್ಟವರು ಋಷಿಗಳು ಹೀಗಾಗಿ ಸಮಾಜಕ್ಕೆ ನಿಜಾರ್ಥದಲ್ಲಿ ದಾರಿದೀಪವಾದದ್ದು ಭಾರತೀಯ ಋಷಿ ಪರಂಪರೆ ಎಂದು ಲೇಖಕ, ಖ್ಯಾತ ವಾಗ್ಮಿ, ಶಿಕ್ಷಣತಜ್ಞ ರೋಹಿತ್ ಚಕ್ರತೀರ್ಥ ಹೇಳಿದರು. ಅವರು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರವಾರ ಜಿಲ್ಲಾ ಸಮಿತಿಯಿಂದ ಕುಮಟಾದ ವಿವೇಕ ನಗರದ ಮಾಧವ ಕುಂಜದ ಸಭಾಭವನದಲ್ಲಿ ನಡೆದ ಮಾಸದ ಬೆಳಕು ಕಾರ್ಯಕ್ರಮ ಉದ್ಘಾಟಿಸಿ, ಸದ್ಯೋಜಾತರ ‘ವಾಚಕ್ನವೀ’ ಪುಸ್ತಕ ಲೋಕಾರ್ಪಣೆಯ ನಂತರ ‘ಭಾರತದ ಋಷಿ ಪರಂಪರೆಯ’ ಕುರಿತಾಗಿ ವಿಶೇಷ ಉಪನ್ಯಾಸ ನೀಡಿದರು.

ನಾವು ಋಷಿಗಳನ್ನು ಮಂತ್ರದೃಷ್ಟಾರರು ಎಂಬುದಾಗಿ ಹೇಳುತ್ತೇವೆ. ಸತ್ಯವನ್ನು ಕಂಡವರು ಸತ್ಯವನ್ನು ಜಗತ್ತಿಗೆ ಕೊಟ್ಟವರು ಋಷಿಗಳು. ಮಂತ್ರವನ್ನು ಕಂಡವರು, ಜಗತ್ತಿಗೆ ಕಾಣಿಸಿದವರು ಅವರು ಎಂಬುದು ಇದರ ಅರ್ಥ. ಮತ್ತೆ ಮತ್ತೆ ಪ್ರಯೋಗದ ಮೂಲಕ ನಿರಂತರವಾಗಿ ಪ್ರಾಕೃತಿಕ ವಿಶೇಷವನ್ನು ಗುರುತಿಸುವ ಕಾರ್ಯ ಮಾಡಿದವರು ಋಷಿಗಳು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ನ್ಯೂಟನ್ ನ ಕಥೆಯ ಉದಾಹರಣೆಯೊಂದಿಗೆ ವಿವರವನ್ನು ನೀಡುತ್ತಾ, ಸೇಬು ಹಣ್ಣು ಬೀಳುವುದು ಸಾಮಾನ್ಯ ಕಾರ್ಯವಾದರೂ ನ್ಯೂಟನ್ ಗೆ ಆ ಪ್ರಕ್ರಿಯೆ ವಿಶೇಷವಾಗಿ ಕಂಡಿದ್ದು ಗಮನಾರ್ಹ. ಪ್ರಕೃತಿಯಲ್ಲಿನ ವಿಶಿಷ್ಟ ಅಂಶಗಳನ್ನು ಕಾಣುವ ಸಂಸ್ಕಾರ ಬೇಕು ಎಂಬುದನ್ನು ಈ ಮೂಲಕ ತಿಳಿಯಬಹುದು ಎಂದರು.

RELATED ARTICLES  ಮೋಟಾರ್ ಬೈಕ್ ಹಾಗೂ ಎಕ್ಟಿವ್ ಹೊಂಡಾ ನಡುವೆ ಅಪಘಾತ : ಮೂವರಿಗೆ ಪೆಟ್ಟು.

