ಶಿರಸಿ: ದೇವರ ಚಿಂತನೆಯು ಯಾವುದೇ ಸಮಸ್ಯೆ ತರುವುದಿಲ್ಲ. ನಿತ್ಯವೂ ದೇವರ ಚಿಂತನೆ, ಜಪ, ಭಜನೆ, ಪೂಜೆ ಮಾಡುವದನ್ನು ರೂಢಿಸಿಕೊಳ್ಳಬೇಕು ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿಗಳು ನುಡಿದರು.
ಸೋಂದಾ ಸ್ವರ್ಣವಲ್ಲೀ ಮಠದಲ್ಲಿ ಸಂಕಲ್ಪಸಿದ ಚಾತುರ್ಮಾಸ್ಯ ವ್ರತಾಚರಣೆ ವೇಳೆ ಭಂಡಾರಿ ಸಮಾಜದಿಂದ ಪಾದ ಪೂಜೆ, ಭಿಕ್ಷಾ ಸೇವೆ ಸ್ವೀಕರಿಸಿ ಆಶೀರ್ವಚನ ನುಡಿದರು. ನಿಜವಾದ ನೆಮ್ಮದಿಯಿಂದ ಬದುಕಲು ಒಳ್ಳೆಯ ಉಪಾಯಗಳನ್ನು ಹೊರಗಡೆ ಹುಡುಕುವದು ಬೇಡ. ನಮ್ಮೊಳಗೇ ಅದನ್ನು ಹುಡುಕಿಕೊಳ್ಳಬೇಕು. ದಿನಾಲೂ ಸ್ವಲ್ಪ ಹೊತ್ತು ದೇವರ ಚಿಂತನೆಯನ್ನು ಮಾಡಬೇಕು. ಉಳಿದ ಚಿಂತನೆಗಳಿಂದ ಸಂತೋಷ ಬಂದರೂ ನಿಜವಾದ ಸಂತೋಷ ದೇವರ ಚಿಂತನೆ ಮತ್ತು ಪೂಜೆಯಿಂದ ಮಾತ್ರ ಸಿಗುತ್ತದೆ ಎಂದರು. ಯಾರಿಗಾದರೂ ವ್ಯವಹಾರಿಕ ಚಿಂತನೆಯಿಂದ ಹೊರಗೆ ಹೋಗಬೇಕು ಅಂತಿದ್ದರೆ ದೇವರ ಕುರಿತಾದ ಭಜನೆ, ಧ್ಯಾನ, ಜಪ ಮಾಡಬೇಕು. ಚಿಂತನೆಯ ಮೂಲಕ ಮನಸ್ಸಿನ ಒಳ ಕೋಣೆಗೆ ಹೋಗಬೇಕು. ಆಗ ಮನುಷ್ಯ ನೆಮ್ಮದಿಯನ್ನು ಕಾಣಲು ಸಾಧ್ಯವಿದೆ ಎಂದರು. ವ್ಯವಹಾರದ ಚಿಂತನೆ ಅನಿವಾರ್ಯವಾದರೂ ಅದರಿಂದ ಸಂತೋಷ ಹುಡುಕಲು ಸಾಧ್ಯವಿಲ್ಲ.
ಮನೆಯಲ್ಲಿ ದೇವರ ಕೋಣೆ, ಹೊರ ಕೋಣೆ ಇದ್ದಂತೇ ಮನಸ್ಸಿನಲ್ಲೂ ಹೊರ ಕೋಣೆ, ಒಳ ಕೋಣೆ ಬೇರೆ ಮಾಡಿಕೊಳ್ಳಬೇಕು. ಮನೆಯಲ್ಲಿ ದೇವರ ಕೋಣೆಯಲ್ಲಿ ವ್ಯವಹಾರ ಮಾತನಾಡುವದಿಲ್ಲ. ಹಾಗೇಯೇ ಹೊರ ಕೋಣೆಯಲ್ಲಿ ವ್ಯವಹಾರ ಮಾತನಾಡುತ್ತಾರೆ. ಹೀಗೆ ದೇವರ ಚಿಂತನೆಯನ್ನೂ ಮನಸ್ಸಿನ ಒಳ ಕೋಣೆಯಲ್ಲಿಯೂ, ಹೊರ ಕೋಣೆಯಲ್ಲಿ ವ್ಯವಹಾರ ಚಿಂತನೆ ಮಾಡಬೇಕು ಎಂದರು. ಒಳ ಕೋಣೆಯಲ್ಲಿ ಬಹು ಲಕ್ಷ ಹಾಕಿ ದೇವರ ಚಿಂತನೆ, ದೇವರ ಉಪಾಸನೆ, ಜಪ, ಭಜನೆ ಮಾಡಬೇಕು. ಒಳ ಕೋಣೆಯಲ್ಲಿ ಯಾವುದೇ ವ್ಯವಹಾರ ಇಟ್ಟುಕೊಳ್ಳಬಾರದು. ಇದು ನಿಜವಾದ ಯೋಗದ ಸೂತ್ರ ಎಂದೂ ನುಡಿದ ಸ್ವರ್ಣವಲ್ಲೀ ಶ್ರೀಗಳು, ದೇವರ ಚಿಂತನೆ ಮಾಡುವಾಗ ಇತರೆ ವಿಷಯದ ಬಗ್ಗೆ ಲಕ್ಷ್ಯ ಹಾಕಬಾರದು ಎಂದೂ ಸಲಹೆ ಮಾಡಿದರು.
