ಕುಮಟಾ : ಶನಿವಾರ ಅಧಿಕಾರಿಗಳ ಸಭೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಟೋಲ್‌ಗಳ ಶುಲ್ಕ ವಸೂಲಾತಿಯನ್ನು ಸ್ಥಗಿತಗೊಳಿಸುವಂತೆ ಸೂಚನೆ ನೀಡಿದರೂ ತಾಲೂಕಿನ ಹೊಳೆಗದ್ದೆ ಟೋಲ್ ನಾಕಾದಲ್ಲಿ ಶುಲ್ಕ ವಸೂಲಿ ಎಂದಿನಂತೆ ಮುಂದುವರೆದಿದೆ.
ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅಪೂರ್ಣಗೊಂಡ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಐಆರ್‌ಬಿ ಹಾಗೂ ರಾಷ್ಟೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜತೆ ಸಭೆ ನಡೆಸಿದ ಸಚಿವ ಮಂಕಾಳ ವೈದ್ಯ ಹಾಗೂ ಕಾರವಾರ ಶಾಸಕ ಸತೀಶ ಶೈಲ್ ಜಿಲ್ಲೆಯ ಜನರು ಟೋಲ್ ಗೆ ಹಣ ಕಟ್ಟುತ್ತಿದ್ದಾರೆ. ಆದರೆ ಕಾಮಗಾರಿಗಳು ಅಪೂರ್ಣವಾಗಿದ್ದು, ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ಜನತೆಯ ಆಶೋತ್ತರಕ್ಕೆ ಸ್ಪಂದಿಸುವ ಹಿತದೃಷ್ಠಿಯಿಂದ ಬೆಲೇಕೇರಿ, ಹೊಳೆಗದ್ದೆ, ಶಿರೂರು ಟೋಲ್‌ಗಳಲ್ಲಿ ಶುಲ್ಕ ಸಂಗ್ರಹಿಸುವುದನ್ನು ಬಂದ್ ಮಾಡಲಾಗುವುದು ಎಂದಿದ್ದರು. ಆದರೆ ಅವರ ಹೇಳಿಕೆಯಂತೆ ನಿಯಮ ಜಾರಿಯಾಗಿಲ್ಲ. ಹೊಳೆಗದ್ದೆ ಟೋಲ್ ನಲ್ಲಿ ಸುಂಕ ವಸೂಲಿ ಎಂದಿನಂತೆ ಸಾಗಿದೆ.
ಉಸ್ತುವಾರಿ ಸಚಿವರಾದ ಮಂಕಾಳ ವೈದ್ಯರವರ ಹೇಳಿಕೆಯನ್ನು ಸ್ವಾಗತಿಸುತ್ತೇನೆ. ಇದು ಜನರ ಪರವಾಗಿಯ ಕಳಕಳಿಯ ಹೇಳಿಕೆ ಎಂದು ನಾನು ಭಾವಿಸುತ್ತೇನೆ. ಕಳೆದ ಎರಡು ವರ್ಷಗಳಿಂದ ಈ ಕುರಿತಾಗಿ ನಾನು ಹೋರಾಟ ಮಾಡಿದ್ದೇನೆ. ಆರು ತಿಂಗಳ ಒಳಗಾಗಿ ಪ್ರಾಜೆಕ್ಟ್ ಕಂಪ್ಲೀಟ್ ಮಾಡುವ ಭರವಸೆಯೊಂದಿಗೆ ಟೋಲ್ ಅನ್ನು ಪ್ರಾರಂಭ ಮಾಡಿದರು, ಇದೀಗ ಮೂರು ವರ್ಷ ಕಳೆದಿದೆ, ಇನ್ನೂ ಸಹ ಕಾಮಗಾರಿ ಪೂರ್ಣಗೊಂಡಿಲ್ಲ. ನಾನು ಈ ಹಿಂದಿನಿಂದಲೂ ಹೋರಾಟ ನಡೆಸುತ್ತಿದ್ದರೂ ಆಗಿನ ಶಾಸಕರು, ಸಚಿವರು, ಸಂಸದರು ಯಾರೂ ನನ್ನನ್ನು ಬೆಂಬಲಿಸಿಲ್ಲ. ಆದರೆ ಈಗಿನ ಸಚಿವರು ಬಡವರ ಪರವಾಗಿ ಇದ್ದಾರೆ. ಸಚಿವರ ಮಾತನ್ನು ಕೇಂದ್ರ ಸರಕಾರ ಹಾಗೂ ಎನ್.ಎಚ್.ಎ.ಐ ಅನುಸರಿಸಬೇಕು. ನಾನು ಸಂಪೂರ್ಣವಾಗಿ ಸಚಿವರ ಬೆಂಬಲಕ್ಕೆ ನಿಂತಿದ್ದು ಈ ಬಗ್ಗೆ ಯಾವುದೇ ಹೋರಾಟಕ್ಕೂ ಅವರ ಜೊತೆಗೆ ತೊಡಗಿಸಿಕೊಳ್ಳುತ್ತೇನೆ – ಸೂರಜ್ ನಾಯ್ಕ ಸೋನಿ, ಜೆ.ಡಿ.ಎಸ್ ಮುಂಖಂಡ.