ಋಷಿ ಪರಂಪರೆಗೆ ಯಾವುದೇ ಜಾತಿ, ಮತ, ಪಂಥಗಳ ಬೇಧವಿಲ್ಲ. ಎಲ್ಲಾ ಜಾತಿ ಜನಾಂಗದಲ್ಲಿಯೂ ಋಷಿಗಳು ಆಗಿ ಹೋಗಿದ್ದಾರೆ. ಋಷಿಗಳಂತೆ ಬದುಕುವವರೂ ಇದ್ದಾರೆ‌ ಎಂಬುದನ್ನು ಉದಾಹರಣೆಯೊಂದಿಗೆ ವಿವರಸಿದ ಅವರು, ಋಷಿ ಪರಂಪರೆ ಭಾರತದ ಜೀವನಾಡಿಯಾಗಿ ಪರಂಪರೆಯನ್ನು ಅರ್ಥವತ್ತಾಗಿ ನಡೆಸಿಕೊಂಡು ಬಂದಿದೆ. ಸನಾತನ ಸಂಸ್ಕೃತಿಯಲ್ಲಿ ಆಗಿ ಹೋದ ಎಲ್ಲ ಬೆಳವಣಿಗೆಗೆ ಕಾರಣ ಋಷಿ ಪರಂಪರೆ ಎಂದು ವಿವರಿಸಿದರು.

ಋಷಿಗಳನ್ನು ತ್ರಿಕಾಲ ಜ್ಞಾನಿಗಳೆಂದು ಹೇಳುವ ಪದ್ಧತಿ ನಮ್ಮ ಪರಂಪರೆಯಲ್ಲಿದೆ. ಮೂರು ಕಾಲಗಳನ್ನು ಬಲ್ಲವರೆಂದರೆ ಭೂತಕಾಲದ ಬಗೆಗೆ ಸರಿಯಾದ ತಿಳಿವಳಿಕೆಯೂ, ವರ್ತಮಾನ ಕಾಲವನ್ನು ಚೆನ್ನಾಗಿ ವಿಮಶಿಸಬಲ್ಲ ಒಳನೋಟವೂ, ಭವಿಷತ್ಕಾಲದ ಬಗೆಗೆ ಸೂಕ್ಷ್ಮವಾದ ಚಿಂತನೆ ಮೂಲಕ ದಾರಿ ತೋರಬಲ್ಲ ಸಾಮರ್ಥ್ಯವೂ ಇರುವವರು. ಅಂತಹ ಋಷಿಗಳು ತಮ್ಮ ಸುತ್ತಲೂ ಸೇರಿಕೊಂಡವರ ಮೇಲೆ ಮಾತ್ರವಲ್ಲ, ‘ಕಾಲಕ್ಕೆ ಕಾರಣ’ವೆಂದು ಹೇಳಲ್ಪಟ್ಟ ರಾಜನ ಆಡಳಿತ ವ್ಯವಸ್ಥೆಯ ಮೇಲೂ ಪರಿಣಾಮವನ್ನುಂಟು ಮಾಡಿ ಲೋಕಜೀವನವನ್ನು ಉನ್ನತಸ್ಥಿತಿಗೊಯ್ಯಬಲ್ಲವರು ಎಂದರು. 

ರಾಜರ್ಷಿ, ಮಹರ್ಷಿ, ಬ್ರಹ್ಮರ್ಷಿಯ ಪರಂಪರೆಯ ಬಗ್ಗೆ ತಿಳಿಸುತ್ತಾ ಕಶ್ಯಪ, ಅತ್ರಿ, ಭಾರದ್ವಾಜ, ವಿಶ್ವಾಮಿತ್ರ, ಗೌತಮ, ಜಮದಗ್ನಿ, ವಸಿಷ್ಠ, ಮರೀಚಿ, ಅತ್ರಿ, ಆಂಗೀರಸ, ಪುಲಸ್ತ್ಯ, ಪುಲಹ, ಕ್ರತು ವಿವರಿಂದ ಆರಂಭಿಸಿ ಅರವಿಂದರು ಹಾಗೂ ದೈವರಾತರ ಕುರಿತಾಗಿ ವಿವರಿಸಿದ ಇವರು ಋಷಿ ಪರಂಪರೆ  ನಿರಂತರ ಎಂದು ವಿವರಿಸಿದರು.