ದಿನದ ಕೆಲ ಹೊತ್ತು ದೇವರ ಚಿಂತನೆ ಮಾಡಿದಾಗ ಆಗ ವ್ಯಕ್ತಿಗೆ ನಿದ್ರೆ ಸರಿಯಾಗಿ ಬರುತ್ತದೆ. ಆಗ ಆರೋಗ್ಯ ಚೆನ್ನಾಗಿರುತ್ತದೆ ಎಂದು ಸ್ವಾಮೀಜಿಗಳು ಹೇಳಿದರು. ಸಂಗೀತದಲ್ಲಿ ತಲ್ಲಿನರಾದರೆ ಉಳಿದ ಚಿಂತನೆಗಳು ಬರುವುದಿಲ್ಲ. ಸಂಗೀತದಲ್ಲಿ ಅಳುವ ಮಗು ಕೂಡ ತನ್ನ ಅಳುವನು ನಿಲ್ಲಿಸುತ್ತದೆ. ಪಶುಗಳೂ ತಲ್ಲೀನವಾಗುತ್ತವೆ. ಅಂಥ ಶಕ್ತಿ ಸಂಗೀತಕ್ಕೆ ಇದೆ. ಸಂಗೀತ ಮನಸ್ಸಿಗೆ ಭಕ್ತಿ ಭಾವ ಉದ್ದೀಪನ ಗೊಳಿಸುತ್ತದೆ. ದೇವರಿಗೂ ಇದು ಪ್ರಿಯ. ಅಂಥ ಸೇವೆಯನ್ನು ಬಂಡಾರಿ ಸಮಾಜ ಶ್ರೀ ಮಠದ ಪರಂಪರೆಯದುದ್ದಕ್ಕೂ ಮಾಡುತ್ತಿದೆ. ಶ್ರೀ ಮಠದ ಉತ್ಸವಾದಿಗಳಲ್ಲಿ ಅತ್ಯಂತ ಸುಶ್ರಾವ್ಯವಾಗಿ ವಾದ್ಯವನ್ನು ನುಡಿಸುವದರ ಮೂಲಕ ಒಳ್ಳೆಯ ವಾತಾವರಣ ನಿರ್ಮಿಸುತ್ತದೆ ಎಂದು ಬಣ್ಣಿಸಿದರು.
ಭಂಡಾರಿ ಸಮಾಜದ ಸಂಗೀತ ಸೇವೆ, ಕುಲ ಕಸುಬು ಮುನ್ನಡೆಸುತ್ತಿದ್ದಾರೆ. ಆ ಪರಂಪರೆ ಉಳಿಸಿಕೊಳ್ಳಬೇಕು. ಹೊಸ ಮಕ್ಕಳಿಗೆ ಕಲಿಸಬೇಕು ಎಂದೂ ಸೂಚಿಸಿದರು.
ರಾಜಸ ಗುಣ ಕಡಿಮೆ ಆಗಲು ಸಾತ್ವಿಕ ಆಹಾರ ಬಳಸಬೇಕು. ಸಸ್ಯ ಆಹಾರಿಗಳು ಅನ್ಯಹಾರಿಗಳಾಗುತ್ತಿದ್ದಾರೆ. ಇದು ಆತಂಕ ಹೆಚ್ಚಿಸಿದೆ. ಸಾಂಪ್ರದಾಯಿಕ ಸಸ್ಯಹಾರಿಗಳು ಅನ್ಯ ಆಹಾರಿಗಳಾದರೆ ದೈಹಿಕ, ಮಾನಸಿಕ ಸಮಸ್ಯೆ ಆಗುವ ಅಪಾಯಗಳಿವೆ. ಮಹಾತ್ಮಾ ಗಾಂಧೀಜಿ ಅವರು ಜೀವನದ ಉದ್ದಕ್ಕೂ ಸಸ್ಯಹಾರಿಗಳು ಪಾಲಿಸಿ, ಪ್ರತಿಪಾದಿಸಿಕೊಂಡವರು. ಯಾವುದೇ ವಿಷಯದಲ್ಲೂ ಮಕ್ಕಳು ದಾರಿ ತಪ್ಪಬಾರದು, ಈ ಬಗ್ಗೆ ಪಾಲಕರು ಎಚ್ಚರಿಕೆ ವಹಿಸಬೇಕು ಎಂದರು ನುಡಿದರು.
ಈ ವೇಳೆ ಮಠದ ಆಡಳಿತ ಮಂಡಳಿಯ ಆರ್. ಎಸ್.ಹೆಗಡೆ ಭೈರುಂಬೆ ಮಾತನಾಡಿದರು. ಸಭೆಯಲ್ಲಿ ದತ್ತಾತ್ರಯ ಭಂಡಾರಿ ಸ್ವರ್ಣವಲ್ಲೀ, ಮಂಜುನಾಥ ಭಂಡಾರಿ ಹೊಸಗದ್ದೆ, ಪರಶುರಾಮ ಭಂಡಾರಿ ಮಂಜುಗುಣಿ, ವಿಶ್ವೇಶ್ವರ ಭಂಡಾರಿ ಇತರರು ಇದ್ದರು.