RELATED ARTICLES  ಇಂದಿನ(ದಿ-08/04/2019) ಉತ್ತರಕನ್ನಡ ಜಿಲ್ಲೆಯ ಪ್ರಮುಖ ತಾಲೂಕುಗಳ ಅಡಿಕೆ ಧಾರಣೆ

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ನ ಪ್ರಮುಖರಾದ ರಾಜೇಂದ್ರ ಭಟ್ಟ ಪ್ರಾರ್ಥನೆಯ ಮೂಲಕ ಕಾರ್ಯಕ್ರಮ ಪ್ರಾರಂಭಿಸಿ, ಸಂಘಟನೆಯ ಹುಟ್ಟು ಹಾಗೂ ಭಾರತದಾದ್ಯಂತ ಸಾಹಿತ್ಯ ಪರಿಷದ್ ನ ಕಾರ್ಯಗಳ ಬಗ್ಗೆ ವಿವರಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಕಾರ್ಯಕ್ರಮದಲ್ಲಿ  ನಿವೃತ್ತ ಉಪನ್ಯಾಸಕ ಟಿ.ಜಿ ಭಟ್ಟ ಹಾಸಣಗಿ ಪುಸ್ತಕ ಪರಿಚಯಿಸುತ್ತಾ, ಕಥೆ ಕಾವ್ಯಗಳನ್ನು ಸಮ್ಮಿಲಿತಗೊಳಿಸಿ ಈ ಪುಸ್ತಕದ ರಚನೆಮಾಡಲಾಗಿದೆ. ಚಿಕ್ಕ ಚಿಕ್ಕ ಕಥನದ ಮೂಲಕ ಯಾಜ್ಞವಲ್ಕ್ಯರ ಜೀವನ ಚಿತ್ರಣ ತೆರೆದಿಡಲಾಗಿದೆ. ಪ್ರತೀ ಪಾತ್ರವನ್ನೂ ಮನೋಜವಾಗಿ ಚಿತ್ರಿಸಲಾಗಿರುವ ಈ ಪುಸ್ತಕ ಓದುಗರ ಮನ ಮುಟ್ಟಲಿದೆ ಎಂದು ಅಭಿಪ್ರಾಯಪಟ್ಟರು.

ವಾಚಕ್ನವಿ ಪುಸ್ತಕ ಕತೃ ವಿದ್ವಾನ್ ಸದ್ಯೋಜಾತ ಭಟ್ಟ ಉಪಸ್ಥಿತರಿದ್ದು ಮಾತನಾಡಿ ಅಗ್ನಿ ಕುರಿತಾಗಿ ಆವಹನೀಯ ಪುಸ್ತಕ ಬರೆಯಬೇಕು ಎಂದು ಹೊರಟವನಿಗೆ ಸಿಕ್ಕಿದ್ದು ಹೊಸ ದಿಸೆ. ಈ ಪುಸ್ತಕ ಪುಸ್ತಕ ಬಿಡುಗಡೆಯು ನನಗೆ ಹೊಸ ಅನುಭವವನ್ನು ನೀಡಿದೆ ಎನ್ನುತ್ತಾ, ಪುಸ್ತಕದ ತಿರುಳನ್ನು ತೆರೆದಿಟ್ಟರು. 

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ನ ಜಿಲ್ಲಾ ಅಧ್ಯಕ್ಷೆ ವೀಣಾ ಕಾಮತ್ ಗಣ್ಯರನ್ನು ಪರಿಚಯಿಸಿ ಸ್ವಾಗತಿಸಿದರು, ಕಾರ್ಯದರ್ಶಿ ಗಣೇಶ ಗುನಗಾ, ಸಹ ಕಾರ್ಯದರ್ಶಿ ಪ್ರಿಯಾ ಕಲ್ಲಬ್ಬೆ, ಪ್ರಕಾಶಕರಾದ ರಾಧಾಕೃಷ್ಣ ಕೌಂಡಿನ್ಯ, ಪ್ರಾಂತ ಸಂಚಾಲಕ ನಾರಾಯಣ ಶೇವರೆ ಹಾಗೂ ಇನ್ನಿತರರು ಹಾಜರಿದ್ದರು.